ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಮಂದಿರಕ್ಕಾಗಿ ಕೆತ್ತನೆ ಕೆಲಸ ಚುರುಕು

ಕರಸೇವಕಪುರದಲ್ಲಿ ಕಾರ್ಯಾಗಾರ: ಶಿಲೆ ಶುಚಿ ಕೆಲಸದಲ್ಲಿ ಮುಸ್ಲಿಮರು ಭಾಗಿ
Last Updated 6 ನವೆಂಬರ್ 2019, 10:52 IST
ಅಕ್ಷರ ಗಾತ್ರ

ಲಖನೌ: ರಾಮ ಮಂದಿರ–ಬಾಬರಿ ಮಸೀದಿ ವಿಚಾರವಾಗಿ ಸದ್ಯದಲ್ಲೇ ತೀರ್ಪು ಬರಬಹುದೆಂಬ ಭಾವನೆ ದಟ್ಟವಾಗಿದ್ದು, ವಿಶ್ವ ಹಿಂದೂ ಪರಿಷತ್ತಿನವರು (ವಿಎಚ್‌ಪಿ) ಮಂದಿರ ನಿರ್ಮಾಣಕ್ಕೆ ಬೇಕಾದ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಕೆತ್ತನೆ ಮಾಡಿರುವ ಕಲ್ಲುಗಳನ್ನು ಬಳಸಲು ನಿರ್ಧರಿಸಿರುವ ವಿಎಚ್‌ಪಿಯವರು ಈಚೆಗೆ ಕೆತ್ತನೆ ಕೆಲಸಗಳನ್ನು ತ್ವರಿತಗೊಳಿಸಿದ್ದಾರೆ. ಅಯೋಧ್ಯೆಯ ಕರಸೇವಕಪುರದಲ್ಲಿರುವ ಕಾರ್ಯಾಗಾರದಲ್ಲಿ ಕಲ್ಲುಗಳನ್ನು ಶುಚಿಗೊಳಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯದವರು ಸಹ ನೆರವಾಗುತ್ತಿದ್ದಾರೆ.

‘ಸುಪ್ರೀಂ ಕೋರ್ಟ್‌ ಈಗ ಪ್ರತಿನಿತ್ಯ ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲೇ ತೀರ್ಪು ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ರಾಜಸ್ಥಾನದಿಂದ ಇನ್ನಷ್ಟು ಕಲ್ಲುಗಳು ಕಾರ್ಯಾಗಾರಕ್ಕೆ ಬರಲಿದ್ದು, ಆನಂತರ ಕೆತ್ತನೆ ಕೆಲಸ ಪೂರ್ಣಪ್ರಮಾಣದಲ್ಲಿ ನಡೆಯಲಿದೆ’ ಎಂದು ವಿಎಚ್‌ಪಿ ನಾಯಕರೊಬ್ಬರು ಹೇಳಿದ್ದಾರೆ.

2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಇಲ್ಲಿಗೆ ಹಲವು ಲೋಡ್‌ಗಳಷ್ಟು ಕಲ್ಲುಗಳು ಬಂದಿವೆ. ಸಾಧ್ಯವಾದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸುವ ಸಲುವಾಗಿ ವಿಎಚ್‌ಪಿಯವರು ಇನ್ನಷ್ಟು ಕುಶಲಕರ್ಮಿಗಳನ್ನು ಇಲ್ಲಿಗೆ ಕರೆತರುವ ನಿರೀಕ್ಷೆ ಇದೆ.

ಮುಸ್ಲಿಂ ಸಮುದಾಯದ ಸುಮಾರು 25 ಮಂದಿ ಸೋಮವಾರ ಕಾರ್ಯಾಗಾರಕ್ಕೆ ಬಂದು ಶುಚೀಕರಣ ಕೆಲಸದಲ್ಲಿ ತೊಡಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಸಮರ್ಥಿಸುತ್ತಿರುವ ಬಬ್ಲು ಖಾನ್‌ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ.

ವಿವಾದಿತ ಜಾಗದ ಮಾಲೀಕತ್ವವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವ ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ‘ಅದು (ಕೆತ್ತನೆ ಕೆಲಸ) ಒಟ್ಟಾರೆ ಪ್ರಕರಣದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುತ್ತೇವೆ’ ಎಂದು ಫಿರ್ಯಾದಿದಾರರಲ್ಲಿ ಒಬ್ಬರಾದ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ.

ಹಬೀಬುದ್ದೀನ್‌ ತುಸಿ
ಹಬೀಬುದ್ದೀನ್‌ ತುಸಿ

ಬಾಬರನ ವಂಶಸ್ಥನಿಂದ ಚಿನ್ನದ ಇಟ್ಟಿಗೆ!
ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕಾಗಿ ಚಿನ್ನದ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡುವುದಾಗಿ ಮೊಘಲರ ಕೊನೆಯ ದೊರೆ ಬಹಾದುರ್‌ ಶಾ ಜಫರ್‌ ಅವರ ವಂಶಸ್ಥ ಎನ್ನಲಾದ ಪ್ರಿನ್ಸ್‌ ಹಬೀಬುದ್ದೀನ್‌ ತುಸಿ ಹೇಳಿದ್ದಾರೆ.

‘1529ರಲ್ಲಿ ಬಾಬರಿ ಮಸೀದಿ ನಿರ್ಮಾಣವಾಗುವ ಸಂದರ್ಭದಲ್ಲಿ ದೊರೆಯಾಗಿದ್ದ ಚಕ್ರವರ್ತಿ ಬಾಬರನ ವಂಶಸ್ಥನಾಗಿರುವುದರಿಂದ ಅಯೋಧ್ಯೆಯ ವಿವಾದಿತ ಭೂಮಿಯ ಮೇಲೆ ಮೊದಲ ಅಧಿಕಾರ ನನಗಿದೆ. ಸುಪ್ರೀಂ ಕೋರ್ಟ್‌ ಆ ಭೂಮಿಯನ್ನು ನನಗೆ ಹಸ್ತಾಂತರಿಸಬೇಕು. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಇತ್ತು ಎಂದು ನಂಬಿರುವವರ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದ್ದರಿಂದ ಸುಪ್ರೀಂ ಕೋರ್ಟ್‌ ಆ ಭೂಮಿಯನ್ನು ನನಗೆ ಕೊಟ್ಟರೆ ಅದನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ದಾನವಾಗಿ ನೀಡುತ್ತೇನೆ’ ಎಂದು ತುಸಿ ಹೇಳಿದ್ದಾರೆ.

ಭೂಮಿಯ ಮಾಲೀಕತ್ವದ ವಿಚಾರವಾಗಿ ತುಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಅದನ್ನು ಕೋರ್ಟ್‌ ಇನ್ನೂ ಮಾನ್ಯ ಮಾಡಿಲ್ಲ. ‘ಕೋರ್ಟ್‌ ಮೊರೆ ಹೋಗಿರುವ ಯಾರ ಬಳಿಯೂ ಭೂಮಿಗೆ ಸಂಬಂಧಿಸಿದ ದಾಖಲೆಗಳಿಲ್ಲ. ಆದರೆ ನನ್ನ ಬಳಿ ಇವೆ’ ಎಂದು ತುಸಿ ಹೇಳಿದ್ದಾರೆ.

ತುಸಿ ಅವರು ಅಯೋಧ್ಯೆಗೆ ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದಾರೆ. ಕಳೆದ ವರ್ಷ ಭೇಟಿ ನೀಡಿದ್ದಾಗ ರಾಮನ ‘ಚರಣ ಪಾದುಕೆ’ಗಳನ್ನು ತಲೆಯ ಮೇಲಿಟ್ಟು, ಮಂದಿರವನ್ನು ನಾಶಮಾಡಿರುವುದಕ್ಕಾಗಿ ಸಾಂಕೇತಿಕವಾಗಿ ಹಿಂದೂಗಳ ಕ್ಷಮೆ ಯಾಚಿಸಿ, ಭೂಮಿಯನ್ನು ಕೊಡುವ ವಾಗ್ದಾನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT