ಸಾಲ ಮನ್ನಾ ಇಲ್ಲ ಎಂದರೇ ರಾಹುಲ್?: ಸಾಮಾಜಿಕ ಮಾಧ್ಯಮದಲ್ಲಿ ತಿರುಚಿದ ಸುದ್ದಿ

7
ವಿಡಿಯೊ ವೈರಲ್

ಸಾಲ ಮನ್ನಾ ಇಲ್ಲ ಎಂದರೇ ರಾಹುಲ್?: ಸಾಮಾಜಿಕ ಮಾಧ್ಯಮದಲ್ಲಿ ತಿರುಚಿದ ಸುದ್ದಿ

Published:
Updated:

ಬೆಂಗಳೂರು: ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಕೃಷಿ ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿದರೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ? ಹೇಳಿದ್ದಾರೆ ಎನ್ನಲಾದ ತಿರುಚಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

ಚುನಾವಣಾ ಪ್ರಚಾರ ರ್‍ಯಾಲಿ ಸಂದರ್ಭ ರಾಹುಲ್ ಅವರು ಮಾಡಿರುವ ಭಾಷಣದ ತುಣಕನ್ನೂ ಫಲಿತಾಂಶದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಡಿಯೊ ತುಣುಕನ್ನೂ ಸಂಕಲಿಸಿ ಸಿದ್ಧಪಡಿಸಲಾದ ವಿಡಿಯೊ ಕ್ಲಿಪ್‌ ಅನ್ನು ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜತೆಗೆ, ’ರಾಹುಲ್ ಗಾಂಧಿ ಯೂ ಟರ್ನ್‌‘ ಎಂದು ಬರೆಯಲಾಗಿದೆ.

ಮೊದಲ ತುಣುಕಿನಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನಗಳಲ್ಲಿ ಕೃಷಿ ಸಾಲ ಮನ್ನಾ ಮಾಡಲಿದೆ ಎಂಬ ಭರವಸೆ ನೀಡಿರುವ ಅಂಶವಿದೆ. ಎರಡನೇ ತುಣುಕಿನಲ್ಲಿ, ಸಾಲ ಮನ್ನಾ ಪರಿಹಾರವಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಅಂಶವಿದೆ.

‘ಗೆಲುವಿನ 24 ಗಂಟೆಗಳ ನಂತರ ರಾಹುಲ್ ಬಾಬಾ’ ಎಂಬ ಶೀರ್ಷಿಕೆಯೊಂದಿಗೆ ‘ಜಯ್ ಪೂರ್ವಾಂಚಲ್‘ ಎಂಬ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈ ವರೆಗೆ ಸುಮಾರು 20 ಲಕ್ಷ ಬಾರಿ ಜನ ವೀಕ್ಷಿಸಿದ್ದಾರೆ. 90 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಟ್ವಿಟರ್‌ನಲ್ಲಿಯೂ ವ್ಯಾಪಕವಾಗಿ ಶೇರ್ ಆಗಿದೆ.

‘ಸಾಲ ಮನ್ನಾಕ್ಕೆ ಸಂಬಂಧಿಸಿ ಯೂ ಟರ್ನ್‌ ತೆಗೆದುಕೊಳ್ಳಲು ಅವರು (ರಾಹುಲ್ ಗಾಂಧಿ) ಜಯಗಳಿಸಿದ ಒಂದು ದಿನವನ್ನೂ ತೆಗೆದುಕೊಂಡಿಲ್ಲ. ಇದೇ ಕಾರಣಕ್ಕೆ ಅವರನ್ನು ಅರವಿಂದ ಕೇಜ್ರಿವಾಲ್ ಆರಾಧಿಸುತ್ತಾರೆ’ ಎಂದು ಭಯ್ಯಾಜಿ ಎಂಬುವವರು ಟ್ವೀಟ್ ಮಾಡಿದ್ದಾರೆ. ‘ಒಂದೇ ದಿನದಲ್ಲಿ ಪಪ್ಪು ಯೂ ಟರ್ನ್‌’ ಎಂಬ ಅನೇಕ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಅವುಗಳ ಜತೆ ತಿರುಚಿದ ವಿಡಿಯೊ ಪೋಸ್ಟ್ ಮಾಡಲಾಗಿದೆ.

‘ಸಾಲ ಮನ್ನಾ ಮಾಡಲ್ಲ’ ಎಂದು ಎಲ್ಲೂ ಹೇಳಿಲ್ಲ ರಾಹುಲ್

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಎರಡನೇ ಭಾಗದಲ್ಲಿರುವ ದೃಶ್ಯದಲ್ಲಿ, ’ಸಾಲ ಮನ್ನಾ ಪರಿಹಾರವಲ್ಲ’ ಎಂದು ರಾಹುಲ್ ಗಾಂಧಿ ಹೇಳಿರುವ ಅಂಶ ಇದೆ. ಇದು ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಅವರು ಮಾತನಾಡಿರುವ ವಿಡಿಯೊ. ಇದನ್ನೇ ‘ರಾಹುಲ್ ಗಾಂಧಿ ಯೂ ಟರ್ನ್‌’ ಎಂದು ವೈರಲ್ ಮಾಡಲಾಗಿದೆ ಎಂಬುದನ್ನು ಆಲ್ಟ್ ನ್ಯೂಸ್ ಸುದ್ದಿತಾಣ ಬಯಲಿಗೆಳೆದಿದೆ.

ಪತ್ರಿಕಾಗೋಷ್ಠಿಯ ಒಟ್ಟು ವಿಡಿಯೊ ಸುಮಾರು 25 ನಿಮಿಷಗಳಷ್ಟಿದೆ. ಇದರಲ್ಲಿ 22.20 ನಿಮಿಷಗಳ ನಂತರ ಕೃಷಿ ಸಾಲ ಮನ್ನಾಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿರುವ ಪ್ರಶ್ನೆ ಹಾಗೂ ಉತ್ತರದ ಭಾಗವಿದೆ. 2019ರ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕೃಷಿ ಸಾಲ ಮನ್ನಾ ಕಾಂಗ್ರೆಸ್‌ನ ವಿಷಯವಾಗಿರಲಿದೆಯೇ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ರಾಹುಲ್, ’ಸಾಲ ಮನ್ನಾ ಎಂಬುದು ಪೂರಕ ಕ್ರಮ. ಇದು ಪರಿಹಾರವಲ್ಲ. ಪರಿಹಾರ ಸಂಕೀರ್ಣವಾಗಿದ್ದು, ಅವರಿಗೆ (ಕೃಷಿಕರಿಗೆ) ಬೆಂಬಲ ನೀಡುವಂತಹದ್ದಾಗಿರಬೇಕು. ಮೂಲಸೌಕರ್ಯ ಕಲ್ಪಿಸುವುದು, ತಂತ್ರಜ್ಞಾನದ ಲಭ್ಯತೆ ದೊರೆಯುವಂತೆ ಮಾಡಬೇಕು. ಪರಿಹಾರ ಸುಲಭವಲ್ಲ, ಸವಾಲಿನಿಂದ ಕೂಡಿದ್ದಾಗಿದೆ. ಆದರೆ ಕೃಷಿಕರ ಮತ್ತು ದೇಶದ ಜನರ ಒಡಗೂಡಿ ಕೆಲಸ ಮಾಡುವ ಮೂಲಕ ನಾವದನ್ನು ಸಾಧಿಸಲಿದ್ದೇವೆ‘ ಎಂದು ಹೇಳಿದ್ದಾರೆ.

ಆದರೆ ಇಡೀ ಪತ್ರಿಕಾಗೋಷ್ಠಿಯಲ್ಲಿ ಎಲ್ಲಿಯೂ ‘ಸಾಲ ಮನ್ನಾ ಮಾಡುವುದಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಕೇವಲ ‘ಸಾಲ ಮನ್ನಾ ಪರಿಹಾರವಲ್ಲ’ ಎಂಬ ಮಾತನ್ನೇ ಮುಂದಿಟ್ಟುಕೊಂಡು ಸುಳ್ಳು ಸುದ್ದಿ ಹರಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 27

  Happy
 • 4

  Amused
 • 3

  Sad
 • 1

  Frustrated
 • 12

  Angry

Comments:

0 comments

Write the first review for this !