7
ಧುಳೆ ಪ್ರಕರಣದ ವಿವರ ಬಹಿರಂಗಪಡಿಸಿದ ಮಹಾರಾಷ್ಟ್ರ ಪೊಲೀಸರು

ತಿರುಚಿದ ವಿಡಿಯೊಗಳಿಗೆ ಅಮಾಯಕರು ಬಲಿ

Published:
Updated:

ಮುಂಬೈ:  ಧುಳೆಯಲ್ಲಿ ಮಕ್ಕಳ ಕಳ್ಳರು ಎಂಬ ಶಂಕೆಯಲ್ಲಿ ಐವರು ಅಮಾಯಕರ ಹತ್ಯೆಗೆ ಕಾರಣವಾದ ಐದೂ ವಿಡಿಯೊಗಳನ್ನು ತಿರುಚಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ಅಸಲಿ ವಿಡಿಯೊಗಳಲ್ಲಿ ಏನಿತ್ತು ಮತ್ತು ತಿರುಚಲಾದ ವಿಡಿಯೊಗಳಲ್ಲಿ ಏನಿದೆ ಎಂಬುದರ ಬಗ್ಗೆಯೂ ಅವರು ವಿವರ ಹಂಚಿಕೊಂಡಿದ್ದಾರೆ. 

ವಿಡಿಯೊಗಳ ಅಸಲಿ ವಿವರ

1. ಬುರ್ಖಾಧಾರಿ
ಬುರ್ಖಾ ಧರಿಸಿರುವ ಮಹಿಳೆಯೊಬ್ಬರು ನಡೆದು ಹೋಗುವ ದೃಶ್ಯ ಇದರಲ್ಲಿದೆ. ಇದು ಬೆಂಗಳೂರಿನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾವೊಂದರಲ್ಲಿ ದಾಖಲಾಗಿರುವ ದೃಶ್ಯ. ಮಹಿಳೆ ಮಕ್ಕಳನ್ನು ಅಪಹರಿಸುವ, ಕದಿಯುವ ದೃಶ್ಯ ಇದರಲ್ಲಿಲ್ಲ. ಆದರೆ ಇದು ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲಾ ಕೇಂದ್ರದ ವಿಡಿಯೊ ಎಂದು ಹೇಳಲಾಗಿದೆ ಮತ್ತು ಅದರಲ್ಲಿ ಕಾಣುವ ಮಹಿಳೆ ಮಕ್ಕಳ ಕಳ್ಳಿ ಎನ್ನಲಾಗಿದೆ

2. ಬೈಕ್‌ನಲ್ಲಿ ಮಗುವಿನ ಅಪಹರಣ
ಬೀದಿಯೊಂದರಲ್ಲಿ ಕ್ರಿಕೆಟ್ ಆಡುತ್ತಿರುವ ಮಗುವೊಂದನ್ನು ಬೈಕ್‌ ಒಂದರಲ್ಲಿ ಇಬ್ಬರು ಅಪಹರಿಸುವ ದೃಶ್ಯ ಇದರಲ್ಲಿದೆ. ಆದರೆ ಇದು ಪಾಕಿಸ್ತಾನದ ಕರಾಚಿಯ ಬೀದಿಯೊಂದರ ದೃಶ್ಯವಾಗಿದೆ. ಆದರೆ ಅದೂ ನಿಜವಾದ ಅಪಹರಣವಲ್ಲ. ಆ ಬೈಕ್‌ ಸವಾರರು ಮಗುವನ್ನು ವಾಪಸ್ ಬಿಟ್ಟುಹೋಗುವ ದೃಶ್ಯವೂ ಅಸಲಿ ವಿಡಿಯೊದಲ್ಲಿದೆ. ಮಕ್ಕಳ ಕಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದು ತಯಾರಿಸಿದ ಜಾಹೀರಾತಿನ ವಿಡಿಯೊ ಅದು. ‘ಕರಾಚಿಯಲ್ಲಿ ಮಗುವೊಂದನ್ನು ಅಪಹರಿಸಲು ಕೆಲವೇ ಕ್ಷಣ ಸಾಕು. ನಿಮ್ಮ ಮಗುವಿನ ಬಗ್ಗೆ ಎಚ್ಚರವಹಿಸಿ’ ಎಂಬ ಪೋಸ್ಟರ್‌ ಅನ್ನು ಆ ಬೈಕ್‌ ಸವಾರರು ತೋರಿಸುವ ದೃಶ್ಯವೂ ಅದರಲ್ಲಿದೆ

ಆದರೆ ದುಳೆಯಲ್ಲಿ ಹಂಚಿಕೆಯಾದ ವಿಡಿಯೊದಲ್ಲಿ ‘ಇದು ಧುಳೆಯ ಪರಿಸ್ಥಿತಿ’ ಎಂದು ನಮೂದಿಸಲಾಗಿದೆ. ಜತೆಗೆ ಮಗುವನ್ನು ಅಪಹರಿಸುವ ದೃಶ್ಯವನ್ನು ಮಾತ್ರ ಉಳಿಸಿಕೊಂಡು, ಉಳಿದ ಭಾಗವನ್ನು ಕತ್ತರಿಸಲಾಗಿದೆ

 3. ಪೋಲಿಸರ ರಕ್ಷಣೆಯಲ್ಲಿ ಬಾಲಕ
ಪೊಲೀಸ್ ಜೀಪಿನಲ್ಲಿರುವ ಬಾಲಕ ‘ನನ್ನನ್ನು ಅವರು ಎತ್ತಿಕೊಂಡು ಹೋದರು’ ಎಂದು ಹೇಳುವ ದೃಶ್ಯ ಇದರಲ್ಲಿದೆ. ಇದು ಮಹಾರಾಷ್ಟ್ರದ ಬುಲಧಾಣಾ ಜಿಲ್ಲೆಯಲ್ಲಿ ನಡೆದ ಘಟನೆ. ಎರಡು ಕುಟುಂಬಗಳ ಹಣಕಾಸು ವ್ಯವಹಾರದ ಗಲಾಟೆಯಲ್ಲಿ ಈ ಬಾಲಕನನ್ನು ಒಂದು ಕುಟುಂಬದವರು ಎತ್ತಿಕೊಂಡು ಹೋಗಿರುತ್ತಾರೆ. ಅದೆಲ್ಲವನ್ನೂ ಬಾಲಕ ವಿವರಿಸುವ ದೃಶ್ಯ ಅಸಲಿ ವಿಡಿಯೊದಲ್ಲಿದೆ

ಆದರೆ ‘ನನ್ನನ್ನು ಅವರು ಎತ್ತಿಕೊಂಡು ಹೋದರು’ ಎಂಬ ದೃಶ್ಯವನ್ನು ಮಾತ್ರ ಉಳಿಸಿಕೊಂಡು, ಮತ್ತೆಲ್ಲವನ್ನೂ ಕತ್ತರಿಸಲಾಗಿದೆ. ಜತೆಗೆ ಇದು ಧುಳೆಯ ಘಟನೆ ಎಂದು ಮಾಹಿತಿಯನ್ನೂ ತಿರುಚಲಾಗಿದೆ

 4. ಮಕ್ಕಳ ಹತ್ಯೆ
ಮಕ್ಕಳನ್ನು ಹೊಡೆದು ಕೊಲ್ಲುವ ದೃಶ್ಯವಿರುವ ಈ ವಿಡಿಯೊ ಸಿರಿಯಾಕ್ಕೆ ಸಂಬಂಧಿಸಿದ್ದು. ಅಲ್ಲಿನ ಆಂತರಿಕ ಸಂಘರ್ಷದ ಕಾರಣ ನಡೆದ ಹತ್ಯೆಗಳ ದೃಶ್ಯವಿರುವ ವಿಡಿಯೊ ಅದು. ಅಲ್ಲದೆ ಅದು ಸುಮಾರು ಒಂದು ವರ್ಷ ಹಳೆಯದು

‘ಮಹಾರಾಷ್ಟ್ರದ ಹಲವೆಡೆ ಮಕ್ಕಳ ಅಂಗಾಂಗಗಳನ್ನು ಕದಿಯಲು ಅವರನ್ನು ಕೊಲ್ಲಲಾಗಿದೆ’ ಎಂದು ಮಾಹಿತಿ ತಿರುಚಿದ ವಿಡಿಯೊ ಧುಳೆಯಲ್ಲಿ ಹರಿದಾಡಿದೆ

 5.ನೇ ವಿಡಿಯೊ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ ವಿಡಿಯೊದಲ್ಲಿ ಬಾಲಕನೊಬ್ಬ ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಿದ್ದಾನೆ. ಹೀಗಾಗಿ ಇದು ಮಹಾರಾಷ್ಟ್ರದ ವಿಡಿಯೊ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಜನಜಾಗೃತಿ

* ಜನಜಾಗೃತಿಗಾಗಿ ಎಲ್ಲಾ ಹಳ್ಳಿಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಭೇಟಿ ಮಾಡಿ ‘ಈ ವಿಡಿಯೊಗಳೆಲ್ಲಾ ಸುಳ್ಳು’ ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ

* ಸುಳ್ಳು ಸುದ್ದಿಗಳು, ತಿರುಚಿದ ವಿಡಿಯೊಗಳ ಬಗ್ಗೆ ಮಾಹಿತಿ ಇರುವ ಭಿತ್ತಿಪತ್ರಗಳನ್ನು ಹಳ್ಳಿಗಳಲ್ಲಿ ಅಂಟಿಸಲಾಗುತ್ತಿದೆ

* ವದಂತಿಗಳನ್ನು ಹರಡಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ

* ವದಂತಿಗಳು ಗಮನಕ್ಕೆ ಬಂದ ತಕ್ಷಣ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗುತ್ತಿದೆ

***

45 ದಿನಗಳಲ್ಲಿ ಭಾರಿ ಅನಾಹುತ

14 ಮಕ್ಕಳ ಕಳ್ಳರ ವದಂತಿಯಿಂದ ನಡೆದ ಹಲ್ಲೆ ಪ್ರಕರಣಗಳು

10 ಹಲ್ಲೆಯಿಂದ ಮೃತಪಟ್ಟ ಅಮಾಯಕರು

27 ಧುಳೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು

7 ವದಂತಿ ಹರಡಿಸಿದವರ ವಿರುದ್ಧ ದಾಖಲಾದ ಪ್ರಕರಣಗಳು

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !