ಮಂಗಳವಾರ, ಮೇ 26, 2020
27 °C

ಮುಸ್ಲಿಮರಿಗೆ ಮೀಸಲಾತಿ ಹೋರಾಟಕ್ಕೆ ವಿಎಚ್‌ಪಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ತೀವ್ರವಾಗಿ ಖಂಡಿಸಿದೆ.

ಶಿವಸೇನಾ ನೇತೃತ್ವದ ಸರ್ಕಾರವು ಹಿಂದೂಗಳನ್ನಷ್ಟೇ ಅಲ್ಲದೆ, ಛತ್ರಪತಿ ಶಿವಾಜಿ ಮತ್ತು ಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರನ್ನೂ ವಂಚಿಸುತ್ತಿದೆ ಎಂದು ವಿಎಚ್‌ಪಿ ಆರೋಪಿಸಿದೆ. ಈ ಸಂಬಂಧ ಕಾನೂನು ಜಾರಿಗೆ ಬಿಡುವುದಿಲ್ಲ ಎಂದಿದೆ.

ಸರ್ಕಾರವು ತನ್ನ ನಿರ್ಧಾರವನ್ನು ಜಾರಿಗೊಳಿಸಲು ಮುಂದಾದಲ್ಲಿ, ಬೀದಿಗಿಳಿದು ಹೋರಾಡುವ ಎಚ್ಚರಿಕೆ ನೀಡಿರುವ ಬಲಪಂಥೀಯ ಸಂಘಟನೆ, ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದೆ.

‘ಶಿವಸೇನಾಕ್ಕೆ ಹಿಂದುತ್ವ ಎಂಬುದು ಕೇವಲ ನಾಲಗೆ ಮೇಲೆ ಮಾತ್ರ ಇದೆ. ಮುಸ್ಲಿಮರಿಗೆ ಮೀಸಲಾತಿ ನೀಡುವುದು ಅಸಾಂವಿಧಾನಿಕ’ ಎಂದು ವಿಎಚ್‌ಪಿ ಮುಖಂಡ ಸುರೇಂದ್ರ ಜೈನ್ ಹೇಳಿದ್ದಾರೆ.

ಮುಸ್ಲಿಮರಿಗೆ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಕಳೆದ ವಾರ ಘೋಷಿಸಿದ್ದರು. ಆದರೆ ಶಿವಸೇನಾ ಮುಖಂಡ ಏಕನಾಥ ಶಿಂಧೆ ಇಂತಹ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದರು. ಮೀಸಲಾತಿ ಸಂಬಂಧ ನಿಲುವು ಸ್ಪಷ್ಟಪಡಿಸುವಂತೆ ಶಿವಸೇನಾಕ್ಕೆ ಬಿಜೆಪಿ ಆಗ್ರಹಿಸಿತ್ತು. ಕಾನೂನು ಅಡೆತಡೆಗಳನ್ನು ನಿವಾರಿಸಿ ಮೀಸಲಾತಿ ಜಾರಿಗೊಳಿಸುವುದಾಗಿ ನವಾಬ್ ಮಲಿಕ್ ಹೇಳಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು