ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್‌ ಹೊಗಳಿದ ಕಾಂಗ್ರೆಸ್ಸಿಗ ಸಿಂಘ್ವಿ: ಟ್ವಿಟರ್‌ನಲ್ಲಿ ಸಂಚಲನ 

Last Updated 21 ಅಕ್ಟೋಬರ್ 2019, 9:02 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರವಿನಾಯಕ್‌ ದಾಮೋದರ್‌ ಸಾವರ್ಕರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ವಾದಗಳು ನಡೆಯುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್‌ ಮನು ಸಿಂಘ್ವಿ ಅವರು ಸಾವರ್ಕರ್‌ ಅವರನ್ನು ಹೊಗಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಟೀಕೆ, ವ್ಯಂಗ್ಯವನ್ನು ಎದುರಿಸುವಂತಾಗಿದೆ.

ಸೋಮವಾರ ಬೆಳಗ್ಗೆ ಟ್ವಿಟರ್‌ ಮೂಲಕ ಅಭಿಪ್ರಾಯ ಹಂಚಿಕೊಂಡಿರುವ ಸಿಂಘ್ವಿ, ‘ಸಾವರ್ಕರ್‌ ಅವರ ಚಿಂತನೆಗಳ ಬಗ್ಗೆ ನನಗೆ ವೈಯಕ್ತಿವಾಗಿ ನಂಬಿಕೆ ಇಲ್ಲ. ಆದರೆ, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡಿ ಸೆರೆವಾಸ ಅನುಭವಿಸಿದ್ದವರು ಎಂಬ ವಿಚಾರವನ್ನುಪಕ್ಕಕ್ಕೆ ಸರಿಸಲಾಗದು,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸಿಂಘ್ವಿ ಈ ರೀತಿ ಟ್ವೀಟ್‌ ಮಾಡುತ್ತಲೇ ನೆಟ್ಟಿಗರಿಂದ ಅವರು ಟೀಕೆ, ಮೂದಲಿಕೆ, ವ್ಯಂಗ್ಯದ ಮಾತುಗಳನ್ನು ಎದುರಿಸಬೇಕಾಯಿತು.

‘ನೀವೇನಾದರೂ ಆರ್‌ಎಸ್‌ಎಸ್‌ ಅಥವಾ ಬಿಜೆಪಿ ಸೇರುತ್ತೀರಾ?’ ಎಂದು ಒಬ್ಬರು ಪ್ರಶ್ನಿಸಿದರೆ, ಮತ್ತೊಬ್ಬರು ‘ಹಾಗಾದರೆ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್‌ ಏನೂ ಮಾಡಿಲ್ಲ ಎಂದಾಯಿತು,’ ಎಂದು ಸಿಂಘ್ವಿ ಕಾಲೆಳೆದಿದ್ದಾರೆ.

‘ನೀವು ಉದಾತ್ತ ಗುಣ ಹೊಂದಿರುವವರು,’ ಎಂದೂ ಅವರ ಟ್ವೀಟ್‌ಗೆ ಕಮೆಂಟ್‌ಗಳು ಬಂದಿವೆ.

‘ಈ ವ್ಯಕ್ತಿ ಬಿಜೆಪಿಯ ಪರವಾಗಿ ಮಾತನಾಡಲಾರಂಭಿಸಿದ್ದಾರೆ. ರಾಹುಲ್‌ ಗಾಂಧಿ ಅವರು ಎಚ್ಚರಿಕೆಯಿಂದ ಇರಬೇಕು,’ ಎಂದು ಕೆಲವರು ಸಿಂಘ್ವಿ ವಿರುದ್ಧ ಕಿಡಿ ಕಾರಿದ್ದಾರೆ.

ಸಾವರ್ಕರ್‌, ಜ್ಯೋತಿಬಾ ಪುಲೆ, ಸಾವಿತ್ರಿಬಾ ಪುಲೆ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ನೀಡಲು ಮನವಿ ಮಾಡುವುದಾಗಿ ಮಹಾರಾಷ್ಟ್ರ ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಈ ವರೆಗೆ ಹಲವು ಸುತ್ತಿನ ವಾಗ್ಯುದ್ಧಗಳು ನಡೆದಿವೆ.

ಇದೇ ವಿಚಾರವಾಗಿ ಮಾತನಾಡಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ನಾವು ಸಾವರ್ಕರ್‌ ವಿರೋಧಿಗಳಲ್ಲ. ಆದರೆ, ಸಾವರ್ಕರ್‌ ಅವರು ಪ್ರತಿಪಾದಿಸುತ್ತಿದ್ದ ಹಿಂದುತ್ವದ ಮಾದರಿ ನಮಗೆ ಒಪ್ಪಿತವಲ್ಲ,’ ಎಂದು ಹೇಳಿದ್ದರು.

ಇದೇ ವಿಚಾರವಾಗಿ ಕರ್ನಾಟಕದಲ್ಲೂ ಕಾಂಗ್ರೆಸ್‌–ಬಿಜೆಪಿ ನಡುವೆ ವಾಕ್ಸಮರ ನಡೆದಿದೆ. ಅದು ವೈಯಕ್ತಿಕ ಟೀಕೆಯ ಮಟ್ಚಕ್ಕೂ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT