ಸೋಮವಾರ, ಜುಲೈ 4, 2022
22 °C

ದೆಹಲಿ ಚುನಾವಣೆ: ಕಾಂಗ್ರೆಸ್‌, ಬಿಜೆಪಿ ಬೆಂಬಲಿಗರೇ ಎಎಪಿ ಬೆಂಬಲಿಸಿ– ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರೇ, ನೀವು ನಿಮ್ಮ ಪಕ್ಷದಲ್ಲೇ ಇರಿ. ಆದರೆ ನಿಮ್ಮ ಕುಟುಂಬದ ಕ್ಷೇಮಾಭಿವೃದ್ಧಿಯ ಬಗ್ಗೆ ಚಿಂತಿಸಿ ದಯವಿಟ್ಟು ಈ ಬಾರಿ ನಮಗೆ ಮತ ಹಾಕಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ. 

ಬದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ(ಎಎಪಿ) ಅಭ್ಯರ್ಥಿ ಅಜೇಶ್‌ ಯಾದವ್‌ ಪರ ನಡೆದ ರೋಡ್‌ಶೋವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ‘ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಕಠಿಣ ಪರಿಶ್ರಮ ಹಾಕಿದ್ದೇವೆ. ನೀವು ಬೇರೆ ಪಕ್ಷಕ್ಕೆ ಮತ ಹಾಕಿದರೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಕೆಡಲಿದೆ. ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಕಳೆದ 70 ವರ್ಷದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತಷ್ಟು ಸಮಯಾವಕಾಶ ಬೇಕಾಗಿದೆ’ ಎಂದರು. 

ಹಿರಿಯ ಮಗನಂತೆ ದುಡಿದಿದ್ದೇನೆ: ‘ಕುಟುಂಬದಲ್ಲಿ ಹಿರಿಯ ಮಗನೇ ಹೆಚ್ಚಿನ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಾನೆ. ಕುಟುಂಬವೊಂದರ ಹಿರಿಯ ಮಗನಂತೆ ನಾನು ಕಾರ್ಯನಿರ್ವಹಿಸಿದ್ದೇನೆ’ ಎಂದು ಕೇಜ್ರಿವಾಲ್‌ ಹೇಳಿದರು.  

ನೂರಾರು ಆಟೋ: ರೋಡ್‌ಶೋನಲ್ಲಿ ಕೇಜ್ರಿವಾಲ್‌ ಜೀಪಿನ ಹಿಂದೆ ಆಮ್‌ ಆದ್ಮಿ ಪಕ್ಷದ ಭಿತ್ತಿಚಿತ್ರಗಳಿದ್ದ ನೂರಾರು ಆಟೋಗಳಿದ್ದವು. ಆಟೋರಿಕ್ಷಾ ಚಾಲಕರೇ ಎಎಪಿಯ ಪ್ರಮುಖ ಮತದಾರರಾಗಿದ್ದು, 2015ರಲ್ಲೂ ಚುನಾವಣಾ ಪ್ರಚಾರಕ್ಕೆ ಆಟೋವನ್ನೇ ಹೆಚ್ಚಾಗಿ ಬಳಸಲಾಗಿತ್ತು. 

1,029 ಅಭ್ಯರ್ಥಿಗಳಿಂದ ನಾಮಪತ್ರ 

ಫೆ.8ರಂದು ನಡೆಯಲಿರುವ ಚುನಾವಣೆಗೆ 70 ವಿಧಾನಸಭಾ ಕ್ಷೇತ್ರದಿಂದ  1,029 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಅಂದು 800 ನಾಮಪತ್ರಗಳು ಸಲ್ಲಿಕೆಯಾಗಿವೆ. ಅಭ್ಯರ್ಥಿಗಳ ಪೈಕಿ 187 ಮಹಿಳೆಯರಿದ್ದಾರೆ. ಶುಕ್ರವಾರ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು