ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮವರೇ ಸಿ.ಎಂ ಆಗಿದ್ದಾರೆ; ಸಿಗಲಿದೆ ಸಮಸ್ಯೆಗೆ ಪರಿಹಾರ

l ಭೈರಿದೇವರಕೊಪ್ಪ ವ್ಯಾಪ್ತಿಯ ಜನರ ವಿಶ್ವಾಸದ ನುಡಿ l ರಾತ್ರಿಯಲ್ಲಿ ಬೆಳಗದ ವಿದ್ಯುತ್‌ ದೀಪಗಳಿಂದ ಜನರ ಪರದಾಟ l ಒಳಚರಂಡಿ ವ್ಯವಸ್ಥೆ ಅ‍ಪೂರ್ಣ
Last Updated 1 ಜೂನ್ 2018, 9:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಬಡಾವಣೆಯಲ್ಲೇ ಬಾಡಿಗೆ ಮನೆ ಹೊಂದಿರುವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಈ ಕಾರಣಕ್ಕಾದರೂ ನಮ್ಮ ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ...’

ಹೀಗೆ ವಿಶ್ವಾಸದ ಮಾತುಗಳನ್ನಾಡುತ್ತಾರೆ ಇಲ್ಲಿನ ಭೈರಿದೇವರ ಕೊಪ್ಪದ ಮಾಯಕಾರ ಕಾಲೊನಿ, ಕುಮಾರಪಾರ್ಕ್‌, ನಿಸರ್ಗ ಲೇಔಟ್‌, ನಂದೀಶ್ವರ ನಗರ, ಸಂಗೊಳ್ಳಿ ರಾಯಣ್ಣ ನಗರ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ಶಿವಶಂಕರ ಪಾರ್ಕ್‌, ಉಳವೇಶ್ವರ ನಗರ, ಶಿವ–ಪಾರ್ವತಿ ನಗರದ ಜನರು.

ಮಾಯಕಾರ ಕಾಲೊನಿಯಲ್ಲಿ ಕುಮಾರಸ್ವಾಮಿಯವರ ಬಾಡಿಗೆ ಮನೆ (ಏಕದಂತ ಕೃಪಾ) ಇದ್ದು, ಅದರ ನೆಪದಲ್ಲಾದರೂ ನಮ್ಮ ಭಾಗಕ್ಕೆ ಕನಿಷ್ಠ ಮೂಲಸೌಲಭ್ಯ ಸಿಗಲಿದೆ ಎನ್ನುವ ಆಶಾಭಾವನೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಹಾಳುಬಿದ್ದ ರಸ್ತೆಯಲ್ಲೇ ಕುಮಾರಸ್ವಾಮಿ ಕೂಡ ಒಂದೂವರೆ ವರ್ಷದಿಂದ ಓಡಾಡುತ್ತಿದ್ದರು. ಕೇವಲ ರಸ್ತೆ ಹಾಳಾಗಿರು
ವುದು ಮಾತ್ರವಲ್ಲ; 8 ರಿಂದ 10 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ. ಇದಕ್ಕೆ ಕುಮಾರಸ್ವಾಮಿ ಶಾಶ್ವತವಾದ ಪರಿಹಾರ ಕಲ್ಪಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎನ್ನುತ್ತಾರೆ ಈ ಭಾಗದ ಜನರು.

ಒಳಚರಂಡಿ ವ್ಯವಸ್ಥೆಯಂತೂ ಅಪೂರ್ಣವಾಗಿಯೇ ಉಳಿದಿದೆ. ಗಟಾರ ಇಲ್ಲದ ಕಾರಣ ತ್ಯಾಜ್ಯ ನೀರು ಎಲ್ಲಂದರಲ್ಲಿ ನಿಂತಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಹಂದಿಗಳ ಕಾಟ ಹೇಳತೀರದಾಗಿದೆ. ಒಟ್ಟಿನಲ್ಲಿ ಸಮಸ್ಯೆಗಳ ಸಂಕೋಲೆಯಿಂದ ಕುಮಾರಸ್ವಾಮಿ ಬಿಡಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎನ್ನುತ್ತಾರೆ ಮಲ್ಲಿಕಾರ್ಜುನ ನಗರದ ಮಂಜುಳಾ ಅಂಬಡಗಟ್ಟಿ.

ಭೈರಿದೇವರಕೊಪ್ಪ– ಗಾಮನಗಟ್ಟಿ ಮಾರ್ಗದಲ್ಲೇ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ‘ಓಂಶಾಂತಿ’ ಆಶ್ರಮ, ಸ್ವಾಮಿ ವಿವೇಕಾನಂದ ಶಾಲೆಯೂ ಇದ್ದು, ನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ.

ಭೈರಿದೇವರಕೊಪ್ಪದಲ್ಲಿ ಪಿ.ಬಿ.ರಸ್ತೆಗೆ ಸಂಪರ್ಕಿಸುವಲ್ಲೇ ಡಾಂಬರ್‌, ಜಲ್ಲಿ ಕಿತ್ತು ಹೋಗಿ ಬೃಹತ್‌ ಗುಂಡಿಗಳು
ಬಿದ್ದಿವೆ. ಮಳೆ ಬಂತೆಂದರೆ ಕೆಸರುಮಯವಾಗುವ ಈ ರಸ್ತೆಯಲ್ಲಿ ಜನ, ವಾಹನ ಸಂಚಾರ ದುಸ್ತರವಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದಿದ್ದು, ಓಡಾಡುವವರಿಗೆ ತಾಗುತ್ತವೆ. ಬೀದಿ ದೀಪಗಳು ಕೂಡ ರಾತ್ರಿ ವೇಳೆ ಸರಿಯಾಗಿ ಬೆಳಗುತ್ತಿಲ್ಲ.

ರಾಜ್ಯದ ಪಾಲು ಬರಲಿಲ್ಲ: ರಸ್ತೆ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ, ‘ಭೈರಿದೇವರಕೊಪ್ಪದಿಂದ ಗಾಮನಗಟ್ಟಿ ವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆಯೇ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಿಂದ ₹ 10 ಕೋಟಿ ಬಿಡುಗಡೆಯಾಗಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತಂದು ಆದಷ್ಟು ಶೀಘ್ರ ರಸ್ತೆ, ಗಟಾರ ನಿರ್ಮಾಣ ಮಾಡಿಸಲಾಗುವುದು’ ಎಂದರು.

ರಸ್ತೆ, ಗಟಾರ, ಉದ್ಯಾನ ನಿರ್ಮಿಸಿ

ಭೈರಿದೇವರಕೊಪ್ಪ– ಗಾಮನಗಟ್ಟಿ ರಸ್ತೆಗೆ ಹೊಂದಿಕೊಂಡಂತೆ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಪ್ರದೇಶ 2 ವಿಧಾನಸಭಾ ಕ್ಷೇತ್ರಗಳಿಗೆ ಸೇರಿರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಹೀಗಾಗಿ ‘ನಮ್ಮವರೇ’ ಮುಖ್ಯಮಂತ್ರಿಯಾಗಿರುವ ಕಾರಣ ರಸ್ತೆ, ನೀರು, ಗಟಾರ, ಉದ್ಯಾನ ನಿರ್ಮಾಣವಾಗುವ ವಿಶ್ವಾಸ ಇದೆ
ಅಮೃತ್‌ ಮಾಮರಡಿ, ಸಂಗೊಳ್ಳಿ ರಾಯಣ್ಣನಗರ

**
ಸಂಚಾರವೇ ದುಸ್ತರ

ಈ ಮಾರ್ಗದಲ್ಲಿ ಲಾರಿಗಳು ಹೆಚ್ಚು ಸಂಚರಿಸುತ್ತವೆ. ಜೊತೆಗೆ ಗ್ಯಾಸ್‌ ಪೈಪ್‌ಲೈನ್‌, ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ, ಯುಜಿಡಿ ಕಾಮಗಾರಿಗಾಗಿ ರಸ್ತೆಯನ್ನು ಪದೇ ಪದೇ ಅಗೆಯುತ್ತಾರೆ. ಆದರೆ, ಒಮ್ಮೆಯೂ ದುರಸ್ತಿ ಮಾಡಿಲ್ಲ. ಮುಖ್ಯರಸ್ತೆಯೇ ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ. ಇದಕ್ಕೆ ಪರಿಹಾರ ಕಲ್ಪಿಸಿದರೆ ನಾವೆಲ್ಲ ಚಿರಋಣಿ
ಮಹಮ್ಮದ್‌ ರಫೀಕ್‌ ನದಾಫ್‌, ಮಲ್ಲನಗೌಡ ಚಾಳ್‌

**
ಮಳೆಯಲ್ಲಿ ಕೆಸರು, ಬೇಸಿಗೆಯಲ್ಲಿ ದೂಳು

ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ನೀರು ನಿಂತು ಸಂಪೂರ್ಣ ಕೆಸರುಮಯವಾಗುತ್ತದೆ. ಬೇಸಿಗೆಯಲ್ಲಿ ದೂಳು ಅಧಿಕ
ವಾಗುತ್ತದೆ. ಇದರಿಂದ ಆಸುಪಾಸಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಬಹಳಷ್ಟು ಜನ ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪಾಲಿಕೆಗೆ ಈ ಬಗ್ಗೆ ಹತ್ತಾರು ಬಾರಿ ಹೇಳಿದರೂ ಸ್ಪಂದಿಸಿಲ್ಲ
ನೀತಾ ಕುರ್ತುಕೋಟಿ, ಸಂಗೊಳ್ಳಿ ರಾಯಣ್ಣ ನಗರ

**
ಕುಡಿಯುವ ನೀರು ಕೊಡಿ

ಭೈರಿದೇವರ ಕೊಪ್ಪ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಬಹಳ ಇದೆ. ಮಹಾನಗರ ಪಾಲಿಕೆಯಿಂದ ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ನಾಲಾದಲ್ಲಿ ಕೊಳಚೆ ನೀರು ನಿಲ್ಲುತ್ತಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ, ಸೊಳ್ಳೆಗಳ ಕಾಟವೂ ಅಧಿಕವಾಗಿದೆ. ವಿದ್ಯುತ್‌ ಪೂರೈಕೆಯೂ ಸರಿಯಾಗಿಲ್ಲ
– ಮಂಜುಳಾ ಅಂಬಡಗಟ್ಟಿ, ಮಲ್ಲಿಕಾರ್ಜುನ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT