ಸೋಮವಾರ, ಜನವರಿ 20, 2020
29 °C
ಗೌರವ ವಂದನೆ ಸ್ವೀಕರ

ರಾಜಕೀಯದಿಂದ ಸೇನೆ ದೂರ: ಸಿಡಿಎಸ್‌ ಬಿಪಿನ್‌ ರಾವತ್‌ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸೇನಾ ಪಡೆಗಳು ರಾಜಕೀಯದಿಂದ ದೂರವಿರುತ್ತವೆ. ಅಧಿಕಾರದಲ್ಲಿರುವ ಸರ್ಕಾರ ನೀಡುವ ಸೂಚನೆಗೆ ಅನುಸಾರವಾಗಿ ನಾವು ಕಾರ್ಯನಿರ್ವಹಿಸುತ್ತೇವೆ’ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್‌) ಜನರಲ್‌ ಬಿಪಿನ್‌ ರಾವತ್‌ ಹೇಳಿದರು. 

ಸೇನೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎನ್ನುವ ಆರೋಪ ಹಾಗೂ ಸಿಡಿಎಸ್‌ ನೇಮಕಾತಿ ಬಗ್ಗೆ ಕಾಂಗ್ರೆಸ್‌ ಪಕ್ಷದ ಮುಖಂಡರು ಪ್ರಶ್ನೆ ಎತ್ತಿರುವ ಸಂದರ್ಭದಲ್ಲೇ ರಾವತ್‌ ಈ ಸ್ಪಷ್ಟನೆ ನೀಡಿದ್ದಾರೆ.

ಸಾಮರ್ಥ್ಯ ದುಪ್ಪಟ್ಟು: ‘ಮೂರೂ ಪಡೆಗಳು ತಂಡವಾಗಿಯೇ ಕಾರ್ಯಾಚರಣೆ ನಡೆಸಲಿವೆ. ಇವುಗಳಿಗೆ ಒದಗಿಸಲಾದ ಸಂಪನ್ಮೂಲದ ಸೂಕ್ತ ಬಳಕೆ ಹಾಗೂ ಸಾಮರ್ಥ್ಯ ಹೆಚ್ಚಿಸುವ ಹೊಣೆಗಾರಿಕೆ ಸಿಡಿಎಸ್‌ ಮೇಲಿದೆ. ಮೂರೂ ಪಡೆಗಳು ಜೊತೆಯಾಗಿ ಕಾರ್ಯಾಚರಣೆಗೆ ಇಳಿದಾಗ ಸೇನೆಗೆ ಸಾಮರ್ಥ್ಯ ದುಪ್ಪಟ್ಟಾಗಬೇಕು ಅಥವಾ ಅದಕ್ಕಿಂತ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು. ಇದು ಸಿಡಿಎಸ್‌ ಗುರಿ. ಸರ್ಕಾರ ನೀಡಿದ ಮೂರು ವರ್ಷದ ಗಡುವಿನೊಳಗೇ ಭೂ ಸೇನೆ, ವಾಯುಪಡೆ ಹಾಗೂ ನೌಕಾಪಡೆಯನ್ನು ಏಕೀಕರಿಸಲು ಶ್ರಮಿಸುವುದಾಗಿ’ ತಿಳಿಸಿದರು.

ವಿವಾದದಿಂದ ದೂರ
ಸಿಡಿಎಸ್‌ ನೇಮಕಾತಿಯನ್ನು ಪ್ರಶ್ನಿಸಿದ್ದ ಪಕ್ಷದ ಮುಖಂಡರಾದ ಮನೀಷ್‌ ತಿವಾರಿ ಹಾಗೂ ಅಧೀರ್‌ ರಂಜನ್‌ ಚೌಧರಿ ಹೇಳಿಕೆಗಳಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ‘ರಾಷ್ಟ್ರದ ಭದ್ರತೆಯನ್ನು ಹೆಚ್ಚಿಸುವ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ವಿರೋಧಿಸುವುದಿಲ್ಲ’ ಎಂದು ಪಕ್ಷದ ವಕ್ತಾರೆ ಸುಶ್ಮಿತ ದೇವ್‌ ಹೇಳಿದರು. ‘ಸಿಡಿಎಸ್‌ ಕಾರ್ಯವೈಖರಿಯನ್ನು ರಾಷ್ಟ್ರವು ಗಮನಿಸಲಿದೆ. ಅದಕ್ಕೂ ಮುನ್ನ ಹೇಳಿಕೆಗಳನ್ನು ನೀಡುವುದು ಸರಿಯಾಗುವುದಿಲ್ಲ’ ಎಂದಿದ್ದಾರೆ. 

ಮಹತ್ವಪೂರ್ಣ ಸುಧಾರಣೆ: ಪ್ರಧಾನಿ
‘ಸೇನಾ ವ್ಯವಹಾರಗಳ ಇಲಾಖೆ ಹಾಗೂ ಸಿಡಿಎಸ್‌ ಹುದ್ದೆಯ ಸೃಷ್ಟಿಯು ಮಹತ್ವಪೂರ್ಣ ಸುಧಾರಣೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಮೋದಿ, ‘ಆಧುನಿಕ ಯುದ್ಧದಲ್ಲಿ ಎದುರಾಗುವ ಸವಾಲುಗಳನ್ನು ರಾಷ್ಟ್ರವು ಸಮರ್ಥವಾಗಿ ಎದುರಿಸಲು ಸೇನಾ ವ್ಯವಹಾರಗಳ ಇಲಾಖೆ ರಚನೆ ಹಾಗೂ ಸಿಡಿಎಸ್‌ ಹುದ್ದೆ ನೆರವಾಗಲಿದೆ. ರಾವತ್‌ ಶ್ರೇಷ್ಠ ಅಧಿಕಾರಿಯಾಗಿದ್ದು, ಶ್ರದ್ಧೆಯಿಂದ ದೇಶಸೇವೆ ಮಾಡಿದ್ದಾರೆ. ರಾಷ್ಟ್ರದ ಸೇನೆಯನ್ನು ಆಧುನೀಕರಣಗೊಳಿಸುವ ಮಹತ್ವದ ಹೊಣೆಗಾರಿಕೆ ಸಿಡಿಎಸ್‌ ಮೇಲಿದೆ’ ಎಂದು ಉಲ್ಲೇಖಿಸಿದ್ದಾರೆ. 

ರಕ್ಷಣಾ ಸಚಿವರ ಭೇಟಿ
ಸಿಡಿಎಸ್‌ ಹುದ್ದೆ ಸ್ವೀಕರಿಸಿದ ಜನರಲ್‌ ಬಿಪಿನ್‌ ರಾವತ್‌ ಬುಧವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾದರು. ‘ಬಿಪಿನ್‌ ರಾವತ್‌ ಅವರು ಸಿಡಿಎಸ್‌ ಹುದ್ದೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ರಕ್ಷಣಾ ಸಚಿವರು ಅಭಿನಂದನೆ ಸಲ್ಲಿಸಿದರು’ ಎಂದು ರಕ್ಷಣಾ ಸಚಿವರ ಕಚೇರಿ ಟ್ವೀಟ್‌ ಮಾಡಿದೆ. 

*
ಸಿಡಿಎಸ್‌ ನೇಮಕ ಮಹತ್ವಪೂರ್ಣ ಹಾಗೂ ಐತಿಹಾಸಿಕವಾದದ್ದು. ಬಹಳ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಯನ್ನು ಪ್ರಧಾನಿ ಈಡೇರಿಸಿದ್ದಾರೆ.
–ಅಮಿತ್‌ ಶಾ, ಗೃಹ ಸಚಿವ‌

*
ಸಿಡಿಎಸ್‌ ನೇಮಕಾತಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ಪಕ್ಷವು ‘ದಿಕ್ಕು ತೋಚದ ಪಕ್ಷ’ವಾಗಿದೆ. ಈ ವಿಚಾರದಲ್ಲೂ ರಾಜಕೀಯ ಖಂಡನೀಯ.
–ಪ್ರಕಾಶ್ ಜಾವಡೇಕರ್‌, ಕೇಂದ್ರ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು