ಗುರುವಾರ , ನವೆಂಬರ್ 14, 2019
27 °C
‘ಸುಪ್ರೀಂ’ ನಿಗಾದಲ್ಲಿ ಪಾರದರ್ಶಕ ಪ್ರಕ್ರಿಯೆ l ಸ್ಥಾಪಿತ ಹಿತಾಸಕ್ತಿಗಳಿಂದ ಗೊಂದಲ:ರಾಜ್‌ನಾಥ್‌ ಸಿಂಗ್‌

ಎನ್‌ಆರ್‌ಸಿ: ತಾರತಮ್ಯ ಆರೋಪ ತಳ್ಳಿ ಹಾಕಿದ ಕೇಂದ್ರ

Published:
Updated:

ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕೃತ ಕರಡು ಪಟ್ಟಿಯಲ್ಲಿ (ಎನ್‌ಆರ್‌ಸಿ) ಯಾವುದೇ ತಾರತಮ್ಯ ವಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಅರ್ಹ ಭಾರತೀಯ ನಾಗರಿಕರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಸಾಧ್ಯವೇ ಇಲ್ಲ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಈಗ ಪ್ರಕಟವಾಗಿರುವುದು ಕರಡು ಪಟ್ಟಿಯೇ ಹೊರತು ಅಂತಿಮ ವರದಿ ಅಲ್ಲ. ಹೆಸರು ಕೈಬಿಟ್ಟು ಹೋದವರಿಗೆ ಅಗತ್ಯ ದಾಖಲೆ ಸಲ್ಲಿಸಿ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಅಂತಿಮ ಪಟ್ಟಿ ಕೂಡ ಪಾರದರ್ಶಕವಾಗಿರಲಿದ್ದು, ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಥಾಪಿತ ಹಿತಾಸಕ್ತಿಗಳ ಕೈವಾಡ: ಎನ್‌ಆರ್‌ಸಿ ಸಂಬಂಧ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೇಶದಲ್ಲಿ ಭೀತಿ ಮತ್ತು ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಸಿಂಗ್‌ ಕಿಡಿ ಕಾರಿದ್ದಾರೆ.

ಸಂಸದರ ಬಂಧನ: ಕೇಂದ್ರ ಗೃಹ ಸಚಿವ ಸಮರ್ಥನೆ
ಸಿಲ್ಚರ್‌ ವಿಮಾನ ನಿಲ್ದಾಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರನ್ನು ವಶಕ್ಕೆ ಪಡೆದ ಅಸ್ಸಾಂ ಸರ್ಕಾರದ ಕ್ರಮವನ್ನು ರಾಜನಾಥ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕೃತ ಕರಡು (ಎನ್‌ಆರ್‌ಸಿ) ಬಿಡಗಡೆ ಬಳಿಕ ಅಸ್ಸಾಂನಲ್ಲಿ ನಿಷೇಧಾಜ್ಞೆ ಹೇರಿದ ಸಂದರ್ಭದಲ್ಲಿ ಟಿಎಂಸಿ ಸಂಸದರ ಭೇಟಿಯು ಶಾಂತಿ ಕದಡಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದನ್ನು ಆಧರಿಸಿ ಸಂಸದರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಿಂದಲೇ ಹಿಂದಿರುಗುವಂತೆ ಅಧಿಕಾರಿಗಳು ಮನವಿ ಮಾಡಿದರೂ ಕಿವಿಗೊಡದ ಟಿಎಂಸಿ ಸಂಸದರು ಗಲಾಟೆ ಮಾಡಿದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಬೇಕಾಯಿತು ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.

ಸಿಲ್ಚರ್‌ ವಿಮಾನ ನಿಲ್ದಾಣದಿಂದ ನವದೆಹಲಿ ಅಥವಾ ಕೋಲ್ಕತ್ತಕ್ಕೆ ತೆರಳಲು ತಕ್ಷಣಕ್ಕೆ ವಿಮಾನ ಇರಲಿಲ್ಲ. ಇದರಿಂದಾಗಿ ವಿಮಾನ ನಿಲ್ದಾಣದ ಅತಿಥಿ ಗೃಹದಲ್ಲಿ ರಾತ್ರಿ ಕಳೆದ ಸಂಸದರು ಮುಂಜಾನೆ ಕೋಲ್ಕತ್ತಕ್ಕೆ ತೆರಳಿದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗಿದೆ ಎಂದು ಸಿಂಗ್‌ ಮಾಹಿತಿ ನೀಡಿದರು.

***

‘ಅಘೋಷಿತ ತುರ್ತು ಪರಿಸ್ಥಿತಿ’
ನಾಗರಿಕರಿಗೆ ದೇಶದಲ್ಲಿ ಮುಕ್ತವಾಗಿ ಸಂಚರಿಸಲು ನಿರ್ಬಂಧ ಹೇರಲಾಗಿದ್ದು, ದೇಶದಲ್ಲಿ ಅಘೋಷಿಸಿತ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಟಿಎಂಸಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಾಸ್ತವ ಸ್ಥಿತಿಯ ಅಧ್ಯಯನಕ್ಕೆ ಟಿಎಂಸಿ ಸಂಸದರು ಅಸ್ಸಾಂಗೆ ತೆರಳಿದ್ದರೇ ಹೊರತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಅಲ್ಲ ಎಂದರು.

***

ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸಲು ಸಜ್ಜಾದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹೆದರಿ ಬಿಜೆಪಿ ನೇತೃತ್ವದ ಸರ್ಕಾರ ಟಿಎಂಸಿ ಸಂಸದರನ್ನು ವಶಕ್ಕೆ ಪಡೆದಿದೆ
ಕಲ್ಯಾಣ್‌ ಬ್ಯಾನರ್ಜಿ, ಟಿಎಂಸಿ ಸಂಸದ

***

ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಇಲ್ಲವೆಂದ ಮಾತ್ರಕ್ಕೆ ಸರ್ಕಾರ ಯಾರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಿಲ್ಲ
ರಾಜನಾಥ್ ಸಿಂಗ್‌,  ಕೇಂದ್ರ ಗೃಹ ಸಚಿವ

***

ಯಾವುದೇ ವ್ಯಕ್ತಿಯನ್ನು ಅಕ್ರಮ ವಲಸಿಗ ಎಂದು ಕರೆಯುವುದು ಸರಿಯಲ್ಲ. ಉತ್ತಮ ಜೀವನ ಅರಸಿ ಆಫ್ರಿಕಾದಿಂದ ಏಷ್ಯಾಕ್ಕೆ ಬಂದವರು ಅಕ್ರಮ ವಲಸಿಗರಲ್ಲ
ತಸ್ಲೀಮಾ ನಸ್ರೀನ್‌,ಬಾಂಗ್ಲಾದೇಶಿ ಲೇಖಕಿ

ಪ್ರತಿಕ್ರಿಯಿಸಿ (+)