ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲಟ್‌ಗಳ ವಿರುದ್ಧ ಎಫ್‌ಐಆರ್‌

ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ದೋಷ
Last Updated 27 ಏಪ್ರಿಲ್ 2018, 4:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುರುವಾರ ದೆಹಲಿಯಿಂದ ಹುಬ್ಬಳ್ಳಿಗೆ ಬಂದಿಳಿದ ವಿಶೇಷ ಖಾಸಗಿ ವಿಮಾನದಲ್ಲಿ (ವಿಟಿ–ಎವಿಎಚ್) ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗೆ ಸಂಬಂಧಪಟ್ಟಂತೆ, ಇಲ್ಲಿನ ಗೋಕುಲ ರೋಡ್‌ ಪೊಲೀಸ್ ಠಾಣೆಯಲ್ಲಿ ಪೈಲಟ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ವಿಮಾನ ಇಳಿಯುವಾಗ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ, ಈ ಕುರಿತು ತನಿಖೆ ನಡೆಸಬೇಕು’ ಎಂದು ರಾಹುಲ್ ಗಾಂಧಿ ಅವರ ಆಪ್ತ ಸಹಾಯಕ ಕೌಶಲ್ ವಿದ್ಯಾರ್ಥಿ ಅವರು, ಡಿಜಿಪಿ ನೀಲಮಣಿ ಎನ್. ರಾಜು ಅವರಿಗೆ ಪತ್ರ ಬರೆದಿದ್ದಾರೆ. ಇದರ ಪ್ರತಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಅವರು ಗೋಕುಲ ರೋಡ್ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಅದನ್ನೇ ದೂರಾಗಿ
ಸ್ವೀಕರಿಸಲಾಗಿದೆ.

ಇದರ ಆಧಾರದ ಮೇಲೆ ಇಬ್ಬರು ಪೈಲಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ರೇಣುಕಾ ಸುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ದೂರಿನಲ್ಲಿ ಏನಿದೆ: ರಾಹುಲ್ ಗಾಂಧಿ, ಎಸ್‌ಜಿಪಿ ಅಧಿಕಾರಿಗಳಾದ ರಾಮಪ್ರೀತ್, ರಾಹುಲ್ ರವಿ ಹಾಗೂ ರಾಹುಲ್ ಗೌತಮ್ ಅವರಿದ್ದ ವಿಮಾನ ದೆಹಲಿಯಿಂದ ಬೆಳಿಗ್ಗೆ 9.20ಕ್ಕೆ ಟೇಕಾಫ್ ಆಗಿ, 11.45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಬೇಕಿತ್ತು.

ಮಾರ್ಗಮಧ್ಯೆ, 10.45ರ ಸುಮಾರಿಗೆ ವಿಮಾನ ಒಮ್ಮೆಲೆ ಅಲುಗಾಡಿದಂತಾಗಿ ಎಡಭಾಗಕ್ಕೆ ಬಾಗಿದೆ. ಅಲ್ಲದೆ, ವಿಮಾನದಲ್ಲಿ ಜೋರಾದ ಕರ್ಕಶ ಶಬ್ದ ಕೇಳಿ ಬಂದಿದೆ. ಆಟೊಪೈಲಟ್‌ನಲ್ಲಿ ಕಾಣಿಸಿಕೊಂಡ ದೋಷವೇ ಈ ರೀತಿ ಆಗಲು ಕಾರಣ ಎಂದು ಹೇಳಲಾಗಿದೆ.

ಬೆಳಿಗ್ಗೆ 11.25ರ ಹೊತ್ತಿಗೆ ಹುಬ್ಬಳ್ಳಿ ಸಮೀಪ ಬಂದ ವಿಮಾನವು ಎರಡು ಸಲ ಇಳಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಮೂರನೇ ಬಾರಿ ವಿಮಾನ ಹೊಯ್ದಾಡುತ್ತಾ, ಕರ್ಕಶ ಶಬ್ದದೊಂದಿಗೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.

ಈ ಘಟನೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಬಂದ ವಿಮಾನವು ಸದ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿದೆ.

ಪ್ರಧಾನಿ ಕರೆ: ಈ ವಿಷಯ ಗೊತ್ತಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್‌ ಗಾಂಧಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT