ಹಿಂದೂ ಧರ್ಮದಲ್ಲೇ ಹಿಂಸೆ ಇದೆ: ಸೀತಾರಾಂ ಯೆಚೂರಿ ಅಸಮಾಧಾನ

ಸೋಮವಾರ, ಮೇ 27, 2019
33 °C

ಹಿಂದೂ ಧರ್ಮದಲ್ಲೇ ಹಿಂಸೆ ಇದೆ: ಸೀತಾರಾಂ ಯೆಚೂರಿ ಅಸಮಾಧಾನ

Published:
Updated:
Prajavani

ಭೋಪಾಲ್‌: ‘ಹಿಂದೂಗಳಿಗೆ ಹಿಂಸೆಯಲ್ಲಿ ವಿಶ್ವಾಸವಿಲ್ಲ’ ಎಂದು ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಠಾಕೂರ್‌ ಹೇಳಿರುವುದನ್ನು ಖಂಡಿಸಿರುವ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ‘ಪ್ರಜ್ಞಾ ಅವರು ಉಲ್ಲೇಖಿಸುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳೇ ಹಿಂಸೆಯಿಂದ ತುಂಬಿವೆ’ ಎಂದಿದ್ದಾರೆ.

ಭೋಪಾಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವರು ಈ ರೀತಿ ಹೇಳಿರುವುದಾಗಿ ಕೆಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

‘ದೇಶದ ಅನೇಕ ರಾಜ ಮಹಾರಾಜರು ಹಲವು ಯುದ್ಧಗಳನ್ನು ಮಾಡಿದ್ದಾರೆ. ರಾಮಾಯಣ, ಮಹಾಭಾರತಗಳೂ ಹಿಂಸಾತ್ಮಕ ಘಟನೆಗಳಿಂದ ತುಂಬಿವೆ. ಹೀಗಿದ್ದರೂ ಹಿಂದೂಗಳಿಗೆ ಹಿಂಸೆಯಲ್ಲಿ ವಿಶ್ವಾಸವಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಒಂದು ಧರ್ಮ ಮಾತ್ರ ಹಿಂಸೆಯಲ್ಲಿ ತೊಡಗಿದೆ, ಹಿಂದೂಗಳು ಹಿಂಸೆ ಮಾಡುವುದಿಲ್ಲ ಎಂಬ ಮಾತಿನ ಹಿಂದಿನ ಮರ್ಮವಾದರೂ ಏನು’ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

‘ದೊರೆ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ದೇಶದಲ್ಲಿ ಅಹಿಂಸಾ ಸಿದ್ಧಾಂತ ಮುನ್ನೆಲೆಗೆ ಬಂದಿದೆ. ಕಳಿಂಗ ಯುದ್ಧದ ನಂತರ ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದ. ‘ಇನ್ನೊಂದು ಧರ್ಮದ ಮೇಲೆ ದಾಳಿ ಮಾಡುವವರು ತಮ್ಮ ಧರ್ಮಕ್ಕೇ ಹಾನಿಮಾಡುತ್ತಾರೆ’ ಎಂದು ಅಶೋಕನ ಶಾಸನಗಳು ಹೇಳುತ್ತವೆ. ಇದು ನಮ್ಮ ಪರಂಪರೆ’ ಎಂದರು.

‘ಮೊದಲ ಮೂರು ಹಂತಗಳ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯವರು ತಮ್ಮ ಹಿಂದುತ್ವದ ಅಜೆಂಡಾವನ್ನು ಮುನ್ನೆಲೆಗೆ ತಂದಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ‘35ಎ’ ವಿಧಿ ಹಾಗೂ ಸೆಕ್ಷನ್‌ 370 ರದ್ದು ಮಾಡುವುದು, ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ, ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರಗಳನ್ನು ಈಗ ಮುನ್ನೆಲೆಗೆ ತರಲಾಗಿದೆ. ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಯನ್ನು ಕೆರಳಿಸುವ ಸಲುವಾಗಿಯೇ ಪ್ರಜ್ಞಾ ಅವರನ್ನು ಭೋಪಾಲ್‌ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ’ ಎಂದು ಆರೋಪಿಸಿದರು.

ಭೋಪಾಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಅವರನ್ನು ಗೆಲ್ಲಿಸುವ ಮೂಲಕ ಪ್ರಜ್ಞಾ ಸಿಂಗ್‌ಗೆ ಪಾಠ ಕಲಿಸಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 15

  Angry

Comments:

0 comments

Write the first review for this !