ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಬೀದಿಯಲ್ಲಿ ಮೇರೆ ಮೀರಿದ ಅಭಿಮಾನ

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸುರಿದ ವರ್ಷಧಾರೆ: ನಗರದ ಸೌಂದರ್ಯ ರಕ್ಷಿಸುವ ಭರವಸೆ ನೀಡಿದ ಎಚ್‌ಡಿಕೆ
Last Updated 23 ಮೇ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸುರಿದ ಭಾರಿ ವರ್ಷಧಾರೆ, ಅಭಿಮಾನಿಗಳು ‘ಕುಮಾರಣ್ಣ’ನ ಮೇಲಿನ  ಪ್ರೀತಿಯನ್ನು ಮತ್ತಷ್ಟು ಉತ್ಕಟವಾಗಿ ವ್ಯಕ್ತಗೊಳಿಸಲು ಅವಕಾಶ ಕಲ್ಪಿಸಿತು.

ಮಳೆಯನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ನೆಚ್ಚಿನ ನಾಯಕ ನಾಡಿನ ಮುಖ್ಯಮಂತ್ರಿಯಾಗುವ ಅವಿಸ್ಮರಣೀಯ ಕ್ಷಣವನ್ನು ಕಣ್ತುಂಬಿಕೊಂಡಿತು.

ವಿಧಾನಸೌಧದ ಹೆಬ್ಬಾಗಿಲಿನ ಮೆಟ್ಟಿಲಿನಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಜನ ಬಂದಿದ್ದರು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಅವರ ಉತ್ಸಾಹ ಕುಗ್ಗಿಸಲಿಲ್ಲ. ಬದಲು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು. ಮಳೆಗೆ ಸಂಪೂರ್ಣ ತೊಯ್ದರೂ ನಿರಾಸೆ ಅನುಭವಿಸದ ಜನ ಹುರುಪಿನಿಂದಲೇ ಕಾರ್ಯಕ್ರಮಕ್ಕಾಗಿ ಕಾದರು.

ಮಳೆಯ ಆರ್ಭಟಕ್ಕೆ ಈ ಸಮಾರಂಭವನ್ನೇ ಸ್ಥಳಾಂತರಿಸಬೇಕಾಗುತ್ತದೆಯೇನೋ ‌ಎಂಬ ಆತಂಕ ಕುಮಾರಸ್ವಾಮಿ ಅಭಿಮಾನಿಗಳನ್ನು ಕಾಡಿತ್ತು. ಆದರೆ, ಸಮಾರಂಭ ಆರಂಭವಾಗುವುದಕ್ಕೆ ಒಂದು ಗಂಟೆ ಮುನ್ನವೇ ವರ್ಷಧಾರೆ ನಿಂತಿತು. ಬಳಿಕವೂ ಕಾರ್ಮೋಡ ಆವರಿಸಿತ್ತು.  ನಡುನಡುವೆ ತುಂತುರು ಹನಿಗಳು ಉದುರಿದವಾದರೂ ಬೆಂಬಲಿಗರ ಹರ್ಷಕ್ಕೆ ತಣ್ಣೀರೆರಚಲಿಲ್ಲ. ಕ್ರಮೇಣ ಕಾರ್ಮೋಡವೂ ಕರಗಿತು.

‘ನಾವು ರೈತರ ಮಕ್ಕಳು. ಇಂತಹ ಮಳೆ ನಮಗೆ ಯಾವ ಲೆಕ್ಕ’ ಎನ್ನುತ್ತಲೇ ಬೆಂಬಲಿಗರು ಅಂಬೇಡ್ಕರ್‌ ಬೀದಿಯತ್ತ ಹೆಜ್ಜೆ ಹಾಕಿದರು. ಕಾರ್ಯಕ್ರಮ ಆರಂಭವಾಗುವಷ್ಟರಲ್ಲಿ ಅಂಬೇಡ್ಕರ್‌ ಬೀದಿ ಜೆಡಿಎಸ್‌– ಕಾಂಗ್ರೆಸ್‌ ಕಾರ್ಯಕರ್ತರಿಂದ ಹಾಗೂ ಕುಮಾರಸ್ವಾಮಿ ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ತಮಟೆ ಸದ್ದು, ರಂಗು ರಂಗಿನ ಹಗಲು ವೇಷಗಳು ಇಲ್ಲಿ ಖುಷಿಯ ಹೊನಲು ಹರಿಯುವಂತೆ ಮಾಡಿದವು. ಕೆಲವರಂತೂ ತಮಟೆ ಸದ್ದಿಗೆ ಹುಚ್ಚೆದ್ದು ಕುಣಿದರು.

ಬೀದರ್‌, ಬಳ್ಳಾರಿ, ಕೋಲಾರ... ಹೀಗೆ ನಾಡಿನ ನಾನಾ ಭಾಗಗಳಿಂದ ಹಗಲು ವೇಷಧಾರಿಗಳ ತಂಡಗಳು ‘ಕುಮಾರಣ್ಣ’ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿಯೇ ಇಲ್ಲಿಗೆ ಬಂದಿದ್ದವು. ‘ನಾವು ಬಳ್ಳಾರಿಯಿಂದ 20 ಮಂದಿ ಹಗಲುವೇಷಧಾರಿಗಳು ಬಂದಿದ್ದೇವೆ. ನಾವು ರೊಕ್ಕಕ್ಕಾಗಿ ಬಂದಿಲ್ಲ. ಕುಮಾರಣ್ಣ ಮುಖ್ಯಮಂತ್ರಿಯಾಗುವ ಖುಷಿ ನಮಗೆ’ ಎಂದು ಕುಡುತಿನಿಯ ಮಾರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಳೆ ಬಿದ್ದಿದ್ದರಿಂದ ಕುರ್ಚಿಗಳೆಲ್ಲ ಒದ್ದೆಯಾಗಿದ್ದವು. ಜನ ಅವುಗಳ ಮೇಲೆ ಕುಳಿತುಕೊಳ್ಳಲಿಲ್ಲ. ಬದಲು ಕಣ್ಣೋಟಕ್ಕೆ ನಿಲುಕದ ನಾಯಕನ್ನು ತುದಿಗಾಲಿನಲ್ಲಿ ನಿಂತು ಕಣ್ತುಂಬಿಕೊಳ್ಳಲು ಈ ಆಸನಗಳು ನೆರವಾದವು. ನಡುವೆ ಒಂದೆರಡಲು ಬಾರಿ ಸುರಿದ ಹನಿ ಮಳೆಯಿಂದ ರಕ್ಷಣೆ ಪಡೆಯಲು ಈ ಕುರ್ಚಿಗಳೇ ಕೊಡೆಗಳಾದವು. ಕೆಲವರಂತೂ ಒದ್ದೆಯಾಗದಂತೆ ತಪ್ಪಿಸಿಕೊಳ್ಳಲು ಬ್ಯಾನರ್‌ಗಳನ್ನೇ ತಲೆ ಮೇಲಿಟ್ಟುಕೊಂಡರು.

ನೆಲದಲ್ಲಿ ನಿಂತರೆ ನೆಚ್ಚಿನ ನಾಯಕನ ಮೊಗ ಕಾಣದು ಎಂಬ ಕಾರಣಕ್ಕೆ ಅನೇಕರು ಅಂಬೇಡ್ಕರ್‌ ಬೀದಿಯ ಇಕ್ಕೆಲಗಳ ಬೇಲಿಗಳನ್ನೇ ಅಟ್ಟಣಿಗೆಯಾಗಿ ಬಳಸಿದರು. ಹಲವರು ಹೈಕೋರ್ಟ್‌ ಆವರಣ ಗೋಡೆಯನ್ನೇರಿ ಸಮಾರಂಭವನ್ನು ಕಣ್ತುಂಬಿಕೊಂಡರೆ, ಇನ್ನು ಕೆಲವರು ಇಲ್ಲಿ ನಿಂತಿದ್ದ ಕ್ರೇನ್‌ ಹಾಗೂ ಭದ್ರತಾ ಪಡೆಯ ಬಸ್‌ಗಳನ್ನೇರಿದರು. ಕೆಲವರಂತೂ ಮರಗಳನ್ನೇರಿ ಕಾರ್ಯಕ್ರಮ ವೀಕ್ಷಿಸಿದರು.

ಶಿವಮೊಗ್ಗದ ಹರಮಘಟ್ಟದ ಬಾಲಕ ರಮೇಶ್‌, ‘ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಎಸ್‌ಪಿ ಧ್ವಜಗಳನ್ನು ಒಂದೇ ಕೋಲಿಗೆ ಜೋಡಿಸಿ ಜೋರಾಗಿ ಬೀಸುತ್ತಿದ್ದ. ‘ನನಗೆ ಕುಮಾರಣ್ಣ ಅವರೆಂದರೆ ಪಂಚಪ್ರಾಣ. ರೈತರಿಗೆ ಅವರು ಒಳ್ಳೆಯದು ಮಾಡುತ್ತಾರೆ’ ಎಂದು  ‘ಪ್ರಜಾವಾಣಿ’ಗೆ ತಿಳಿಸಿದ.

ಶ್ರವಣಬೆಳಗೊಳ ಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಜಯರಾಮ ಅವರಿಗ ಕಾಲುಗಳಲ್ಲಿ ಬಲವಿಲ್ಲ. ಅವರು ಅಂಗವಿಕಲರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಕೂಟರ್‌ನಲ್ಲಿ ಮಗನನ್ನು ಕರೆದುಕೊಂಡು ಬಂದಿದ್ದರು. ಕಾರ್ಯಕ್ರಮ ಆರಂಭವಾಗುವುದನ್ನು ಒಂದು ಗಂಟೆ ಮುನ್ನವೇ ವಿಧಾನಸೌಧದ ಎದುರು ಠಿಕಾಣಿ ಹೂಡಿದ್ದರು.

ಸಮಾರಂಭ ಮುಗಿದ ಬಳಿಕ ಊರಿಗೆ ಮರಳುವ ಧಾವಂತದಲ್ಲಿದ್ದುದರಿಂದ ನೂಕುನುಗ್ಗಲು ಉಂಟಾಯಿತು. ಅಂಬೇಡ್ಕರ್‌ ಬೀದಿಯ ಎರಡು ಮಾರ್ಗಗಳ ನಡುವಿನ ಹೂದೋಟದ ಗಿಡಗಳು ತುಳಿತಕ್ಕೆ ಸಿಲುಕಿ ನಲುಗಿದವು. ಕುರ್ಚಿಗಳ ಕಾಲುಗಳು ಮುರಿದವು.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನೀಲ‌ ನಕ್ಷೆ: ಎಚ್‌ಡಿಕೆ

ಬೆಂಗಳೂರು: ‘ನಗರದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿಂದ ನೀಲ ನಕ್ಷೆ ಸಿದ್ಧಪಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ನಗರದ ಸೌಂದರ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ನಿಯಮಗಳಿಗೆ ಸ್ಪಂದಿಸಿ, ಕಸವಿಲೇವಾರಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ’ ಎಂದು ನಗರದ ನಿವಾಸಿಗಳಿಗೆ ಅವರು ಬುಧವಾರ ಮನವಿ ಮಾಡಿದರು.

‘ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಮ್ಮ ಬೆಂಗಳೂರು ವಿಶ್ವದ ಮುಕುಟ ಮಣಿ. ದೇಶದ ಆರ್ಥಿಕತೆಯಲ್ಲಿ ಈ ನಗರದ ಪಾತ್ರ ಬಹಳ ದೊಡ್ಡದು. ಇಲ್ಲಿ ಮೆಟ್ರೊ ರೈಲು ಆರಂಭಿಸುವ ಉದ್ದೇಶದಿಂದ ಹನ್ನೊಂದು ವರ್ಷಗಳ ಹಿಂದೆ ನವದೆಹಲಿಯಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ್ದೆ. ಅಂದು ದೆಹಲಿ ಮೆಟ್ರೊ ಯೋಜನೆಯ ಮುಖ್ಯಸ್ಥರಾಗಿದ್ದ ಇ. ಶ್ರೀಧರನ್ ತಕ್ಷಣವೇ ಬೆಂಗಳೂರು ಮೆಟ್ರೊ ಕಾಮಗಾರಿಗೆ ಚಾಲನೆ ನೀಡಿ ಎಂದು ಸಲಹೆ ನೀಡಿದ್ದರು’ ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು.

‘ಅಂದು ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಎಸ್. ಜಯಪಾಲ ರೆಡ್ಡಿ ಅವರನ್ನು ಭೇಟಿ ಮಾಡಿ ಮೆಟ್ರೊ ಯೋಜನೆಗೆ ಚಾಲನೆ ನೀಡುವಂತೆ ಮನವಿ ಮಾಡಿದ್ದೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನನ್ನ ಮನವಿಯನ್ನು ಪುರಸ್ಕರಿಸಿ ಮೆಟ್ರೊ ರೈಲು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಸಂಚಾರ ದಟ್ಟಣೆ ಕಡಿಮೆ ಮಾಡಿ, ಬೆಂಗಳೂರು ವಿಶ್ವ ದರ್ಜೆಗೆ ಬೆಳೆಸಲು ಮತ್ತು ಮೆಟ್ರೊ ರೈಲು ಮಾರ್ಗ ವಿಸ್ತರಿಸಲು ಆದ್ಯತೆ ನೀಡುತ್ತೇನೆ’ ಎಂದರು.

‘ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆ ಆಗಿತ್ತು. ಪರಿಣಾಮ, ಬೆಂಗಳೂರಿನ ಸುತ್ತಮುತ್ತಲಿನ ಏಳು ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆಗಳು ಹಾಗೂ 110 ಗ್ರಾಮಗಳು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿ ಕಾಣುತ್ತಿವೆ. ನಗರವನ್ನು ಇನ್ನಷ್ಟು ಸುಂದರವಾಗಿಸಬೇಕು. ಮೂಲಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲು ಬದ್ಧ’ ಎಂದೂ ಅವರು ಭರವಸೆ ನೀಡಿದರು.

ಅಭಿಮಾನ ಮೆರೆದ ಬಾಲಕಿ

ಹಸಿರು ಸೀರೆಯುಟ್ಟು, ತಲೆ ಮೇಲೆ ತೆನೆ ಹೊತ್ತ ಬಾಲಕಿ ಮೋನಿಕಾ ಆಕರ್ಷಣೆಯ ಕೇಂದ್ರವಾಗಿದ್ದಳು. ಹೊಸಕೋಟೆಯ ತಾಲ್ಲೂಕಿನ ಹೆಮ್ಮಂಡಹಳ್ಳಿಯ ಈ ಬಾಲಕಿ ಗಂಟೆಗಟ್ಟಲೆ ಈ ರೀತಿ ಅಭಿಮಾನ ವ್ಯಕ್ತಪಡಿಸುವುದರ ಹಿಂದಿನ ಕರುಣಾಜನಕ ಕತೆಯನ್ನು ಆಕೆಯ ತಾಯಿ ಸಂಧ್ಯಾರಾಣಿ ಕಟ್ಟಿಕೊಟ್ಟರು.

‘ಮಗಳು ರೋಗನಿರೋಧಕ ಶಕ್ತಿ ಕುಗ್ಗಿಸುವ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆಯ ಚಿಕಿತ್ಸೆಗೆ ₹ 30 ಲಕ್ಷ ವೆಚ್ಚವಾಗಿದೆ. ಕಷ್ಟದ ಸಂದರ್ಭದಲ್ಲಿ ನಾವು ಯಾವ ಪಕ್ಷ, ಯಾವ ಜಾತಿ ಎಂಬುದನ್ನು ನೋಡದೇ ಕುಮಾರಸ್ವಾಮಿ ನೆರವಾಗಿದ್ದಾರೆ. ಮಗಳು ಬದುಕುಳಿಯುವುದಕ್ಕೆ ಅವರೇ ಕಾರಣ’ ಎಂದರು.

‘ಕುಮಾರಣ್ಣ ಮುಖ್ಯಮಂತ್ರಿಯಾಗುವ ಸಂಭ್ರಮಕ್ಕೆ ನಮ್ಮ ಮಗಳಿಂದ ಈ ಕಿರು ಸೇವೆ’ ಎಂದು ಬಾಲಕಿಯ ತಂದೆ ಸಂಪಂಗಿ ತಿಳಿಸಿದರು.

ನೆರವು ಕೋರಿ ಬಂದ ಅಂಧ

ಬೀದರ್‌ ಜಿಲ್ಲೆಯ ಭಾಲ್ಕಿಯ ಅಂಧ ಕಲ್ಲಪ್ಪ ಅವರು ಊರಿಗೆ ಮರಳಲು ನೆರವು ಕೋರಿ ವಿಧಾನಸೌಧದತ್ತ ಬಂದಿದ್ದರು.

‘ಸಂಗೀತ ಪರೀಕ್ಷೆಗೆ ಹಾಜರಾಗಲು ಮೈಸೂರಿಗೆ ತೆರಳಿದ್ದೆ. ಅಲ್ಲಿಂದ ಮರಳುವಾಗ ಬಸ್‌ನಲ್ಲಿ ಪ್ರಯಾಣಿಸುವ ಉಚಿತ ಪಾಸ್‌ ಕಳೆದುಹೊಯಿತು. ಟಿಕೆಟ್‌ ತ‍ಪಾಸಣೆ ವೇಳೆ ಪಾಸ್‌ ಇಲ್ಲದ ಕಾರಣಕ್ಕೆ ನನ್ನನ್ನು ಬಸ್‌ನಿಂದ ಅರ್ಧದಲ್ಲೇ ಇಳಿಸಿದರು. ಇಲ್ಲಿ ಯಾರಾದರೂ ನೆರವಾಗಬಹುದು ಎಂಬ ನಿರೀಕ್ಷೆಯಿಂದ ಬಂದೆ. ನನಗೆ ಹಣ ಬೇಡ. ಊರಿಗೆ ಹೋಗಲು ಟಿಕೆಟ್‌ ಕೊಡಿಸಿ ಸಾಕು’ ಎಂದು ಅವರು ಅಂಗಲಾಚುತ್ತಿದ್ದರು.

ರಾಜಕೀಯ ಮುಖಂಡರಿಗೆ ಜೈಕಾರ ಹಾಕುವುದರಲ್ಲಿ ತಲ್ಲೀನರಾಗಿದ್ದ ಮರಿ ಪುಢಾರಿಗಳು ಯಾರೂ ಅವರ ನೆರವಿದೆ ಧಾವಿಸಲಿಲ್ಲ. ಬಳಿಕ ಪೊಲೀಸರು, ‘ನಾಳೆ ವಿಧಾನ ಸಭೆಗೆ ನಿಮ್ಮೂರಿನ ಶಾಸಕರು ಬರುತ್ತಾರೆ. ಅವರಲ್ಲಿ ನೆರವು ಕೇಳು’ ಎಂದು ಕಲ್ಲಪ್ಪ ಅವರನ್ನು ಶಾಸಕರ ಭವನದತ್ತ ಕಳುಹಿಸಿಕೊಟ್ಟರು.

ರಾಜ್ಯಪಾಲರು ಬಂದಾಗ ಅಸಹನೆ

ವೇದಿಕೆಗೆ ಗಣ್ಯರು ಬರುತ್ತಿದ್ದಂತೆಯೇ ಜನ ಶಿಳ್ಳೆ, ಕೇಕೆ ಹಾಕುತ್ತಿದ್ದರು. ದೇವೇಗೌಡ ಹಾಗೂ ಕುಮಾರಸ್ವಾಮಿ ವೇದಿಕೆ ಮೇಲೆ ಬಂದಾಗಲಂತೂ ಕೇಕೆ ಸದ್ದು ಮುಗಿಲುಮುಟ್ಟಿತು. ರಾಜ್ಯಪಾಲ ವಜುಭಾಯಿ ವಾಲಾ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಾಗ ಕೆಲವರು ಧಿಕ್ಕಾರ ಹಾಕಿದರು. ‘ಡೌನ್‌ ಡೌನ್‌... ಗವರ್ನರ್‌’ ಎಂದು ಕೂಗಿದರು.

ಕೆನ್ನೆ ಕೆನ್ನೆಯಲ್ಲಿ ಎಚ್‌ಡಿಕೆ

ಕಾರ್ಯಕ್ರಮಕ್ಕೆ ಬಂಧ ಕುಮಾರಸ್ವಾಮಿ ಬೆಂಬಲಿಗರು ಕೆನ್ನೆಗಳ ಮೇಲೆ ಎಚ್‌ಡಿಕೆ ಎಂಬ ಅಕ್ಷರಗಳನ್ನು ಬರೆಸಿಕೊಂಡು ಸಂಭ್ರಮಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಮುಖದಲ್ಲಿ ಎಚ್‌ಡಿಕೆ ಹೆಸರು ಬರೆಸಿ, ಕೊಳಲಲ್ಲಿ ಪಕ್ಷದ ಶಾಲು ಧರಿಸಿ ಖುಷಿಯ ‘ಸಮ್ಮಿಶ್ರ’ ಭಾವ ಅನುಭವಿಸಿದರು.

ಜಲವರ್ಣ ಬಳಸಿ ಮುಖದಲ್ಲಿ ಚಿತ್ತಾರ ಬರೆಯುತ್ತಿದ್ದ ಮಂಗಳೂರಿನ ಶಾನ್‌ ಇದಕ್ಕೆ ಪ್ರತಿ ವ್ಯಕ್ತಿಯಿಂದ ₹ 30 ವಸೂಲಿ ಮಾಡುತ್ತಿದ್ದರು.

ಜನ ಏನನ್ನುತ್ತಾರೆ?

‘ರೈತರ ಸಮಸ್ಯೆ ಬಗೆಹರಿಯಲಿ’

ಭಿನ್ನಮತಗಳು ಇದ್ದರೇನೇ ಪ್ರಜಾಪ್ರಭುತ್ವ ಅರ್ಥಗರ್ಭಿತವಾಗುತ್ತದೆ. ರಾಜ್ಯದಲ್ಲಿ ರೈತರ ಪರಿಸ್ಥಿತಿ ಚೆನ್ನಾಗಿಲ್ಲ. ಕುಮಾರಸ್ವಾಮಿ ಅವರು ನೀಡಿರುವ ಭರವಸೆಯಂತೆ ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ.

-ಸಿ.ತಮ್ಮಯ್ಯ, ಮಂಡ್ಯ

‘ದೇಶಕ್ಕೆ ಹೊಸ ತಿರುವು’

ಇಡೀ ದೇಶದ ರಾಜಕಾರಣಕ್ಕೆ ಕರ್ನಾಟಕದ ಬೆಳವಣಿಗೆ ಹೊಸ ತಿರುವು ನೀಡಿದೆ. ಲೋಕಸಭಾ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದಕ್ಕೆ ಮುನ್ನುಡಿ ಬರೆದಿದೆ. ಸಮ್ಮಿಶ್ರ ಸರ್ಕಾರ ಗ್ರಾಮೀಣ ಜನರ ಆಶೋತ್ತರ ಈಡೇರಿಸಬೇಕು

– ಲಿಂಗೇಗೌಡ, ಚನ್ನಪಟ್ಟಣ

‘ಸಾಲ ಮನ್ನಾ ಮಾಡಲಿ’

ಕುಮಾರಸ್ವಾಮಿ ಅವರು ಭರವಸೆ ನೀಡಿದಂತೆಯೇ ರೈತರ ಸಾಲ ಮನ್ನಾ ಮಾಡಬೇಕು. ಅವರ ಬದುಕು ಹಸನುಗೊಂಡರೆ ಉಳಿ
ದವರಿಗೆಲ್ಲ ಒಳ್ಳೆಯದೇ ಆಗುತ್ತದೆ

-ಜ್ಯೋತಿ, ಬೆಂಗಳೂರು

‘ಲೂಟಿಕೋರರು ಬರಲಿಲ್ಲ ಎಂಬ ಖುಷಿ’

ರಾಜ್ಯವನ್ನು ಲೂಟಿ ಹೊಡೆದ ಪಕ್ಷದವರು ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂಬ ಖುಷಿ ಇದೆ. ಸಿದ್ದರಾಮಯ್ಯ ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದರೂ, ಅಧೀರರಾಗಿರಲಿಲ್ಲ. ಕುಮಾರಸ್ವಾಮಿ ಅವರೂ ಅದೇ ರೀತಿ ದಿಟ್ಟತನದ ಆಡಳಿತ ನೀಡಬೇಕು

-ಸರಸ್ವತಿ, ಜಯನಗರ

‘ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ’

ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದು ತುಂಬಾ ಖುಷಿ ತಂದಿದೆ. ಈ ಸಂಭ್ರಮ ಕಣ್ತುಂಬಿಕೊಳ್ಳುವ ಸಲುವಾಗಿಯೇ ನಾನು 450 ಕೀ.ಮೀ ದೂರದಿಂದ ಬಂದಿ
ದ್ದೇನೆ. ಅವರು ಉತ್ತಮ
ಆಡಳಿತ ನೀಡುತ್ತಾರೆ ಎಂಬ ವಿಶ್ವಾಸವಿದೆ

-ಸುಭಾಷ್‌ ಕಡೇಮನಿ, ಅಣ್ಣಿಗೇರಿ

‘ಬಿಜೆಪಿಗೆ ನೀಡಬೇಕಿತ್ತು’

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದು ಖುಷಿಯ ವಿಚಾರ. ಆದರೆ, ಕಾಂಗ್ರೆಸ್‌ ಜೊತೆಗೆ ಸೇರಿ ಸರ್ಕಾರ ರಚಿಸಿದ್ದು ಅಷ್ಟಾಗಿ ತೃಪ್ತಿ ಕೊಟ್ಟಿಲ್ಲ.

– ಗುರು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT