ಮಂಗಳವಾರ, ಮೇ 18, 2021
23 °C

ಕೆರೆಗಳ ಒತ್ತುವರಿ ತೆಡೆಗೆ ಕೇಂದ್ರ ಅಧಿಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿಯನ್ನು ತಡೆಯಲು ಅಧಿಸೂಚನೆ ಹೊರಡಿಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಹಸಿರು ನ್ಯಾಯಪೀಠಕ್ಕೆ ತಿಳಿಸಿದೆ.

ತಕ್ಷಣದಿಂದಲೇ ಕೆರೆಗಳನ್ನು ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಲಾಗಿದೆ ಎಂದು ತಿಳಿಸಿದೆ.

ಕೆರೆಗಳು ಮತ್ತು ಜೌಗು ಪ್ರದೇಶಗಳನ್ನು ಕಸ ಸಂಗ್ರಹ ಮತ್ತು ತ್ಯಾಜ್ಯ ವಿಲೇವಾರಿಗೆ ಬಳಸದಂತೆ ನಿರ್ಬಂಧಿಸುವ ಪ್ರಸ್ತಾಪ ಈ ಅಧಿಸೂಚನೆಯಲ್ಲಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ.

2017ರ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾದ ‘ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಕಾಯ್ದೆ’ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸುಪ್ರಿಂ ಕೋರ್ಟ್ ಈಗಾಗಲೇ ದೇಶದಲ್ಲಿ ಹಲವಾರು ಕೆರೆಗಳನ್ನು ಗುರುತಿಸಿ, ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಪಟ್ಟಿಯಲ್ಲಿ ಆಕಸ್ಮಿಕವಾಗಿ ಬಿಟ್ಟುಹೋದ ಕೆರೆಗಳನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಳ್ಳಬಹುದು ಎಂದು ದ್ವಿಸದಸ್ಯ ಪೀಠ ಅರ್ಜಿದಾರರಿಗೆ ಸಲಹೆ ಮಾಡಿದೆ.

ಕೆರೆ ಮತ್ತು ಜೌಗು ಪ್ರದೇಶಗಳನ್ನು ಗುರುತಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಪರಿಸರ ಹೋರಾಟಗಾರರಾದ ಆನಂದ ಆರ್ಯ ಮತ್ತು ಪುಷ್ಪಾ ಜೈನ್‌ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರವು ಪರಿಸರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಕೆರೆಗಳು ಕಣ್ಮರೆಯಾಗುತ್ತಿವೆ ಎಂದು ಅರ್ಜಿದಾರರು ದೂರಿದ್ದಾರೆ.

**

‘ಪಶ್ಚಿಮ ಘಟ್ಟಕ್ಕೆ ಧಕ್ಕೆ ತರುವ ಚಟುವಟಿಕೆಗೆ ಅನುಮತಿ ಇಲ್ಲ’

ಅಪಾಯದಲ್ಲಿರುವ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯಕ್ಕೆ ಧಕ್ಕೆ ತರುವ ಯಾವುದೇ ಚಟುವಟಿಕೆಗೆ ಅನುಮತಿ ನೀಡದಂತೆ ಹಸಿರು ನ್ಯಾಯಪೀಠವು ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ತಾಕೀತು ಮಾಡಿದೆ.ಪಶ್ಚಿಮ

ಘಟ್ಟ ಸಂರಕ್ಷಣೆ ಸಂಬಂಧ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿ ಅನುಷ್ಠಾನಕ್ಕೆ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸುವಂತೆಯೂ ಕೇಂದ್ರ ಪರಿಸರ ಸಚಿವಾಲಯಕ್ಕೆ ಸೂಚಿಸಿದೆ.

ಪರಿಸರ ಸಚಿವಾಲಯ ಈ ಮೊದಲು ಹೊರಡಿಸಿದ್ದ ಕರಡು ಅಧಿಸೂಚನೆ ಕರ್ನಾಟಕದ ವಿರೋಧದಿಂದಾಗಿ ಆಗಸ್ಟ್‌ 26ರಂದು ಮೂರನೇ ಬಾರಿ ರದ್ದಾಗಿತ್ತು.

ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡಿದ ರಾಜ್ಯಗಳ ಧೋರಣೆಯನ್ನು ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯಲ್‌ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.

‘ಇದು ಪರಿಸರ ರಕ್ಷಣೆಯ ಬಗ್ಗೆ ರಾಜ್ಯಗಳಿಗಿರುವ ನಿರಾಸಕ್ತಿ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಮಾರ್ಪಾಡು ಮಾಡದೆ ಆರು ತಿಂಗಳ ಒಳಗಾಗಿ ವರದಿಯನ್ನು ಅಂತಿಮಗೊಳಿಸುವಂತೆ ಹಸಿರು ನ್ಯಾಯಪೀಠ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು