ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ: ಗೊಂದಲದ ಗೂಡು

ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ
Last Updated 23 ಏಪ್ರಿಲ್ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ (ಏ.24) ಕೊನೆಯ ದಿನವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಕೆಲವು ಕ್ಷೇತ್ರಗಳಿಗೆ ಸೋಮವಾರ ರಾತ್ರಿವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗದೆ ಇಕ್ಕಟ್ಟಿಗೆ ಸಿಲುಕಿವೆ.

‌ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸಲಿ
ದ್ದಾರೆ. ಆ ಮೂಲಕ ಈ ಕ್ಷೇತ್ರ ಭಾರಿ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗುವ ಲಕ್ಷಣವಿದೆ.

ಈ ಮಧ್ಯೆ ವರುಣಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ನಿರಾಕರಿಸಿರುವುದಕ್ಕೆ ಮೈಸೂರಿನಲ್ಲಿ ಕಾರ್ಯಕರ್ತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿಜಯೇಂದ್ರ ಕಣದಿಂದ ಹಿಂದಕ್ಕೆ ಸರಿದಿರುವುದರಿಂದ ಅಲ್ಲಿ  ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್‌ ನಿರ್ಧರಿಸಿದೆ.

ಕಾಂಗ್ರೆಸ್‌ 223 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಿದ್ದರೂ, ಸಾಕಷ್ಟು ಕ್ಷೇತ್ರಗಳಲ್ಲಿ  ಕಾರ್ಯಕರ್ತರ ಪ್ರತಿರೋಧ ಎದುರಿಸುತ್ತಿದೆ. ಜೆಡಿಎಸ್‌ ಇನ್ನೂ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿಯೊಬ್ಬ ಆಕಾಂಕ್ಷಿಯ ಮನವೊಲಿಸಿ ಅಭ್ಯರ್ಥಿ ಅಂತಿಮಗೊಳಿಸುವ ಕಸರತ್ತಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತೊಡಗಿದ್ದಾರೆ.

ಬಿಜೆಪಿ ಸೋಮವಾರ ಬೆಳಿಗ್ಗೆ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ವರುಣಾ, ಬಾದಾಮಿ, ಸಕಲೇಶಪುರ, ಶಿಡ್ಲಘಟ್ಟ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇರಲಿಲ್ಲ. ಇದಾದ ಕೆಲವೇ ಹೊತ್ತಿನಲ್ಲಿ ನಂಜನಗೂಡಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ವಿಜಯೇಂದ್ರ ಈ ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ’ ಎಂದು ಹೇಳಿದರು.

ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ವೇದಿಕೆ ಮೇಲಿದ್ದ ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿ ಹೊರ ಹೋಗದಂತೆ ತಡೆದರು. ಸ್ಪರ್ಧೆಗೆ ಪಟ್ಟು ಹಿಡಿದು ಘೋಷಣೆ ಕೂಗಿ ಆತ್ಮಹತ್ಯೆ ಬೆದರಿಕೆಯೊಡ್ಡಿದರು. ಕಾರ್ಯಕರ್ತರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ವಿಜಯೇಂದ್ರ ಅವರು ಸೋಮ
ವಾರ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದರು.

ಪಕ್ಷದ ನಿರ್ಧಾರಕ್ಕೆ ಬದ್ಧ: ‘ರಾಜ್ಯದ ಅಭಿವೃದ್ಧಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಇದೊಂದೇ ನಮ್ಮೆಲ್ಲರ ಗುರಿಯಾಗಿದ್ದು, ಒಗ್ಗಟ್ಟಿನಿಂದ ಶ್ರಮಿಸೋಣ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕು’ ಎಂದು ಬಿ.ವೈ.ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಲಾಠಿ ಪ್ರಹಾರ: ಬಾಗಲಕೋಟೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು, ಶಾಸಕ ಎಚ್.ವೈ. ಮೇಟಿ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬೆಂಬಲಿಗರೊಂದಿಗೆ ಸೋಮವಾರ ನಡೆಸಿದ ಮೆರವಣಿಗೆ ಗದ್ದಲಕ್ಕೆ ಕಾರಣವಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಹಬಂದಿಗೆ ತಂದರು.

ಹೈಕಮಾಂಡ್‌ ಮೇಲೆ ಒತ್ತಡ

ನವದೆಹಲಿ: ಕೆಲವು ದಿನಗಳಿಂದ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತ ಸ್ಪರ್ಧೆಗೆ ಅಣಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ

ಕೊನೆಯ ಗಳಿಗೆಯಲ್ಲಿ ಟಿಕೆಟ್‌ ನಿರಾಕರಿಸಿದ್ದಕ್ಕೆ, ‘ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್‌ ಬೇಡ’ ಎಂಬ ಪಕ್ಷದ ಹೈಕಮಾಂಡ್‌ ನಿರ್ಧಾರವೇ ಕಾರಣವಾಗಿದೆ.

ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆದ್ದರೆ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಚುನಾವಣೆಗೆ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಬೇಕಾಗುತ್ತದೆ. ಅಲ್ಲಿಗೆ ಕುಟುಂಬವೊಂದರ ಮೂವರಿಗೆ ಟಿಕೆಟ್ ನೀಡಿದಂತಾಗಲಿದೆ.

ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿರುವ ಪಕ್ಷಕ್ಕೆ ಇದರಿಂದ ಮುಜುಗರ ಎದುರಾಗಲಿದೆ ಎಂಬ ಕಾರಣದಿಂದಲೇ ಪಕ್ಷದ ವರಿಷ್ಠರು ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವುದಕ್ಕೆ ನಿರಾಕರಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೆಜೆಪಿಯಿಂದ ಪಕ್ಷ ಸೇರಿರುವ ಬಹುತೇಕರಿಗೆ ಈಗಾಗಲೇ ಟಿಕೆಟ್‌ ನೀಡಲಾಗಿದೆ. ಹಾಗಾಗಿ ‘ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವುದು ಬೇಡವೇ ಬೇಡ’ ಎಂದು ರಾಜ್ಯದ ಪ್ರಭಾವಿ ಕೇಂದ್ರ ಸಚಿವರೊಬ್ಬರು ಹಾಗೂ ದಕ್ಷಿಣದ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿರುವ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಒತ್ತಡ ಹೇರಿ, ಪಟ್ಟು ಹಿಡಿದಿದ್ದರಿಂದ ಸೋಮವಾರ ಮಧ್ಯಾಹ್ನದ ವೇಳೆಗೆ ಟಿಕೆಟ್‌ ನಿರಾಕರಿಸಿದ ಸಂದೇಶ ರವಾನೆಯಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ರುದ್ಧ ಪ್ರಬಲ ಅಭ್ಯರ್ಥಿಯೊಬ್ಬರನ್ನೇ ಕಣಕ್ಕಿಳಿಸಬೇಕು ಎಂದು ನಿರ್ಧರಿಸಿರುವ ಪಕ್ಷವು, ಮೈಸೂರು ರಾಜ ಮನೆತನದ ಯುವರಾಜ ಯದುವೀರ್‌ ಅಥವಾ ರಾಣಿ ಪ್ರಮೋದಾದೇವಿ ಅವರನ್ನು ಪಕ್ಷದತ್ತ ಸೆಳೆಯಲು ಕೊನೆಯ ಪ್ರಯತ್ನ ಮುಂದುವರಿಸಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT