ಮಂಗಳವಾರ, ಅಕ್ಟೋಬರ್ 15, 2019
22 °C

ಕಮರೊಸ್‌, ಸಿಯೇರಾ ಲಿಯೋನ್‌ಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Published:
Updated:

ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗುರುವಾರದಿಂದ ಈ ತಿಂಗಳ 14ರವರೆಗೆ ಆಫ್ರಿಕಾ ಖಂಡದ ಕಮರೊಸ್‌ ಮತ್ತು ಸಿಯೇರಾ ಲಿಯೋನ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ಎರಡು ದೇಶಗಳಿಗೆ ಪ್ರಥಮ ಬಾರಿಗೆ ಉಪರಾಷ್ಟ್ರಪತಿ ನೇತೃತ್ವದ ಉನ್ನತ ಮಟ್ಟದ ನಿಯೋಗ ಭೇಟಿ ನೀಡುತ್ತಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಆಫ್ರಿಕಾ ಖಂಡದ ವಿವಿಧ ದೇಶಗಳೊಂದಿಗೆ ಭಾರತದ ಸಂಬಂಧ ಸಾಕಷ್ಟು ಸುಧಾರಿಸಿದೆ. ಉಪರಾಷ್ಟ್ರಪತಿಯವರ ಈ ಭೇಟಿಯಿಂದ ಈ ದೇಶಗಳ ಜತೆಗಿನ ಬಾಂಧವ್ಯ ಮತ್ತಷ್ಟು ವೃದ್ಧಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕೇಂದ್ರದ ಪಶುಸಂಗೋಪನಾ ಸಚಿವ ಸಂಜೀವ್‌ ಕುಮಾರ್ ಬಲ್ಯಾನ್, ರಾಜ್ಯಸಭಾ ಸದಸ್ಯ ರಾಮ್‌ ವಿಚಾರ್‌ ನೇತಮ್‌, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಪತ್ರಕರ್ತರು ನಿಯೋಗದಲ್ಲಿದ್ದಾರೆ.

ವೆಂಕಯ್ಯ ನಾಯ್ಡು ಅವರು ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಶುಕ್ರವಾರ (ಅ.11) ಕಮರೊಸ್‌ ಅಧ್ಯಕ್ಷ ಅಝೊಲಿ ಅಸೊಮನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಇದೇ ವೇಳೆ ಅವರು ಕಮರೊಸ್‌ ಸಂಸತ್ತಿನ ಅಧಿವೇಶನ ಉದ್ದೇಶಿಸಿ ಮಾತನಾಡುವರು.

ಶನಿವಾರ ಸಿಯೇರಾ ಲಿಯೋನ್‌ಗೆ ತೆರಳಿ, ಅಲ್ಲಿನ ಅಧ್ಯಕ್ಷ ಬ್ರಿಗೇಡಿಯರ್‌ (ನಿವೃತ್ತ) ಜೂಲಿಯಸ್‌ ಮಾಡ ವೊನಿ ಬಯೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಉಭಯ ದೇಶಗಳಲ್ಲಿ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸುವರು.

Post Comments (+)