ಸಶಸ್ತ್ರ ರಾಮನವಮಿಗೆ ಸಂಘರ್ಷ

ಬುಧವಾರ, ಏಪ್ರಿಲ್ 24, 2019
31 °C
ಬಿಜೆಪಿ–ವಿಎಚ್‌ಪಿ ಭಿನ್ನಮತ

ಸಶಸ್ತ್ರ ರಾಮನವಮಿಗೆ ಸಂಘರ್ಷ

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಮ ನವಮಿಯ ಸಂದರ್ಭದಲ್ಲಿ ಶಸ್ತ್ರ (ಬಿಲ್ಲು–ಬಾಣ) ಹಿಡಿದುಕೊಂಡು ರ‍್ಯಾಲಿ  ಆಯೋಜಿಸುವ ವಿಚಾರದಲ್ಲಿ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ ನಡುವೆ ಭಿನ್ನಮತ ತಲೆದೋರಿದೆ.

‘ನಾವು ಶಸ್ತ್ರಸಹಿತ ರ‍್ಯಾಲಿನಡೆಸುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದ್ದರೆ, ‘ಶಸ್ತ್ರಗಳನ್ನು ಹಿಡಿದೇ ರ‍್ಯಾಲಿ ನಡೆಸುತ್ತೇವೆ’ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಕೆಲ ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ರಾಮನವಮಿ ರ‍್ಯಾಲಿಯ ಸಂದರ್ಭದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಕಳೆದ ವರ್ಷ ಹಿಂಸಾಚಾರದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು.

‘ರಾಮನವಮಿ ಸಂದರ್ಭದಲ್ಲಿ ನಡೆಸುವ ರ‍್ಯಾಲಿಯಲ್ಲಿ ಶಸ್ತ್ರಗಳನ್ನು ಹಿಡಿದುಕೊಳ್ಳುವುದು ಸಂಪ್ರದಾಯವಲ್ಲ. ಹೀಗೆ ಮಾಡುವುದರಿಂದ ಅನಗತ್ಯ ವಿವಾದ ಸೃಷ್ಟಿಯಾಗುತ್ತದೆ. ಆದ್ದರಿಂದ ಅಂಥ ರ‍್ಯಾಲಿಗಳನ್ನು ನಡೆಸದಂತೆ ನಾವು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ನಮ್ಮದು ರಾಜಕೀಯ ಸಂಘಟನೆ ಅಲ್ಲ. ಆದ್ದರಿಂದ ಲೋಕಸಭಾ ಚುನಾವಣೆಗೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಸಚ್ಚೀಂದ್ರನಾಥ್‌ ಸಿನ್ಹಾ ಹೇಳಿದ್ದಾರೆ.

ತಾವು ಆಯೋಜಿಸುವ ರ‍್ಯಾಲಿಗಳಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್ತು ರಾಜ್ಯದ ಬಿಜೆಪಿ ನಾಯಕರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಆದರೆ ಬಿಜೆಪಿ ನಾಯಕರು ಇಂಥ ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದು, ವಿಎಚ್‌ಪಿಯ ಸೂಚನೆಗೆ ಮಹತ್ವ ನೀಡುವುದಿಲ್ಲ ಎಂದು ತಿಳಿದು ಬಂದಿದೆ..

‘ನಮ್ಮ ಪಕ್ಷವು ಸಂಪ್ರದಾಯದಂತೆ ರಾಮನವಮಿ ರ್‍ಯಾಲಿಯನ್ನು ಆಯೋಜಿಸಲಿದೆ. ಎಲ್ಲೆಲ್ಲಿ ಶಸ್ತ್ರಸಹಿತವಾದ ರ‍್ಯಾಲಿ ಗಳು ನಡೆಯುತ್ತಿದ್ದವೋ, ಅಲ್ಲೆಲ್ಲ ಈ ಬಾರಿಯೂ ಸಂಪ್ರದಾಯದಂತೆ ರ‍್ಯಾಲಿಗಳು ನಡೆಯುವವು. ಪಕ್ಷದ ಕಾರ್ಯಕರ್ತರು ಅವುಗಳಲ್ಲಿ ಪಾಲ್ಗೊಳ್ಳುವರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ತೀರ್ಮಾನಕ್ಕೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್‌ ಪಕ್ಷವು, ‘ಪರಿಷತ್ತು ನಮ್ಮಿಂದ ಪಾಠ ಕಲಿಯುತ್ತಿದೆ’ ಎಂದಿದೆ.

‘ಟಿಎಂಸಿ ಅಹಿಂಸಾ ತತ್ವದಲ್ಲಿ ವಿಶ್ವಾಸ ಇಟ್ಟಿದೆ. ರಾಮನವಮಿ ವೇಳೆ ನಾವು ಶಸ್ತ್ರಾಸ್ತ್ರಗಳಿಲ್ಲದೆ ರ‍್ಯಾಲಿಗಳನ್ನು ಆಯೋಜಿಸುತ್ತಿದ್ದೇವೆ. ನಮ್ಮಿಂದ ಪ್ರೇರಿತವಾಗಿ ಪರಿಷತ್ತು ಈ ವರ್ಷ ಶಸ್ತ್ರರಹಿತ ರ‍್ಯಾಲಿಗೆ ಮುಂದಾಗಿದೆ’ ಎಂದು ಪಕ್ಷದ ನಾಯಕ ಸಾಧನ್‌ ಪಾಂಡೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !