ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ರಚನೆಗೆ ಸಂಬಂಧಿಸಿ ಈವರೆಗೆ ಯಾವುದೇ ತೀರ್ಮಾನವಾಗಿಲ್ಲ: ಪ್ರಧಾನಿ ಮೋದಿ

‘ನವಭಾರತ ನಿರ್ಮಾಣಕ್ಕೆ ಹೊಸ ಪಯಣ’
Last Updated 25 ಮೇ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಎನ್‌ಡಿಎ ಸರ್ಕಾರ ಇನ್ನಷ್ಟು ಚೈತನ್ಯ ತುಂಬಿಕೊಂಡು ನವ ಭಾರತ ನಿರ್ಮಾಣಕ್ಕಾಗಿ ಹೊಸ ಪ್ರಯಾಣವನ್ನು ಆರಂಭಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎನ್‌ಡಿಎ ಸಂಸದೀಯ ಪಕ್ಷದ ನಾಯಕನಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾದ ಬಳಿಕ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮ, ಜಾತಿ ಸೇರಿದಂತೆ ಯಾವುದೇ ಭೇದಭಾವಗಳನ್ನು ಮಾಡದೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸಂಸದರಿಗೆ ಕರೆ ನೀಡಿದರು.

ಹೊಸ ಸಂಸದರನ್ನು ಉದ್ದೇಶಿಸಿ ಸುಮಾರು 75 ನಿಮಿಷಗಳ ಕಾಲ ಮಾತನಾಡಿದ ಮೋದಿ, ವಿರೋಧ ಪಕ್ಷಗಳ ವೋಟ್‌ಬ್ಯಾಂಕ್‌ ರಾಜಕಾರಣವನ್ನು ಟೀಕಿಸಿದರು. ‘ವೋಟ್‌ಬ್ಯಾಂಕ್‌ ಭದ್ರಪಡಿಸುವ ಉದ್ದೇಶದಿಂದ ದೇಶದ ಅಲ್ಪಸಂಖ್ಯಾತರು ಭಯದಲ್ಲಿಯೇ ಜೀವನ ಮಾಡುವಂಥ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಈಗ ಅಲ್ಪಸಂಖ್ಯಾತರ ವಿಶ್ವಾಸವನ್ನು ಗೆದ್ದುಕೊಂಡು ಆಡಳಿತ ನಡೆಸುವುದು ಅಗತ್ಯ. 1857ರಲ್ಲಿ ಎಲ್ಲ ಸಮುದಾಯದವರೂ ಒಟ್ಟಾಗಿ ದೇಶದ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು. ಇಂದು ಒಳ್ಳೆಯ ಆಡಳಿತಕ್ಕಾಗಿ ಅಂಥದ್ದೇ ಒಂದು ಆಂದೋಲನವನ್ನು ಆರಂಭಿಸಬೆಕಾಗಿದೆ’ ಎಂದರು.

‘ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಬೇಡಿ’ ಎಂಬುದೂ ಸೇರಿದಂತೆ ಸಂಸದರಿಗೆ ಕೆಲವು ಸಲಹೆಗಳನ್ನು ಅವರು ನೀಡಿದರು. ‘ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಊಹಾಪೋಹಗಳನ್ನು ನಂಬಬೇಡಿ. ಗೊಂದಲ ಉಂಟುಮಾಡುವ ಮತ್ತು ಅನೇಕ ಸಂದರ್ಭದಲ್ಲಿ ಕೆಟ್ಟ ಉದ್ದೇಶದಿಂದ ಇಂಥ ಊಹಾಪೋಹಗಳನ್ನು ತೇಲಿಬಿಡಲಾಗುತ್ತದೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ನಾವು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಿಯಮಗಳಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ಹಂಚಲಾಗುವುದು’ ಎಂದು ಮೋದಿ ಸ್ಪಷ್ಟಪಡಿಸಿದರು.

‘2014ರಿಂದ 19ರವರೆಗಿನ ಅವಧಿಯಲ್ಲಿ ನಾವು ಬಡವರಿಗಾಗಿ ಕೆಲಸ ಮಾಡಿದೆವು. ಈ ಬಾರಿ ಬಡವರೇ ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ರಾಷ್ಟ್ರಾಭಿವೃದ್ಧಿಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ಪ್ರಾದೇಶಿಕ ಆಕಾಂಕ್ಷೆಗಳನ್ನು ಈಡೇರಿಸುವುದೇ ನಮ್ಮ ಸರ್ಕಾರದ ಗುರಿ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT