ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹ

ನಿವೃತ್ತ ಸೇನಾಧಿಕಾರಿಗಳ ಪತ್ರದ ಆಧಾರದಲ್ಲಿ ರಾಜಕೀಯ ಜಟಾಪಟಿ
Last Updated 12 ಏಪ್ರಿಲ್ 2019, 18:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣಾ ಲಾಭಕ್ಕಾಗಿ ಸೇನೆಯ ಸಾಧನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ತೆಗದುಕೊಳ್ಳಬೇಕೆಂದು ಚುನಾವಣಾ ಆಯೋಗವನ್ನುಕಾಂಗ್ರೆಸ್‌ ಮತ್ತು ಎಡಪಕ್ಷಗಳು ಆಗ್ರಹಿಸಿವೆ.

ಸೇನೆಯ ದುರ್ಬಳಕೆಗೆ ಕಡಿವಾಣ ಹಾಕಿ ಎಂದು ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಬರೆದಿರುವ ಪತ್ರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.

‘ಆಡಳಿತ ಪಕ್ಷವೇ ಸೇನಾಪಡೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದರಿಂದ ಸೇನಾಪಡೆಗಳ ಸ್ಥೈರ್ಯ ಕುಗ್ಗುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಖಂಡಿತ ಸುಧಾರಿಸುವುದಿಲ್ಲ. ಆಡಳಿತ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ, ಇಂಥದ್ದಕ್ಕೆ ಕಡಿವಾಣ ಹಾಕಬಹುದು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ಚುನಾವಣಾ ಭಾಷಣಗಳಲ್ಲಿ ಹಲವು ಬಾರಿ ಸೇನೆ, ಬಾಲಾಕೋಟ್ ಕಾರ್ಯಾಚರಣೆಗಳ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಗೆ ಮತ ನೀಡಿದರೆ ಅದು ಸೇನೆಗೆ ಮತ ನೀಡಿದಂತೆ ಎಂದು ಚುನಾವಣಾ ರ‍್ಯಾಲಿಯಲ್ಲಿ ಮೋದಿ ಘೋಷಿಸಿದ್ದಾರೆ. ಇದೆಲ್ಲಾ ನಿಲ್ಲಬೇಕು’ ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ
ಆಗ್ರಹಿಸಿದ್ದಾರೆ.

ಈ ಪತ್ರವು ನಕಲಿ. ಅಂಥದ್ದು ನಡೆದೇ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆದರೆ, ‘ನಾನು ಪತ್ರಕ್ಕೆ ಸಹಿ ಮಾಡಿದ್ದೇನೆ ಎಂದು ನಿವೃತ್ತ ಮೇಜರ್ ಜನರಲ್ ಒಬ್ಬರು ಹೇಳಿದ್ದಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ನಿರ್ಮಲಾ ಪ್ರತಿಕ್ರಿಯೆ ನೀಡಿಲ್ಲ.

ಸೇನೆ ಸರ್ಕಾರ ಹೇಳಿದ್ದನ್ನು ಮಾಡುವ ಸಾಧನವಷ್ಟೆ. ಯಾರೋ ಕೆಲವರು ಏನನ್ನೋ ಹೇಳಿ, ಅದನ್ನು ಸುದ್ದಿ ಮಾಡಿದ್ದಾರೆ. ಈ ಪತ್ರ ಬರೆದ ಜಂಟಲ್‌ಮನ್ ಯಾರೋ ಗೊತ್ತಿಲ್ಲ.
ಜನರಲ್ ಎಸ್‌.ಎಫ್‌ ರಾಡ್ರಿಗಸ್, ನಿವೃತ್ತ ಸೇನಾ ಮುಖ್ಯಸ್ಥ

ಸೇನಾಪಡೆಗಳ ದುರ್ಬಳಕೆ ಯತ್ನಗಳು ಮೋದಿಯಿಂದ ನಡೆಯುತ್ತಲೇ ಇವೆ. ಇದರ ವಿರುದ್ಧ ನಿವೃತ್ತ ಸೇನಾಧಿಕಾರಿಗಳು ದನಿ ಎತ್ತಿದ್ದಾರೆ-ಸೀತಾರಾಂ ಯೆಚೂರಿ,ಸಿಪಿಎಂ ಪ್ರಧಾನ ಕಾರ್ಯದರ್ಶಿ.

ಪತ್ರದ ವಿವರ

‘ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಜೀ,

‘ಸೇನೆಯು ಗಡಿಯಾಚೆ ನಡೆಸಿದ ಕಾರ್ಯಾಚರಣೆಗಳನ್ನುರಾಜಕೀಯ ಪಕ್ಷಗಳು ಚುನಾವಣಾ ರ‍್ಯಾಲಿಗಳಲ್ಲಿ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ನಮ್ಮ ಸೇನೆಯನ್ನು ‘ಮೋದೀಜಿ ಅವರ ಸೇನೆ’ ಎಂದು ಕರೆದಿದ್ದಾರೆ. ಚುನಾವಣಾ ರ‍್ಯಾಲಿಗಳಲ್ಲಿ ಪ್ರಚಾರಕರು ಸೇನಾ ಸಮವಸ್ತ್ರಗಳನ್ನು ಧರಿಸಿಕೊಂಡಿದ್ದಾರೆ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸೇನೆಯ ಹೆಸರು ಹೇಳಿಕೊಂಡು ಮತ ಯಾಚಿಸಲಾಗುತ್ತಿದೆ. ಇದರಿಂದ ಸೇನೆಯ ಜಾತ್ಯತೀತ ಮತ್ತು‍ಪ್ರಜಾಸತ್ತಾತ್ಮಕ ತತ್ವಗಳಿಗೆ ಧಕ್ಕೆಯಾಗುತ್ತಿದೆ. ಸೇವೆಯಲ್ಲಿರುವವರು ಈ ಮಾತು ಹೇಳುವಂತಿಲ್ಲ. ಹೀಗಾಗಿ ನಿವೃತ್ತರಾದ ನಾವು ಈ ಮಾತು ಹೇಳುತ್ತಿದ್ದೇವೆ.

‘ಸೇನಾ ಕಾರ್ಯಾಚರಣೆಗಳ ಶ್ರೇಯವನ್ನು ರಾಜಕೀಯ ವ್ಯಕ್ತಿಗಳು ಪಡೆದುಕೊಳ್ಳುವುದು ಒಪ್ಪತಕ್ಕದ್ದಲ್ಲ. ಈ ಬಗ್ಗೆ ನಿವೃತ್ತ ಸೇನಾಧಿಕಾರಿಯೊಬ್ಬರು ಚುನಾವಣಾ ಆಯೋಗಕ್ಕೆ ಈ ಹಿಂದೆಯೇ ಪತ್ರ ಬರೆದಿದ್ದಾರೆ. ಆ ಅಧಿಕಾರಿಯನ್ನು ನಾವು ಅಭಿನಂದಿಸುತ್ತೇವೆ. ಆ ಪತ್ರವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿತ್ತು. ‘ರಾಜಕೀಯಕ್ಕೆ ಸೇನಾಪಡೆಗಳ ಸಾಧನೆಗಳನ್ನು ಬಳಸಿಕೊಳ್ಳಬೇಡಿ’ ಎಂದು ರಾಜಕೀಯ ಪಕ್ಷಗಳಿಗೆ ಸೂಚನೆಯನ್ನೂ ನೀಡಿತ್ತು. ಆದರೆ ಆ ಸೂಚನೆಯಿಂದ ಪರಿಣಾಮವಾದಂತೆ ಕಾಣುತ್ತಿಲ್ಲ. ಹೀಗಾಗಿ ನಿಮಗೆ ಪತ್ರ ಬರೆದಿದ್ದೇವೆ.

‘ರಾಜಕೀಯ ಉದ್ದೇಶಗಳು ಮತ್ತು ಕಾರ್ಯಸೂಚಿಗಳಿಗಾಗಿ ಸೇನೆ, ಸೇನೆಯ ಸಮವಸ್ತ್ರ, ಚಿಹ್ನೆ, ಸೇನಾ ಸಾಧನೆ/ಕಾರ್ಯಾಚರಣೆಗಳನ್ನು ಬಳಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT