ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ವ್ಯಾಪಂ ಹಗರಣ ಬಯಲಿಗೆಳೆದ ಡಾ. ಆನಂದ್‌ ರಾಯ್‌ ಚುನಾವಣಾ ಅಖಾಡಕ್ಕೆ

ಸಿ.ಎಂ ಚೌಹಾಣ್‌ಗೆ ಸವಾಲು ಎಸೆದ ವೈದ್ಯರ ಜತೆ ಪ್ರಜಾವಾಣಿ ಸಂದರ್ಶನ
Last Updated 28 ಅಕ್ಟೋಬರ್ 2018, 2:31 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಭಾರಿ ಕೋಲಾಹಲ ಎಬ್ಬಿಸಿದ್ದ ಮಧ್ಯ ಪ್ರದೇಶದ ವ್ಯಾಪಂ (ವ್ಯಾವಸಾಯಿಕ್‌ ಪರೀಕ್ಷಾ ಮಂಡಳಿ) ಹಗರಣ ಬಯಲಿಗೆಳೆದ ಡಾ. ಆನಂದ್‌ ರಾಯ್‌ ಈ ಬಾರಿ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ನೇತ್ರತಜ್ಞರಾಗಿರುವ ಅವರು ಇಂದೋರ್‌ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಯಾಗಿದ್ದರು.

ವೃತ್ತಿಯಲ್ಲಿ ವೈದ್ಯರಾಗಿದ್ದರೂ ಭ್ರಷ್ಟಾಚಾರ ವಿರುದ್ಧದ ಹೋರಾಟದಿಂದ ಅವರು ಹೆಸರುವಾಸಿಯಾಗಿದ್ದಾರೆ. ರಾಜಕೀಯ ಅಖಾಡಕ್ಕೆ ಧುಮುಕಿರುವ ಡಾ. ರಾಯ್‌ ‘ಪ್ರಜಾವಾಣಿ’ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

*ಯಾವ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸಿದ್ದೀರಿ? ಪಕ್ಷದಿಂದ ಸ್ಪರ್ಧಿಸುವಿರಾ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಲೋಚನೆ ಇದೆಯಾ?

ಡಾ. ರಾಯ್‌: ಇಂದೋರ್‌–5 ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸಿದ್ದೇನೆ. ಭ್ರಷ್ಟಾಚಾರ ಮತ್ತು ಅನ್ಯಾಯಕ್ಕೊಳಗಾದವರ ಧ್ವನಿಯಾಗಿರುವ ಬುಡಕಟ್ಟು ಜನಾಂಗದ ಯುವಕರ ಜಯಆದಿವಾಸಿ ಯುವ ಶಕ್ತಿ (ಜೆಎವೈಎಸ್‌)ಯಿಂದ ಸ್ಪರ್ಧಿಸುವೆ. ಕಾಂಗ್ರೆಸ್‌ ಜೊತೆಗೆಜೆಎವೈಎಸ್‌ ಹೊಂದಾಣಿಕೆ ಮಾತುಕತೆ ನಡೆಸಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧವಾಗಿದ್ದೇನೆ. ಬಿಜೆಪಿಯ ವಿರೋಧ ಮತಗಳು ವಿಭಜನೆಯಾಗಬಾರದು, ಅಧಿಕಾರದಿಂದ ಬಿಜೆಪಿಯನ್ನು ಕೆಳಗಿಳಿಸುವುದು ನನ್ನ ಮಖ್ಯ ಗುರಿ.

* ರಾಜಕೀಯಕ್ಕೆ ಬರುವ ನಿರ್ಧಾರ ಏಕೆ?

ಈ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ವ್ಯಾಪಂ ಹಗರಣದ ಜವಾಬ್ದಾರರು. ಈ ಹಗರಣದಲ್ಲಿ ಅನೇಕರು ಜೈಲು ಸೇರಿದ್ದಾರೆ. ಆದರೆ, ಚೌಹಾಣ್‌ ಮುಖ್ಯಮಂತ್ರಿ
ಯಾಗಿಯೇ ಮುಂದಿವರಿದಿದ್ದಾರೆ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಲು ರಾಜಕೀಯ ಅಧಿಕಾರ ಅನಿವಾರ್ಯ ಎಂಬುದನ್ನು ಕಳೆದ 10 ವರ್ಷಗಳಲ್ಲಿ ತಿಳಿದುಕೊಂಡಿದ್ದೇನೆ.

* ವ್ಯಾಪಂ, ಮಂಡಸೌರ್‌ ಹಗರಣಗಳ ಲಾಭವನ್ನು ಕಾಂಗ್ರೆಸ್ ಪಡೆಯಬಹುದೆ? ವ್ಯಾಪಂ ಹಗರಣ ತನಿಖೆಯ ಪ್ರಗತಿ ಮತ್ತು ಫಲಿತಾಂಶದ ಬಗ್ಗೆ ನೀವು ತೃಪ್ತಿ ಹೊಂದಿದ್ದೀರಾ?

ತೃಪ್ತಿ ಇಲ್ಲ. ಹಗರಣಕ್ಕೆ ಸಂಬಂಧಿಸಿದಂತೆ 170 ಪ್ರಕರಣಗಳ ಕುರಿತು ಕಳೆದ 3 ವರ್ಷಗಳಿಂದ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಸುಮಾರು 50 ಪ್ರಕರಣಗಳಲ್ಲಿ ಆರೋಪಟ್ಟಿಯನ್ನು ಇನ್ನೂ ಸಲ್ಲಿಸಬೇಕಾಗಿದೆ. ಸಿಬಿಐನ ನಿರ್ದೇಶಕರಾಗಿದ್ದ ರಾಕೇಶ್‌ ಅಸ್ತಾನಾ ನೇತೃತ್ವದಲ್ಲಿ ತನಿಖೆ ನಡೆದಿತ್ತು, ಆಗ ಚೌಹಾಣ್‌ ಅವರಿಗೆ ಸಿಬಿಐ ಕ್ಲೀನ್‌ ಚಿಟ್‌ ನೀಡಿತ್ತು. ಆದರೆ, ಈಗ ಅಸ್ತಾನಾ ಅವರು ಭ್ರಷ್ಟಾ
ಚಾರದ ಆರೋಪ ಎದುರಿಸುತ್ತಿದ್ದಾರೆ.

* ಚೌಹಾಣ್ ನೇತೃತ್ವದಲ್ಲಿ ಬಿಜೆಪಿ 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಭ್ರಷ್ಟಾಚಾರದ ಆರೋಪಗಳಿದ್ದರೂ ಜನರು ಅವರಲ್ಲಿ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರಲ್ಲ?

ವ್ಯಾಪಂ ಹಗರಣದ ಲಾಭವನ್ನು ಕಾಂಗ್ರೆಸ್‌ ಬಳಸಿಕೊಳ್ಳಲು ವಿಫಲವಾದ ಕಾರಣ 2013ರಲ್ಲಿ ಚೌಹಾಣ್‌ ನೇತೃತ್ವಕ್ಕೆ ಜಯ ಸಿಕ್ಕಿತು. ಜನನಾಯಕ ಎಂದು ಬಿಂಬಿಸಿಕೊಳ್ಳುವ ಚೌಹಾಣ್‌, ಚುನಾಣೆಯಲ್ಲಿ ಸುರಕ್ಷಿತ ಕ್ಷೇತ್ರ ಬಿಟ್ಟು ಬಂದಿಲ್ಲ. ಬುದನಿ ಕ್ಷೇತ್ರದ ಜೊತೆಗೆ ವಿದಿಶಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಈ ಬಾರಿ ತಾಕತ್ತು ಇದ್ದರೆ ಅವರು ಇಂದೋರ್‌–5 ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ನಾನು ಬಹಿರಂಗವಾಗಿ ಸವಾಲು ಹಾಕುತ್ತೇನೆ.

* ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯಿಂದ ಏಕೆ ನೀವು ಭ್ರಮನಿರಸನಗೊಂಡಿದ್ದೀರಿ?

ನಾನು ಮತ್ತು ಆಶಿಶ್‌ ಚತುರ್ವೇದಿ ಅವರು ವ್ಯಾಪಂ ಹಗರಣವನ್ನು ಬಯಲಿಗೆಳೆದಾಗ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಮ್ಮ ಜೊತೆಗೆ ನಿಲ್ಲಲಿಲ್ಲ. ಚೌಹಾಣ್‌ ಅವರನ್ನು ಸಮರ್ಥಿಸಿಕೊಂಡವು. ಆರಂಭದಲ್ಲಿ ಆರ್‌ಎಸ್‌ಎಸ್‌ ಸ್ವಲ್ಪ ಸಮಯದವರೆಗೆ ಸುಳ್ಳು ಹೇಳುವಂತೆ ಸಂದೇಶ ಕಳುಹಿಸುತ್ತಿತ್ತು. ಚೌಹಾಣ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿಯೂ ಭರವಸೆ ನೀಡಿತ್ತು. ಆದರೆ, ಇದ್ಯಾವುದೂ ಆಗಲಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದರೆ ಮಾತ್ರ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾರೆ ಎಂಬುದು ಆಗ ನಾನು ಅರಿತುಕೊಂಡೆ. ಅಧಿಕಾರದಲ್ಲಿ ಇದ್ದರೆ ಅವರು ತಮ್ಮ ನೀತಿ ಬದಲಿಸಿಕೊಳ್ಳುತ್ತಾರೆ ಮತ್ತು ಭ್ರಷ್ಟಾಚಾರವನ್ನು ಸಮರ್ಥಿಸಿ
ಕೊಳ್ಳುತ್ತಾರೆ.

* ಚುನಾವಣೆಯಲ್ಲಿ ನೀವು ಆದ್ಯತೆ ನೀಡಲು ಬಯಸುವ ಇತರ ವಿಷಯಗಳು ಯಾವುವು?

ಭ್ರಷ್ಟಾಚಾರದ ಹೊರತಾಗಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಕಳೆದ 15 ವರ್ಷಗಳಲ್ಲಿ ರೈತರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬುಡಕಟ್ಟು ಜನಾಂಗದ ಹಕ್ಕುಗಳ ನಿರಂತರವಾಗಿ ಉಲ್ಲಂಘನೆಯಾಗುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಈ ವಿಷಯಗಳನ್ನು ಚುನಾವಣೆಯಲ್ಲಿ ಪ್ರಸ್ತಾಪಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT