ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯನಾಡ್‌: ರಾಹುಲ್‌ ವಿರುದ್ಧ ಎನ್‌ಡಿಎಯಿಂದ ತುಷಾರ್‌

Last Updated 11 ಮೇ 2019, 10:53 IST
ಅಕ್ಷರ ಗಾತ್ರ

ತಿರುವನಂತಪುರ:ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್‌ ಗಾಂಧಿ ವಿರುದ್ಧ ಭಾರತ ಧರ್ಮ ಜನ ಸೇನಾದ (ಬಿಡಿಜೆಎಸ್‌) ತುಷಾರ್‌ ವೆಳ್ಳಾಪಳ್ಳಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಟ್ವೀಟ್‌ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಕೇರಳದ ಈಳವ (ಈಡಿಗ) ಸಮುದಾಯದ ಸಂಘಟನೆಯಾಗಿರುವ ‘ಶ್ರೀ ನಾರಾಯಣ ಧರ್ಮ ಪರಿಪಾಲನಾಯೋಗಂ’ನ (ಎಸ್‌ಎನ್‌ಡಿಪಿ) ರಾಜಕೀಯ ಘಟಕವಾಗಿರುವ ಬಿಡಿಜೆಎಸ್‌ ಇತ್ತೀಚೆಗೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ತುಷಾರ್‌ ಅವರು ಎಸ್‌ಎನ್‌ಡಿಪಿಯ ಉಪಾಧ್ಯಕ್ಷರಾಗಿದ್ದರೆ, ಅವರ ತಂದೆ ವೆಳ್ಳಾಪಳ್ಳಿ ನಟೇಶನ್‌ ಈ ಸಂಘಟನೆಯ ಮುಖ್ಯಸ್ಥರಾಗಿದ್ದಾರೆ. ಹಲವು ವರ್ಷಗಳ ಕಾಲ ನಟೇಶನ್‌ ಅವರು ಕೇರಳದ ಎಡರಂಗಕ್ಕೆ ಹತ್ತಿರವಾಗಿದ್ದರು.

‘ಕೇರಳದ ಯುವ ಮತ್ತು ಕ್ರಿಯಾಶೀಲ ನಾಯಕ ವೆಳ್ಳಾಪಳ್ಳಿ ತುಷಾರ್‌, ವಯನಾಡ್‌ನಲ್ಲಿ ಎನ್‌ಡಿಎ ಅಭ್ಯರ್ಥಿ ಎಂದು ನಾನು ಹೆಮ್ಮೆಯಿಂದ ಘೋಷಿಸುತ್ತೇನೆ. ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಬಗೆಗಿನ ನಮ್ಮ ಬದ್ಧತೆಯನ್ನು ಅವರು ಪ್ರತಿನಿಧಿಸುತ್ತಾರೆ. ಅವರ ಮೂಲಕ ಕೇರಳ ರಾಜಕೀಯಕ್ಕೆಎನ್‌ಡಿಎ ಪರ್ಯಾಯವಾಗಲಿದೆ’ ಎಂದು ಅಮಿತ್‌ ಶಾ ಟ್ವೀಟ್‌ನಲ್ಲಿ ಹೇಳಿದ್ದಾರೆ. ‘ವಯನಾಡ್‌ನಲ್ಲಿ ನನಗೆ ಸಾಕಷ್ಟು ಬೆಂಬಲಿಗರು ಇರುವುದರಿಂದ ರಾಹುಲ್‌ಗೆ ತೀವ್ರ ಸ್ಪರ್ಧೆ ಒಡ್ಡುವ ಭರವಸೆ ಇದೆ. ಉತ್ತರ ಭಾರತದ ಅಭ್ಯರ್ಥಿಗಳಿಗೆ ಕೇರಳದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿ ಕಾಂಗ್ರೆಸ್‌– ಎನ್‌ಡಿಎ ನಡುವೆ ಪೈಪೋಟಿ ನಡೆಯಲಿದೆ’ ಎಂದು ತುಷಾರ್‌ ಹೇಳಿಕೊಂಡಿದ್ದಾರೆ.

ವಯನಾಡ್‌ ಕ್ಷೇತ್ರವನ್ನು ತನ್ನಬಳಿಯೇ ಇಟ್ಟುಕೊಂಡಿದ್ದ ಬಿಜೆಪಿ, ತ್ರಿಶ್ಶೂರ್‌ ಕ್ಷೇತ್ರವನ್ನು ಬಿಡಿಜೆಎಸ್‌ಗೆ ಬಿಟ್ಟುಕೊಟ್ಟಿತ್ತು. ಆದರೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಹುಲ್‌ ಇಲ್ಲಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ತುಷಾರ್‌ಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ತ್ರಿಶ್ಶೂರ್‌ ಕ್ಷೇತ್ರವನ್ನು ಬಿಜೆಪಿ ಮರಳಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಗುರುವಾರ ರಾಹುಲ್‌ ನಾಮಪತ್ರ?

ರಾಹುಲ್‌ ಗಾಂಧಿ ಅವರು ಗುರುವಾರ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆಗೆ ಅಂದು ಕೊನೆಯ ದಿನವಾಗಿದೆ.

ಬುಧವಾರ ಸಂಜೆ ರಾಹುಲ್‌ ಅವರು ಕೋಯಿಕ್ಕೋಡ್‌ ತಲುಪಲಿದ್ದಾರೆ. ಗುರುವಾರ ಅಲ್ಲಿಂದ ವಯನಾಡ್‌ಗೆ ಪ್ರಯಾಣಿಸುವರು. ತಂಗಿ ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ಬರುವ ಸಾಧ್ಯತೆ ಇದೆ. ವಯನಾಡ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಮೂಲಕ ಅವರು ಪ್ರಚಾರ ಕಾರ್ಯಕ್ಕೂ ಚಾಲನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಪಪ್ಪು’ ಪದ ಬಳಕೆಗೆ ವಿಷಾದ

ಪತ್ರಿಕೆಯ ಸಂಪಾದಕೀಯದಲ್ಲಿ ರಾಹುಲ್‌ ಗಾಂಧಿ ಅವರನ್ನು ‘ಪಪ್ಪು’ ಎಂದು ಉಲ್ಲೇಖಿಸಿರುವುದಕ್ಕಾಗಿ ಸಿಪಿಎಂ ಮುಖವಾಣಿಯಾಗಿರುವ ‘ದೇಶಾಭಿಮಾನಿ’ ವಿಷಾದ ವ್ಯಕ್ತಪಡಿಸಿದೆ.

ಕೇರಳದ ವಯನಾಡ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆಗಿಳಿಯುವ ರಾಹುಲ್‌ ಗಾಂಧಿ ಅವರ ತೀರ್ಮಾನದ ಬಗ್ಗೆ ಪತ್ರಿಕೆ ಬರೆದಿದ್ದ ಸಂಪಾದಕೀಯದಲ್ಲಿ ರಾಹುಲ್‌ ಅವರನ್ನು ‘ಪಪ್ಪು’ ಎಂದು ಉಲ್ಲೆಖಿಸಲಾಗಿತ್ತು. ಇದನ್ನು ಓದುಗರು ಆಕ್ಷೇಪಿಸಿದ್ದರು. ಅದಕ್ಕೆ ವಿಷಾದ ವ್ಯಕ್ತಪಡಿಸಿರುವ ಪತ್ರಿಕೆಯ ಸ್ಥಾನಿಕ ಸಂಪಾದಕರು, ‘ಸಂಪಾದಕೀಯದಲ್ಲಿ ‘ಪಪ್ಪು’ ಪದ ಬಳಸಿರುವುದು ಸರಿಯಲ್ಲ. ಆ ತಪ್ಪನ್ನು ತಿದ್ದಿಕೊಳ್ಳುತ್ತೇವೆ’ ಎಂದಿದ್ದಾರೆ.

ಆದರೆ, ಎಡರಂಗದ ವಿರುದ್ಧ ರಾಹುಲ್‌ ಗಾಂಧಿ ಸ್ಪರ್ಧೆಗೆಇಳಿದಿರುವುದನ್ನು ಸಿಪಿಎಂ ಬಲವಾಗಿ ವಿರೋಧಿಸುತ್ತದೆ ಎಂಬುದನ್ನು ಈ ಸಂಪಾದಕೀಯ ಸ್ಪಷ್ಟಪಡಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

‘ರಾಹುಲ್‌ ಶಕ್ತಿ ಕಳೆದುಕೊಂಡಿದ್ದಾರೆ’

‘ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬೆನ್ನುಹುರಿ ಮತ್ತು ಕಾಲುಗಳ ಶಕ್ತಿಯನ್ನು ಕಳೆದುಕೊಂಡಿದ್ದಾರೆ’ ಎಂದು ಸಿಪಿಎಂ ಮುಖಂಡ, ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್‌ ಟೀಕಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ರಾಹುಲ್‌ ಅವರನ್ನು ‘ಅಮುಲ್‌ ಬೇಬಿ’ ಎಂದು ಸಂಬೋಧಿಸಿದ್ದ ಅಚ್ಯುತಾನಂದನ್‌, ಸೋಮವಾರ ಆ ಮಾತನ್ನು ಪುನರುಚ್ಚರಿಸಿ, ‘ಅವರಿಗೆ ಭಾರತದ ರಾಜಕಾರಣದ ಪರಿಚಯ ಇಲ್ಲ. ಚುನಾವಣೆಗಾಗಿ ಕೇರಳಕ್ಕೆ ವಲಸೆ ಬರುತ್ತಿರುವ ರಾಹುಲ್‌, ತಾವು ಕುಳಿತ ಕೊಂಬೆಯನ್ನೇ ಕಡಿಯುತ್ತಿದ್ದಾರೆ’ ಎಂದರು.

2011ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದ ರಾಹುಲ್‌, ಅಚ್ಯುತಾನಂದನ್‌ ಅವರ ವಯಸ್ಸನ್ನು (90 ವರ್ಷ) ಉಲ್ಲೇಖಿಸಿ ಗೇಲಿ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಅಚ್ಯತಾನಂದನ್‌ ರಾಹುಲ್‌ ಅವರನ್ನು ‘ಅಮುಲ್‌ ಬೇಬಿ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT