ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಪೂರಕ ಪ್ರಗತಿ: ವಯನಾಡ್‌ ಜನರ ಸನ್ನದು

Last Updated 19 ಏಪ್ರಿಲ್ 2019, 3:38 IST
ಅಕ್ಷರ ಗಾತ್ರ

ವಯನಾಡ್‌: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಯನಾಡ್‌ನಿಂದ ಸ್ಪರ್ಧಿಸಿರುವುದರಿಂದಾಗಿ ಈ ಪ್ರದೇಶದ ಅಭಿವೃದ್ಧಿಯ ಕನಸು ಗರಿಗೆದರಿದೆ.

ದೀರ್ಘ ಕಾಲದಿಂದ ಬಾಕಿ ಇರುವ ರೈಲ್ವೆ ಯೋಜನೆ ಜಾರಿ ಆಗಬಹುದು ಎಂಬ ನಿರೀಕ್ಷೆ ಮೂಡಿದೆ. ಆದರೆ, ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ಸಮತೋಲನದ ಪ್ರಗತಿ ಆಗಬೇಕು ಎಂದು ಇಲ್ಲಿನ ಪರಿಸರ ಪ್ರಿಯರ ಗುಂಪು ಮತ್ತು ರೈತರ ಒಕ್ಕೂಟ ಹೇಳಿದೆ.

ಮೂರನೇ ಒಂದರಷ್ಟು ಪ್ರದೇಶದಲ್ಲಿ ಅರಣ್ಯ ಹೊಂದಿರುವ ವಯನಾಡ್‌ ಜಿಲ್ಲೆಯ ಅರಣ್ಯಕ್ಕೆ ಅಭಿವೃದ್ಧಿಯಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಈ ಗುಂಪುಗಳು ಸಿದ್ಧಪಡಿಸಿರುವ ನಾಗರಿಕರ ಸನ್ನದು ಹೇಳಿದೆ.

ವಯನಾಡ್‌ನ ಅರಣ್ಯ ಪ್ರದೇಶದಲ್ಲಿ 13 ನದಿಗಳು ಹುಟ್ಟುತ್ತವೆ. ಈ ಪ್ರದೇಶದ ರಕ್ಷಣೆ ಕೇರಳಕ್ಕೆ ಮಾತ್ರವಲ್ಲ, ನೆರೆಯ ಕರ್ನಾಟಕ ಮತ್ತು ತಮಿಳುನಾಡಿಗೂ ಮುಖ್ಯ. ವಯನಾಡಿನಲ್ಲಿ ಹುಟ್ಟುವ ನದಿಗಳು ಈ ಮೂರು ರಾಜ್ಯಗಳ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತಿವೆ.

ನೈಸರ್ಗಿಕ ಅರಣ್ಯ ಪ್ರದೇಶವನ್ನು ಯಾವುದೇ ಕಾರಣಕ್ಕೂ ಅರಣ್ಯೇತರ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಪ್ರಸ್ತಾವಿತ ರೈಲು ಮಾರ್ಗದಿಂದ ವಯನಾಡಿನ ಜನರಿಗೆ ನೇರವಾಗಿ ಯಾವು ಪ್ರಯೋಜನವೂ ಇಲ್ಲ. ಈಗಿರುವ ರಸ್ತೆಗಳನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ಇನ್ನಷ್ಟು ರಸ್ತೆಗಳನ್ನು ನಿರ್ಮಿಸಬೇಕು. ಪ್ರವಾಸೋದ್ಯಮ ಯೋಜನೆಗಳ ಮೇಲೆ ನಿಯಂತ್ರಣ ಇರಬೇಕು ಮತ್ತು ಭೂ ಬಳಕೆ ನಿರ್ವಹಣೆ ಉತ್ತಮಗೊಳ್ಳಬೇಕು ಎಂದು ಈ ಸನ್ನದಿನಲ್ಲಿ ಒತ್ತಾಯಿಸಲಾಗಿದೆ. ವಯನಾಡ್‌ ಪ್ರಮುಖ ಪ್ರವಾಸಿ ಕೇಂದ್ರ.

ಈ ಸನ್ನದನ್ನು ರಾಹುಲ್‌ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಪರಿಸರ ರಕ್ಷಣೆ ಗುಂಪಿನ ಅಧ್ಯಕ್ಷ ಎನ್‌. ಬಾದುಶಾ ತಿಳಿಸಿದ್ದಾರೆ. ತಮ್ಮ ಅನುಭವದ ಮೂಲಕ ರೂ‍ಪಿಸಲಾದ ಈ ಸನ್ನದನ್ನು ರಾಹುಲ್‌ ಅವರು ಗಂಭೀರವಾಗಿ ಪರಿಗಣಿಸಬಹುದು ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.

ರೈತರ ಮೇಲೆ ಸಾಲದ ಒತ್ತಡ ತೀವ್ರವಾಗಿದೆ ಎಂಬ ಅಂಶವನ್ನೂ ಸನ್ನದಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಏಳು ತಿಂಗಳಲ್ಲಿ ಐವರು ರೈತರು ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಹೇಳಲಾಗಿದೆ. ಮಾನವ–ವನ್ಯ‌ಪ್ರಾಣಿ ಸಂಘರ್ಷದ ಬಗ್ಗೆಯೂ ಉಲ್ಲೇಖ ಇದೆ. 2013ರ ಬಳಿಕ ಪ್ರತಿ ವರ್ಷವೂ ವಯನಾಡಿನಲ್ಲಿ ಆನೆ ದಾಳಿಗೆ 20ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.

ಕೃಷಿ ಆಧಾರಿತ ಕೈಗಾರಿಕೆ ಮತ್ತು ಬಿದಿರು ಬೆಳೆಗೆ ಪ್ರೋತ್ಸಾಹ ನೀಡಬೇಕು ಎಂದು ಸನ್ನದಿನಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT