ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಉತ್ತಮಪಡಿಸಿಕೊಂಡ ನೀರಜ್‌ ಚೋಪ್ರಾ

ಡೈಮಂಡ್‌ ಲೀಗ್‌: ಜಾವೆಲಿನ್‌ ಎಸೆತದಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಕ್ರೀಡಾಪಟು
Last Updated 5 ಮೇ 2018, 19:29 IST
ಅಕ್ಷರ ಗಾತ್ರ

ದೋಹಾ: ಇಲ್ಲಿ ನಡೆಯುತ್ತಿರುವ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ನಲ್ಲಿ ಭಾರತದ ನೀರಜ್‌ ಚೋಪ್ರಾ ಅವರು ಜಾವೆಲಿನ್‌ ಎಸೆತದಲ್ಲಿ ನಾಲ್ಕನೇ ಸ್ಥಾನಗಳಿಸಿದ್ದಾರೆ. 87.43 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ತಮ್ಮ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 86.47 ಮೀಟರ್ಸ್‌ ದೂರ ಜಾವೆಲಿನ್‌ ಎಸೆದಿದ್ದ ನೀರಜ್‌ ಚಿನ್ನದ ಪದಕ ಜಯಿಸಿದ್ದರು. ಕಾಮನ್‌ವೆಲ್ತ್‌ನಲ್ಲಿ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. 2016ರ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಅವರು 86.48 ಮೀಟರ್ಸ್‌ ಜಾವೆಲಿನ್‌ ಎಸೆದಿದ್ದರು.

ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡ ನೀರಜ್‌ ಆ ಮೂಲಕ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಜಾಕೊಬ್‌ ವಾಡ್ಲೆಜ್‌ ಅವರನ್ನು ಹಿಂದಿಕ್ಕಿದರು. ವಾಡ್ಲೆಜ್‌ ಅವರಿಗೆ ಜಾವೆಲಿನ್‌ ಅನ್ನು 86.67 ಮೀಟರ್‌ ದೂರ ಎಸೆಯಲು ಮಾತ್ರ ಸಾಧ್ಯವಾಯಿತು. ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನೀರಜ್ ಅವರು ತಮ್ಮ ಮೊದಲ ಮತ್ತು ಎರಡನೇ ಪ್ರಯತ್ನಗಳಲ್ಲಿ ಕ್ರಮವಾಗಿ 81.17 ಮೀಟರ್ಸ್‌ ಹಾಗೂ 87.43 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು. ಮುಂದಿನ ಮೂರು ಪ್ರಯತ್ನಗಳಲ್ಲಿ ತಪ್ಪೆಸಗಿದರು. ಆರನೇ ಪ್ರಯತ್ನದಲ್ಲಿ 81.06  ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು.

ಈ ಸ್ಪರ್ಧೆಯಲ್ಲಿ ಜರ್ಮನಿಯ ಥಾಮಸ್‌ ರೋಹ್ಲರ್‌, ಜೊಹಾನ್ನಸ್‌ ವೆಟ್ಟರ್‌ ಹಾಗೂ ಆ್ಯಂಡ್ರಿಯಾಸ್‌ ಹಾಫ್‌ಮನ್‌ ಅವರು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಜಯಿಸಿದರು. ಥಾಮಸ್‌ ಅವರು 91.78 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಪದಕಕ್ಕೆ ಕೊರಳೊಡ್ಡಿದರು. ವೆಟ್ಟರ್‌ ಹಾಗೂ ಹಾಫ್‌ಮನ್‌ ಅವರು ಕ್ರಮವಾಗಿ 91.56 ಮೀಟರ್ಸ್‌ ಹಾಗೂ 90.08 ಮೀಟರ್ಸ್‌ ದೂರ ಜಾವೆಲಿನ್‌ ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT