ತುರ್ತುಪರಿಸ್ಥಿತಿ ಹೋರಾಟ ಪಠ್ಯವಾಗಲಿ: ಉಪರಾಷ್ಟ್ರಪತಿ

7

ತುರ್ತುಪರಿಸ್ಥಿತಿ ಹೋರಾಟ ಪಠ್ಯವಾಗಲಿ: ಉಪರಾಷ್ಟ್ರಪತಿ

Published:
Updated:

ನವದೆಹಲಿ: ಇಂದಿರಾಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಯ ಕರಾಳ ಶಾಸನದ ವಿರುದ್ಧ ನಡೆದ ಹೋರಾಟಗಳನ್ನು ಹಾಗೂ ಈ ಪ್ರಮುಖ ಕಾಲಘಟ್ಟವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.

ಪ್ರಸಾರ ಭಾರತಿ ಅಧ್ಯಕ್ಷ ಅರಕಲಗೂಡು ಸೂರ್ಯಪ್ರಕಾಶ್ ಅವರು ರಚಿಸಿರುವ ‘ದಿ ಎಮರ್ಜೆನ್ಸಿ- ಇಂಡಿಯನ್ ಡೆಮಾಕ್ರಸೀಸ್ ಡಾರ್ಕೆಸ್ಟ್ ಹವರ್’ ಇಂಗ್ಲಿಷ್ ಕೃತಿಯ ಕನ್ನಡ, ತೆಲುಗು, ಗುಜರಾತಿ ಹಾಗೂ ಹಿಂದಿ ಆವೃತ್ತಿಗಳನ್ನು ಅವರು ಸೋಮವಾರ ಇಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್ ಈ ಸಮಾರಂಭವನ್ನು ಏರ್ಪಡಿಸಿತ್ತು.

ಜನತಂತ್ರ, ಜಾತ್ಯತೀತತೆ, ಸಂವಿಧಾನಕ್ಕೆ ಅಪಾಯ ಒದಗಿದೆ. ಅಸಹಿಷ್ಣುತೆ, ರಾಷ್ಟ್ರವಾದ, ದೇಶಭಕ್ತಿ ಕುರಿತು ಸಲ್ಲದ್ದನ್ನೆಲ್ಲ ಮಾತನಾಡಿ ಭ್ರಮೆ ಸೃಷ್ಟಿಸುವ ಪ್ರಯತ್ನವನ್ನು ಕೆಲವರು ನಡೆಸಿದ್ದಾರೆ. ಆದರೆ ಯಾವುದೇ ಮಂತ್ರಿ, ಪ್ರಧಾನಮಂತ್ರಿ, ರಾಜಕಾರಣಿಯಿಂದಲೂ ಈ ಮೌಲ್ಯಗಳನ್ನು ಹತ್ತಿಕ್ಕುವುದು ಸಾಧ್ಯವಿಲ್ಲ. ಯಾಕೆಂದರೆ ಈ ಮೌಲ್ಯಗಳು ಭಾರತೀಯರಲ್ಲಿ ರಕ್ತಗತವಾಗಿವೆ. ಆತಂಕಪಡುವ ಅಗತ್ಯವಿಲ್ಲ ಎಂದರು.

ಆಹಾರ ಪದ್ಧತಿ ಮತ್ತು ಲವ್ ಜಿಹಾದ್ ಹೆಸರಿನಲ್ಲಿ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ಮತ್ತೊಬ್ಬರ ಹಕ್ಕುಗಳನ್ನು ತುಳಿಯುವ ಪ್ರವೃತ್ತಿಯನ್ನು ತೊರೆಯಬೇಕು. ಈ ನೆಲದಲ್ಲಿ ಜನಿಸಿದ ಎಲ್ಲರಿಗೂ ಎಲ್ಲ ಬಗೆಯ ಸ್ವಾತಂತ್ರ್ಯ ಉಂಟು. ಆದರೆ ಈ ಸ್ವಾತಂತ್ರ್ಯ ನೆಲದ  ಕಾನೂನಿಗೆ ಒಳಪಟ್ಟಿರಬೇಕು. ಮತ್ತೊಬ್ಬರ ನ್ಯಾಯಬದ್ಧ ಹಕ್ಕುಗಳಿಗೆ ಅಡ್ಡಿ ಬರಕೂಡದು. ಯಾವ ವರ್ತನೆಯೂ ಸಂವಿಧಾನದ ಚೌಕಟ್ಟನ್ನು ಉಲ್ಲಂಘಿಸಕೂಡದು. ಈ ಅಂಶವನ್ನು ಸದಾ ನೆನಪಿನಲ್ಲಿಡುವುದು ಬಹು ಮುಖ್ಯ ಎಂದರು.

 ಮುಸ್ಲಿಂಬಹುಳ ಪ್ರದೇಶಗಳಲ್ಲಿ ಬಲವಂತದದಿಂದ, ಪೊಲೀಸ್ ಬಲ ಪ್ರಯೋಗಿಸಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದವರು ಇಂದು ಜಾತ್ಯತೀತ ಮೌಲ್ಯದ ಕುರಿತು ಬೋಧಿಸತೊಡಗಿದ್ದಾರೆ ಎಂದು ಕೃತಿಕಾರ ಅರಕಲಗೂಡು ಸೂರ್ಯಪ್ರಕಾಶ್ ಅವರು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಜೀವಿಸುವ ಹಕ್ಕು ಸೇರಿದಂತೆ ಎಲ್ಲ ರೀತಿಯ ಮಾನವ ಹಕ್ಕುಗಳನ್ನು ತುಳಿಯಲಾಗಿತ್ತು. ಇಂತಹ ಕರಾಳ ಶಾಸನ ಹೇರಿದವರು, ತಮ್ಮ ಅಕೃತ್ಯಕ್ಕಾಗಿ ಈವರೆಗೆ ಕ್ಷಮೆ ಕೋರಿಲ್ಲ ಎಂದರು.

 ಬಂಗಾಳಿ, ಹಿಂದಿ, ಸಂಸ್ಕೃತ, ಮರಾಠಿ ಹಾಗೂ ಒಡಿಯಾ ಭಾಷೆಗಳಿಗೆ ಸೂರ್ಯಪ್ರಕಾಶ್ ಅವರ ಈ ಪುಸ್ತಕವನ್ನು ಅನುವಾದಿಸಿದ್ದು ಸದ್ಯದಲ್ಲೇ  ಬಿಡುಗಡೆ ಮಾಡಲಾಗುವದು ಎಂದು ಪ್ರಕಾಶಕ ಮೇಹುಲ್ ಗಾಂಧಿ ತಿಳಿಸಿದರು. ವಿವೇಕಾಂದ ಇಂಟರ್‌ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ಅರವಿಂದ ಗುಪ್ತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
*
ಯಾರೊಬ್ಬರೂ ಮೌಲ್ಯಗಳ ಮಹಾರಕ್ಷಕರಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುವುದು ಸಲ್ಲದು.
ಎಂ.ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !