ಭಾನುವಾರ, ಡಿಸೆಂಬರ್ 8, 2019
21 °C
ತಿಂಗಳ ಮೊದಲ ಶನಿವಾರ ಆಯೋಜನೆಗೆ ಸೂಚನೆ

ಕೊನೆಗೂ ಸಿಕ್ಕಿತು ವಾರ್ಡ್‌ ಸಭೆಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ವಾರ್ಡ್‌ ಸಭೆ ನಡೆಸುವ ಬಹುಕಾಲದ ಬೇಡಿಕೆ ಶನಿವಾರ ಕೊನೆಗೂ ಈಡೇರಿದೆ. ಪಾಲಿಕೆ ವತಿಯಿಂದ 20 ವಾರ್ಡ್‌ಗಳಲ್ಲಿ ಸಭೆ ನಡೆಯಿತು.

ವಾರ್ಡ್‌ ಸಮಿತಿ ಸಭೆ ನಡೆಸುವಂತೆ ಸಿಟಿಜನ್‌ ಫಾರ್‌ ಬೆಂಗಳೂರು ಸಂಘಟನೆ ಹಲವಾರು ವರ್ಷಗಳಿಂದ ಪಾಲಿಕೆಗೆ ಬೇಡಿಕೆ ಸಲ್ಲಿಸಿತ್ತು. ಮೇಯರ್‌ ಗಂಗಾಂಬಿಕೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಭೆಯಲ್ಲೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ವಾರ್ಡ್‌ ಸಭೆ ನಡೆಸುವಂತೆ ಅಂದು ಅವರು ಸೂಚನೆ ನೀಡಿದ್ದರು.

ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11ಕ್ಕೆ ವಾರ್ಡ್‌ ಸಮಿತಿ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

‘ಕೇವಲ ಶೇ 10 ಭಾಗದಷ್ಟು ನಗರ ಪ್ರದೇಶ ವ್ಯಾಪ್ತಿಯ ಸಭೆ ನಡೆದಿದೆ. ಮುಂದಿನ ದಿನಗಳಲ್ಲಿ ಇದು ಅತ್ಯುತ್ತಮ ಪರಿಣಾಮ ಬೀರುವ ವಿಶ್ವಾಸ ಹೊಂದಿದ್ದೇವೆ. ಒಂದು ವೇಳೆ ಎಲ್ಲ 198 ವಾರ್ಡ್‌ಗಳಲ್ಲಿ ಸಭೆ ನಡೆಸುತ್ತಿದ್ದರೆ ಅದೊಂದು ಪವಾಡವೇ ಎಂದೆನಿಸುತ್ತಿತ್ತು. ಏನೇ ಇರಲಿ. ನಗರಾಡಳಿತಕ್ಕೆ ಸಂಬಂಧಿಸಿದಂತೆ ಇದೊಂದು ಐತಿಹಾಸಿಕ ದಿನ’ ಎಂದು ಸಿಟಿಜನ್‌ ಫಾರ್‌ ಬೆಂಗಳೂರು ಸಂಘಟನೆಯ ಸಹ ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ ಹೇಳಿದರು.

ಎಲ್ಲೆಲ್ಲಾ ಸಭೆ?: ಜಯನಗರ, ಶಂಕರ ಮಠ, ಗಂಗಾನಗರ, ರಾಧಾಕೃಷ್ಣ ದೇವಸ್ಥಾನ, ದೊಮ್ಮಲೂರು, ಮಾರುತಿ ಸೇವಾ ನಗರ, ರಾಜರಾಜೇಶ್ವರಿ ನಗರ, ಬೆಳ್ಳಂದೂರು, ಸಂಪಂಗಿರಾಮನಗರ ಸಭೆ ನಡೆದ ಪ್ರಮುಖ ವಾರ್ಡ್‌ಗಳು.

ಮಾರೇನಹಳ್ಳಿ ವಾರ್ಡ್‌ನ ಸಭೆಯಲ್ಲಿ ಸ್ವಲ್ಪ ಅವ್ಯವಸ್ಥೆ ಉಂಟಾಯಿತು. ಜನರೂ ಪಾಲ್ಗೊಳ್ಳಲು ಆಸಕ್ತಿ ತೋರಿಸಲಿಲ್ಲ. ಪಾಲಿಕೆ ಸದಸ್ಯೆ ಮಧುಕುಮಾರಿ ವಾಗೀಶ್‌ ಅವರು ಅಸೌಖ್ಯವಿದ್ದ ಕಾರಣ ಸಭೆಯನ್ನು ಮುಂದೂಡಲಾಯಿತು.

ಜಯನಗರದಲ್ಲಿ ನಡೆದ ಸಭೆ ಸಾಮಾನ್ಯವಾಗಿಯೇ ಇತ್ತು. ಇಲ್ಲಿ ಎರಡು ವರ್ಷಗಳಿಂದ ವಾರ್ಡ್‌ ಸಮಿತಿ ಸಭೆ ನಡೆಯುತ್ತಿದೆ. ಚೊಕ್ಕಸಂದ್ರ, ದೊಡ್ಡಬಿದಿರಕಲ್ಲು ವಾರ್ಡ್‌ಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಇರಲಿಲ್ಲ. ಶಾಂತಿನಗರ ವಾರ್ಡ್‌ನಲ್ಲಿ ಕೇವಲ ಇಬ್ಬರು ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇಬ್ಬರು ಸಹಾಯಕ ಎಂಜಿನಿಯರ್‌ಗಳು ಮತ್ತು ಇಬ್ಬರು ಸದಸ್ಯರು ಪಾಲ್ಗೊಂಡಿದ್ದರು.

ಬೆನ್ನಿಗಾನಹಳ್ಳಿ, ವಸಂತನಗರ, ಕಾಡುಮಲ್ಲೇಶ್ವರ, ವಿದ್ಯಾರಣ್ಯಪುರ ಮತ್ತು ಬ್ಯಾಟರಾಯನಪುರದಲ್ಲಿ ಸಭೆಯನ್ನು ಡಿ. 7 ಅಥವಾ 8ರಂದು ನಡೆಸಲು ತೀರ್ಮಾನಿಸಲಾಗಿದೆ.

ಕಸ ತೆರವುಗೊಳಿಸುವುದು, ಬೀದಿ ದೀಪದ ಸಮಸ್ಯೆ, ಕಳಪೆ ರಸ್ತೆ, ಫುಟ್‌ಪಾತ್‌ ನಿರ್ವಹಣೆ, ಬೀದಿಬದಿ ನೇತಾಡುವ ಒಎಫ್‌ಸಿ ತಂತಿಗಳ ಸಮಸ್ಯೆ ಸಭೆಗಳಲ್ಲಿ ಚರ್ಚೆಗೊಳಗಾದ ಸಾಮಾನ್ಯ ವಿಷಯಗಳು. 

ಮೇಯರ್‌ ಗಂಗಾಂಬಿಕೆ ಅವರು ಜಯನಗರ (ವಾರ್ಡ್‌ ನಂ 153)ದ ಸಭೆಯಲ್ಲಿ ಪಾಲ್ಗೊಂಡು ಅಲ್ಲಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ಸಭೆಯಲ್ಲಿ ಈ ಸಮಸ್ಯೆಗಳ ಸಂಬಂಧಿಸಿ ಕೈಗೊಂಡ ಕ್ರಮಗಳನ್ನು ಪುನರ್ ಪರಿಶೀಲನೆ ಮಾಡುವುದಾಗಿ ಹೇಳಿದರು. 

**

‘ಫುಟ್‌ಪಾತ್‌ಗಳಿಗೆ ಕಲರ್‌ಕೋಡ್‌’

ಜಯನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಲ್ಲಿನ ನಿವಾಸಿ ಭಾಸ್ಕರ್‌ ಅವರು, ‘ಮುಂದಿನ ಬಜೆಟ್‌ನಲ್ಲಿ ವಾರ್ಡ್‌ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು. ಪಾರ್ಕಿಂಗ್‌ ಸಂಬಂಧಿಸಿದಂತೆ ಫುಟ್‌ಪಾತ್‌
ಗಳನ್ನು ಕಲರ್‌ಕೋಡ್‌ ಮೂಲಕ ಗುರುತಿಸಬೇಕು.

ಹಳದಿ ಬಣ್ಣದಲ್ಲಿ ಗುರುತಿಸಲಾದ ಫುಟ್‌ಪಾತ್‌ ಬಳಿ 10 ನಿಮಿಷಗಳ ಕಾಲ ಪಾರ್ಕಿಂಗ್‌ ಅವಕಾಶ ಕೊಡಬಹುದು. ಕೆಂಪು ಬಣ್ಣದಲ್ಲಿ ಗುರುತಿಸಲಾದ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ ಅದನ್ನು ಪೊಲೀಸರು ಎಳೆದುಕೊಂಡು ಹೋಗಬಹುದು. ಈ ರೀತಿ ಸೂಚನೆ ಇದ್ದರೆ ಗುರುತಿಸಲು ಸುಲಭ’ ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು