ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಲ್ಲೇ ರೋಗಾಣು ನಾಶಕ

ದಿನಸಿ, ನೋಟುಗಳ ಸ್ಯಾನಿಟೈಜೇಶನ್‌ಗೆ ನೂತನ ಸಾಧನ
Last Updated 10 ಏಪ್ರಿಲ್ 2020, 21:25 IST
ಅಕ್ಷರ ಗಾತ್ರ

ನವದೆಹಲಿ: ದಿನನಿತ್ಯದ ವಸ್ತುಗಳು ರೋಗಾಣು ಮುಕ್ತವಾಗಿಯೇ ಮನೆ ಪ್ರವೇಶಿಸಬೇಕು ಎನ್ನುವ ಬಯಕೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಈಡೇರಿಸಲು ಮುಂದಾಗಿದೆ.

ದಿನಸಿ, ನೋಟುಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಮನೆ ಬಾಗಿಲಲ್ಲೇ ವೈರಸ್‌ ಸೋಂಕಿನಿಂದ ಮುಕ್ತಗೊಳಿಸುವ ಸಾಧನವನ್ನು ಪಂಜಾಬ್‌ನ ರೋಪಾರ್‌ ಐಐಟಿ ರೂಪಿಸಿದೆ.

ಪೆಟ್ಟಿಗೆ ಆಕಾರದ ಉಪಕರಣದಲ್ಲಿ ನೇರಳಾತೀತ ಕಿರಣಗಳನ್ನು ಹಾಯಿಸುವ ಮೂಲಕ ರೋಗಾಣುಗಳನ್ನು ನಾಶಪಡಿಸುವ ಸಾಧನವನ್ನು ಅಳವಡಿಸಲಾಗಿದೆ. ನೀರನ್ನು ಶುದ್ಧೀಕರಿಸಲು ಇದೇ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಕಿರಣಗಳಿಂದ ಕಣ್ಣಿಗೆ ಹಾನಿಯಾಗುವುದರಿಂದ ಪೆಟ್ಟಿಗೆಯಲ್ಲಿ ನೇರವಾಗಿ ನೋಡಬಾರದು ಎಂದು ಈ ಸಾಧನ ಅಭಿವೃದ್ಧಿಪಡಿಸಿರುವ ತಂಡವು ತಿಳಿಸಿದೆ.

ಮನೆ ಬಾಗಿಲಲ್ಲೇ ಈ ಪೆಟ್ಟಿಗೆಯನ್ನು ಅಳವಡಿಸಬೇಕು ಎಂದು ತಂಡವು ಸಲಹೆ ನೀಡಿದೆ. ಈ ಪೆಟ್ಟಿಗೆ ಮುಂದಿನ ದಿನಗಳಲ್ಲಿ ಕೇವಲ ₹500ಕ್ಕಿಂತಲೂ ಕಡಿಮೆ ಬೆಲೆಗೆ ದೊರೆಯಬಹುದು.

ವಸ್ತುಗಳನ್ನು ರೋಗಾಣುಗಳಿಂದ ಮುಕ್ತಗೊಳಿಸಲು ಕನಿಷ್ಠ 30 ನಿಮಿಷ ಬೇಕು. ಬಳಿಕ ‍ಪೆಟ್ಟಿಗೆಯನ್ನು ಸಹಜ ತಾಪಮಾನಕ್ಕೆ ತರಲು 10 ನಿಮಿಷ ಅಗತ್ಯ.

‘ಕೇವಲ ಸಾಮಾಜಿಕ ಅಂತರದಿಂದ ಕೊರೊನಾ–19 ತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಎಚ್ಚರವಹಿಸಬೇಕಾಗಿದೆ. ಹೀಗಾಗಿಯೇ ನಾವು ಮನೆಯಲ್ಲಿರುವ ಪೆಟ್ಟಿಗೆಯ ರೀತಿಯ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಮನೆ ಬಾಗಿಲು ಅಥವಾ ಪ್ರವೇಶಿಸುವ ಜಾಗದಲ್ಲಿಟ್ಟರೆ ಸಾಕು’ ಎಂದು ಹಿರಿಯ ವೈಜ್ಞಾನಿಕ ಅಧಿಕಾರಿ ನರೇಶ್‌ ರಖಾ ತಿಳಿಸಿದ್ದಾರೆ.

‘ಸದ್ಯಕ್ಕೆ ಹಲವರು ಬಳಕೆ ಮಾಡುವ ಮುನ್ನ ಬಿಸಿ ನೀರಿನಲ್ಲಿ ತರಕಾರಿಗಳನ್ನು ತೊಳೆಯುತ್ತಾರೆ. ಆದರೆ, ಕರೆನ್ಸಿ ನೋಟುಗಳಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ, ಪ್ರತಿಯೊಂದು ವಸ್ತುವಿಗೂ ಅನ್ವಯವಾಗುವ ರೀತಿಯಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ’ ಎಂದು ವಿವರಿಸಿದ್ದಾರೆ.

ಕರೆನ್ಸಿ ನೋಟುಗಳು, ತರಕಾರಿ, ಹಾಲಿನ ಪಾಕೆಟ್‌ಗಳು, ಕೈಗಡಿಯಾರ, ಮೊಬೈಲ್‌ ದೂರವಾಣಿ ಹಾಗೂ ಯಾವುದೇ ದಾಖಲೆಗಳನ್ನು ಉಪಯೋಗಿಸುವ ಮುನ್ನ ಈ ಪೆಟ್ಟಿಗೆಯಲ್ಲಿಡಬಹುದು ಎಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT