ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ವಾಹನಗಳಿಗೆ ಕಡಿವಾಣ ಸನ್ನಿಹಿತ

2005ಕ್ಕೂ ಮೊದಲು ತಯಾರಾದ ವಾಹನಗಳ ಬಳಕೆ ತಡೆ ನೀತಿ ಸಚಿವ ಸಂಪುಟದ ಮುಂದೆ
Last Updated 29 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ನವದೆಹಲಿ : 15 ವರ್ಷಗಳಿಗಿಂತ ಹಳೆಯ ವಾಹನ ಬಳಕೆ ತಡೆ ನೀತಿಯನ್ನು ಒಪ್ಪಿಗೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗಿದೆ. ಹಾಗಾಗಿ, 2005ಕ್ಕಿಂತ ಹಳೆಯ ವಾಹನಗಳ ನೋಂದಣಿ ಮತ್ತು ಫಿಟ್‌ನೆಸ್‌ (ಅರ್ಹತಾ) ನಿಯಮಗಳು ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಹೊಸ ವಾಹನಗಳಿಗೆ ಹೋಲಿಸಿದರೆ 15 ವರ್ಷಕ್ಕಿಂತ ಹಿಂದೆ ತಯಾರಾದ ವಾಹನಗಳು 10ರಿಂದ 25 ಪಟ್ಟು ಹೆಚ್ಚು ಹೊಗೆ ಉಗುಳುತ್ತವೆ. ಹಾಗಾಗಿ, ಇಂತಹ ವಾಹನ ಬಳಸುವುದನ್ನು ನಿರುತ್ಸಾಹಗೊಳಿಸುವುದು ಈ ನೀತಿಯ ಉದ್ದೇಶ.

ಪ್ರಸ್ತಾವಿತ ನೀತಿಯು ಸಚಿವ ಸಂಪುಟದ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕಳೆದ ವಾರ ಹೇಳಿದ್ದರು.

ವಾಹನಗಳ ಹೊಗೆ ಹೊರಸೂಸುವಿಕೆಗೆ ಸಂಬಂಧಿಸಿ ಹೊಸ ಮಾನದಂಡಗಳು ಜಾರಿಗೆ ಬಂದಿವೆ. ಹಳೆಯ ವಾಹನಗಳು ಈ ಮಾನದಂಡಕ್ಕೆ ಅನುಗುಣವಾಗಿ ಇಲ್ಲ. ಹಳೆಯ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೂ ಅವು ಸೂಸುವ ಹೊಗೆಯು ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಇರುತ್ತದೆ. ಜತೆಗೆ, ಇಂತಹ ವಾಹನಗಳು ರಸ್ತೆ ಸುರಕ್ಷತೆಗೂ ಅಪಾಯಕಾರಿಯಾಗಿ ಎಂದು ಹೇಳಲಾಗುತ್ತಿದೆ.

ಹಳೆಯ ಖಾಸಗಿ ವಾಹನಗಳ ನೋಂದಣಿ ಶುಲ್ಕವನ್ನು ಹೆಚ್ಚಿಸುವುದು ಮತ್ತು ಸಾರಿಗೆ ವಾಹನಗಳ ಅರ್ಹತಾ ಪ್ರಮಾಣಪತ್ರದ ಶುಲ್ಕವನ್ನು ಏರಿಸುವುದು ಪ್ರಸ್ತಾವಿತ ನೀತಿಯಲ್ಲಿ ಇರುವ ಅಂಶಗಳು. ಜತೆಗೆ, ಹಳೆಯ ವಾಹನಗಳ ಬಳಕೆಯನ್ನು ನಿರುತ್ತೇಜಕಗೊಳಿಸುವ ಅಂಶಗಳೂ ಇರಲಿವೆ ಎಂದು ಮೂಲಗಳು ಹೇಳಿವೆ.

ವಾಹನ ಗುಜರಿ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಉಕ್ಕು ಸಚಿವಾಲಯವು ಚಿಂತನೆ ನಡೆಸಿದೆ. ಹಾಗೆಯೇ, ಇಂತಹ ಕೇಂದ್ರಗಳಿಗೆ ಮಾನ್ಯತೆ ನೀಡುವ ವ್ಯವಸ್ಥೆಯನ್ನು ಸಾರಿಗೆ ಸಚಿವಾಲಯವು ಜಾರಿಗೆ ತರಲಿದೆ. ಗುಜರಿಗೆ ಹಾಕಿದ ವಾಹನಗಳ ಬಗೆಗಿನ ಮಾಹಿತಿಯನ್ನೂ ಪಡೆದುಕೊಳ್ಳಲಿದೆ. ಇದರಿಂದ ವಂಚನೆ ತಡೆ ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಅದರ ಮಾಲೀಕರು ಹೊಸ ವಾಹನ ಖರೀದಿಸುವಾಗ ವಿತರಕರು ವಿಶೇಷ ರಿಯಾಯಿತಿ ನೀಡಲಿದ್ದಾರೆ. ಆದರೆ, ಇದಕ್ಕೆ ಮಾನ್ಯತೆ ಪಡೆದ ಗುಜರಿ ಕೇಂದ್ರದ ಪ್ರಮಾಣಪತ್ರ ಅಗತ್ಯ ಎಂಬುದೂ ಪ್ರಸ್ತಾವಿತ ನೀತಿಯಲ್ಲಿ ಇದೆ.

ಸ್ವಯಂಚಾಲಿತ ವಾಹನ ಫಿಟ್‌ನೆಸ್‌ ಕೇಂದ್ರಗಳನ್ನು ಸಾರಿಗೆ ಸಚಿವಾಲಯವು ಎರಡು ವರ್ಷಗಳಲ್ಲಿ ಆರಂಭಿಸಲಿದೆ. ಇಲ್ಲಿ ಮಾನವ ಹಸ್ತಕ್ಷೇಪಕ್ಕೆ ಅವಕಾಶವೇ ಇರುವುದಿಲ್ಲ. ಹಾಗಾಗಿ, ಭ್ರಷ್ಟಾಚಾರಕ್ಕೂ ಅವಕಾಶ ಇಲ್ಲ.

ಹೊಸ ನೀತಿ ಜಾರಿಗೆ ಬಂದ ಬಳಿಕ ಭಾರತವು ವಾಹನ ತಯಾರಿಕೆಯ ಮಹತ್ವದ ಕೇಂದ್ರವಾಗಿ ಹೊರಹೊಮ್ಮಲಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದರಿಂದ ಪುನರ್ಬಳಕೆ ಮಾಡಬಹುದಾದ ಉಕ್ಕು, ಅಲ್ಯುಮೀನಿಯಂ ಮತ್ತು ರಬ್ಬರ್‌ ದೊರೆಯಲಿದೆ. ಇದರಿಂದಾಗಿ, ವಾಹನಗಳ ಬೆಲೆ ಶೇ 20ರಿಂದ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಗಡ್ಕರಿ ಕಳೆದ ವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT