ಮಾತುಗಾರನಿಗೆ ಅಡ್ಡಿಯಾದ ಶಿಷ್ಟಾಚಾರ

7
ಮನದಾಳ ಬಿಚ್ಚಿಟ್ಟ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಮಾತುಗಾರನಿಗೆ ಅಡ್ಡಿಯಾದ ಶಿಷ್ಟಾಚಾರ

Published:
Updated:
Deccan Herald

ನವದೆಹಲಿ: ‘ಸಾರ್ವಜನಿಕರ ಸಂಪರ್ಕದಲ್ಲೇ ಅರ್ಧಕ್ಕೂ ಹೆಚ್ಚಿನ ಆಯಸ್ಸು ಕಳೆದವನಿಗೆ ಯಾರೊಂದಿಗೂ ಬೆರೆಯದಂತಹ, ಮಾತನಾಡುವುದಕ್ಕೂ ಅವಕಾಶ ಇಲ್ಲದಂತಹ ಹುದ್ದೆ ದೊರೆತರೆ ಏನಾಗುತ್ತದೆ?

‘ಸ್ಪಷ್ಟವಾಗಿ ಹೇಳಬೇಕೆಂದರೆ, ಹೀಗಾಗಲಿದೆ ಎಂದು ಕೇಳಿದ ತಕ್ಷಣ ಮೊದಲು ದಿಕ್ಕೇ ತೋಚದಂತಾಗುತ್ತದೆ’

ಈ ಪ್ರಶ್ನೆ ಮತ್ತು ಉತ್ತರಗಳೆರಡೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರವು.

ಇಲ್ಲಿನ ಮೌಲಾನಾ ಆಜಾದ್‌ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸೋಮವಾರ ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳ ಪತ್ರಕರ್ತ
ರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ತಮ್ಮ ಎಂದಿನ ಮಾತಿನ ಶೈಲಿಯಲ್ಲೇ ಎಲ್ಲರನ್ನೂ ನಗಿಸಿದ ನಾಯ್ಡು, ತಮ್ಮೊಳಗಿನ ನೋವು– ನಲಿವನ್ನು ಹೊರಹಾಕಿದರು.

‘ರಾಜಕಾರಣ ಎಂಬ ಏಕೈಕ ಕಾರಣದಿಂದಾಗಿ ಸದಾ ಜನರೊಂದಿಗೆ ಬೆರೆಯುತ್ತಿದ್ದ ನಾನು, ಗೌರವಯುತ ಹುದ್ದೆಯಿಂದಾಗಿ ಶಿಷ್ಟಾಚಾರದ ಪಂಜರದಲ್ಲಿ ಬಂದಿಯಾಗಿದ್ದೇನೆ’ ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡರು.

‘ನಮ್ಮದೇ ಮನೆಗೆ ಅಪರೂಪ ಎಂಬಂತೆ ಭೇಟಿ ನೀಡುತ್ತಿದ್ದ ಜೀವನಶೈಲಿ ರೂಢಿಸಿಕೊಂಡವನು ನಾನು. ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಸಚಿವನಾಗಿ ಕಾರ್ಯನಿರ್ವಹಿಸಿ ದ್ದೇನೆ. ದೇಶ– ವಿದೇಶ ಸಂಚರಿಸಿದ್ದೇನೆ. 11 ತಿಂಗಳ ಹಿಂದೆ ಉಪರಾಷ್ಟ್ರ ಪತಿ ಆದಾಗಿನಿಂದ ನನಗೆ ಎಲ್ಲೆಂದರಲ್ಲಿ ಹೋಗಲು ಬಾರದು, ಅನಿಸಿದ್ದನ್ನು ಮಾತನಾಡಲು ಆಗದು’ ಎಂದರು.

‘ನಾನು ಚಪ್ಪಲಿ ಖರೀದಿಸಬೇಕೆಂದರೂ ಅಂಗಡಿಗೆ ಹೋಗುವಂತಿಲ್ಲ. 10ರಿಂದ 15 ಜೊತೆ ಚಪ್ಪಲಿಗಳು ಮನೆಗೇ ಬರುತ್ತವೆ. ಅದರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ನಾನು ಜೋರಾಗಿ ಕೆಮ್ಮಿದರೂ ಮನೆಯಲ್ಲೇ ಇರುವ ನಾಲ್ವರು ವೈದ್ಯರು ಆರೋಗ್ಯ ಪರೀಕ್ಷಿಸುತ್ತಾರೆ. ಪ್ರತಿ ಕೋಣೆಯಲ್ಲೂ ಕೆಂಪು ಬಟನ್‌ ಇರುತ್ತದೆ. ಅದನ್ನು ಒತ್ತಿದರೆ ಸಾಕು ಮುಂದಿನ ಎಂಟು ನಿಮಿಷಗಳಲ್ಲಿ ನಾನು ಏಮ್ಸ್‌ನಲ್ಲಿ ದಾಖಲಾಗಿರುತ್ತೇನೆ’ ಎಂದು ಅವರು ವಿವರ ನೀಡಿದರು.

‘ಸದಾ 24 ಜನ ಭದ್ರತಾ ಸಿಬ್ಬಂದಿ ನಮ್ಮ ಮನೆಯಲ್ಲೇ ಇರುತ್ತಾರೆ. ಯಾವುದೇ ಅಧಿಕೃತ ಕಾರ್ಯಕ್ರಮಗಳಿಗೆ ತೆರಳಬೇಕೆಂದರೂ ನನ್ನೊಂದಿಗೇ ಬರುತ್ತಾರೆ. ನಾನು ಸಾರ್ವಜನಿಕರು ಸಂಚರಿಸುವ ವಿಮಾನಗಳಲ್ಲಿ ತೆರಳುವಂತಿಲ್ಲ. ಖಾಸಗಿ ಹೆಲಿಕಾಪ್ಟರ್‌ ಬಳಸುವಂತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದೇ ರಸ್ತೆ ಮಾರ್ಗವಾಗಿ 30 ಕಿಲೋಮೀಟರ್‌ಗೆ ಹೆಚ್ಚಿನ ದೂರ ಕ್ರಮಿಸುವಂತಿಲ್ಲ. ಮಿಲಿಟರಿ ವಿಮಾನದಲ್ಲೇ ಹೋಗಬೇಕು. ಎಲ್ಲರೂ ಬಂದ ನಂತರವೇ ನಾನು ಕಾರ್ಯಕ್ರಮಗಳಿಗೆ ಹಾಜರಾಗಬೇಕು. ಒಂದು ಅರ್ಥದಲ್ಲಿ ನಾನು ಶಿಷ್ಟಾಚಾರದ ಕೈಗೊಂಬೆ’ ಎಂದು ಅವರು ಎಂದಿನ ಹಾಸ್ಯಭರಿತ ಮಾತಿನ ಶೈಲಿಯಲ್ಲೇ ಹೇಳಿದರು.

‘ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳಿಗೆ ಅನೇಕರು ನನ್ನನ್ನು ಆಹ್ವಾನಿಸುತ್ತಾರೆ. ನಾನು ಹೊರಹೋದರೆ ಅವರಿಗೇ ಹೆಚ್ಚು ಖರ್ಚು. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗೂ ಅನಗತ್ಯ ಕೆಲಸ. ನನ್ನಿಂದಾಗಿ ಜನರಿಗೂ ತೊಂದರೆ. ಹಾಗಾಗಿ ನಮ್ಮ ನಿವಾಸದ ಆವರಣದಲ್ಲಿರುವ ಸಭಾಂಗಣದಲ್ಲೇ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡುತ್ತೇನೆ’ ಎಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗೆಗಿನ ತಮ್ಮ ಪ್ರೀತಿಯನ್ನು ಹೊರಹಾಕಿದರು.

‘ವಿದ್ಯಾರ್ಥಿಗಳೊಂದಿಗೆ ಬೆರೆತು ಅವರೊಂದಿಗೆ ಸಂವಾದ ನಡೆಸಬೇಕು. ನನ್ನ ಅನುಭವವನ್ನು ಹಂಚಿಕೊಳ್ಳಬೇಕು. ಅವರ ಆಲೋಚನೆಗೆ ಕಸುವು ತುಂಬಬೇಕು ಎಂದೇ ವಿಶ್ವವಿದ್ಯಾಲ ಯಗಳಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಹೇಳಿದರು.

‘ನನ್ನ ಮೊದಲ ಆದ್ಯತೆ ರೈತರಿಗೆ’

‘ಅನ್ನ ನೀಡುವ ರೈತ ದೇಶದ ಆಸ್ತಿ. ನಮ್ಮ ಮನೆಯಲ್ಲಿ ಅವರಿಗೇ ಮೊದಲ ಆದ್ಯತೆ. ಉಪರಾಷ್ಟ್ರಪತಿಯಾದ ಮೊದಲ ದಿನ 150 ಜನ ರೈತರು ಭೇಟಿಯಾದರು. ಶಿಷ್ಟಾಚಾರದ ಪ್ರಕಾರ ಐವರು ಮಾತ್ರ ನನ್ನನ್ನು ಭೇಟಿ ಮಾಡಲು ಅವಕಾಶವಿತ್ತು. ರೈತರನ್ನು ನಿರಾಸೆಗೊಳಿಸಬಾರದು ಎಂದು ಎಲ್ಲರನ್ನೂ ಒಳಗೆ ಕರೆದೆ. ನಿತ್ಯ ಮನೆಗೆ ಅನೇಕ ರೈತರು ಬರುತ್ತಾರೆ. ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ನಮ್ಮ ಮನೆಯ ಬಾಗಿಲು ಸದಾ ಅವರಿಗೆ ತೆರೆದಿರುತ್ತದೆ’ ಎಂದು ಅವರು ಕೃಷಿಕರ ಮಹತ್ವದ ಕುರಿತು ಕೊಂಡಾಡಿದರು.

ಬರಹ ಇಷ್ಟವಾಯಿತೆ?

 • 50

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !