ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಹೊಳೆ: ವೆಲ್ಲೂರು ಚುನಾವಣೆ ರದ್ದು; ಕನಿಮೊಳಿ ನಿವಾಸದ ಮೇಲೆ ಐಟಿ ದಾಳಿ

ತಮಿಳುನಾಡು ಲೋಕಸಭಾ ಚುನಾವಣೆ
Last Updated 16 ಏಪ್ರಿಲ್ 2019, 19:02 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಚುನಾವಣಾ ಆಯೋಗದ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ವೆಲ್ಲೂರು ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ರದ್ದುಪಡಿಸಿದ್ದಾರೆ. ಇದರ ಬೆನ್ನಲೇ ಡಿಎಂಕೆ ನಾಯಕಿ ಕನಿಮೊಳಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

ಚುನಾವಣಾ ಆಯೋಗ 2019ರ ಏಪ್ರಿಲ್‌ 14ರಂದು ಸಲ್ಲಿಸಿರುವ ಶಿಫಾರಸಿನ ಅನ್ವಯ ರಾಷ್ಟ್ರಪತಿ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರದ್ದುಪಡಿಸಿದ್ದಾರೆ ಎಂದು ಚುನಾವಣಾ ಆಯೋಗದ ವಕ್ತಾರ ಹೇಳಿರುವುದಾಗಿ ವರದಿಯಾಗಿದೆ.

ಮತದಾರರನ್ನು ಸೆಳೆಯಲು ಹಣದ ಬಳಕೆಯಾಗಿರುವ ಸಂಬಂಧ ಚುನಾವಣಾ ಆಯೋಗ ವರದಿ ಸಲ್ಲಿಸಿತ್ತು. ಏಪ್ರಿಲ್‌ 18ರಂದು ವೆಲ್ಲೂರು ಕ್ಷೇತ್ರದ ಚುನಾವಣೆ ನಿಗದಿಯಾಗಿತ್ತು. ಕ್ಷೇತ್ರದಲ್ಲಿ ಪರಿಸ್ಥಿತಿಯನ್ನು ಆಧರಿಸಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಹೊಸ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆಯಿದೆ.

ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ ಉಗ್ರಾಣದಲ್ಲಿ ಕಳೆದ ವಾರ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಉಗ್ರಾಣದಲ್ಲಿ ಸುಮಾರು ₹11.5 ಕೋಟಿ ಹಣ ಪತ್ತೆಯಾಗಿತ್ತು. ಹಣದ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ತೆರಿಗೆ ಇಲಾಖೆಯ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.

ರಾಜ್ಯಸಭಾ ಸದಸ್ಯೆ ಕನಿಮೊಳಿ ಅವರ ತೂತ್ತುಕುಡಿ ನಿವಾಸದ ಮೇಲೆ ಮಂಗಳವಾರ ಸಂಜೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್‌ ಸೋದರಿ ಕನಿಮೊಳಿ ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದಾರೆ.

ಐಟಿ ಅಧಿಕಾರಿಗಳ ಕ್ರಮವನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ, ಎಐಎಡಿಎಂಕೆ ಪಕ್ಷಗಳು ಡಿಎಂಕೆ ಅಭ್ಯರ್ಥಿಗಳನ್ನು ಬೆದರಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಹಣ ಹಂಚುತ್ತಿರುವ ವಿಡಿಯೊ ಹರಿದಾಡಿದ ಬಳಿಕವೂ ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂಹಾಗೂ ಅವರ ಪುತ್ರನ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT