ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ,ಎನ್‌ಪಿಆರ್‌ ಜಾರಿ ಉದ್ದೇಶವೇನು: ಎಂಪಿ ಮುಖ್ಯಮಂತ್ರಿ ಕಮಲನಾಥ್

Last Updated 25 ಡಿಸೆಂಬರ್ 2019, 20:25 IST
ಅಕ್ಷರ ಗಾತ್ರ

ಭೋಪಾಲ್‌: ‘ಕಾಂಗ್ರೆಸ್‌ ಪಕ್ಷವೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಆನ್‌ಪಿಆರ್‌) ಜಾರಿಮಾಡಲು ಇಚ್ಛಿಸಿತ್ತು. ಆದರೆ ಎನ್‌ಆರ್‌ಸಿರಹಿತವಾಗಿ ಜಾರಿಮಾಡಲು ಉದ್ದೇಶಿಸಿತ್ತು’ ಎಂದು ಕಾಂಗ್ರೆಸ್‌ ಮುಖಂಡ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ‘ಸಂವಿಧಾನ ಬಚಾವೊ ನ್ಯಾಯ ಶಾಂತಿ ಯಾತ್ರೆ’ಯ ನೇತೃತ್ವ ವಹಿಸಿದ್ದ ಅವರು, ಎನ್‌ಆರ್‌ಸಿ ಜೊತೆಗೇ ಎನ್‌ಪಿಆರ್‌ ಅನ್ನೂ ಜಾರಿ ಮಾಡುವುದರ ಹಿಂದೆ ಕೇಂದ್ರ ಸರ್ಕಾರಕ್ಕೆ ಇರುವ ಉದ್ದೇಶವನ್ನು ಪ್ರಶ್ನಿಸಿದರು.

‘ಸರ್ಕಾರ ಈಗ ತಂದಿರುವ ಎನ್‌ಪಿಆರ್‌ ಅನ್ನು ತರಲು ನಾವೂ ಬಯಸಿದ್ದೆವು. ಆದರೆ ನಾವು ಅದರ ಜೊತೆಗೆ ಎನ್‌ಆರ್‌ಸಿಯನ್ನು ಜೋಡಿಸಿರಲಿಲ್ಲ. ಇವರು (ಈ ಸರ್ಕಾರ) ಅವೆರಡನ್ನೂ ಜೋಡಿಸಿದ್ದಾರೆ. ಇದು ಅವರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ’ ಎಂದು ಕಮಲ್‌ನಾಥ್‌ ಹೇಳಿದರು.

‘ಸಂಸದನಾಗಿ 40 ವರ್ಷಗಳ ಅನುಭವದಲ್ಲಿ, ಎನ್‌ಆರ್‌ಸಿ ಮತ್ತು ಸಿಎಎಯಂಥ ಸಂವಿಧಾನವಿರೋಧಿ ಕಾನೂನನ್ನು ನಾನು ನೋಡಿಲ್ಲ. ಇಲ್ಲಿ ಏನು ಬರೆದಿದೆ ಎಂಬುದಲ್ಲ, ಏನನ್ನು ಬರೆದಿಲ್ಲ ಎಂಬುದು ಮುಖ್ಯ.
ಎನ್‌ಆರ್‌ಸಿಯನ್ನು ರಾಷ್ಟ್ರದಾದ್ಯಂತ ಜಾರಿ ಮಾಡಿಯೇ ತೀರುತ್ತೇವೆ ಎಂದು ಅಮಿತ್‌ ಶಾ ಈಗಾಗಲೇ ಸಂಸತ್ತಿನಲ್ಲಿ ಹೇಳಿದ್ದಾರೆ’ ಎಂದರು.

‘ಈ ಕಾನೂನಿನ ಬಳಕೆಯಿಂದ ಸಮಸ್ಯೆಯಾಗಲಾರದು. ಆದರೆ, ದುರ್ಬಳಕೆಗೆ ಇರುವ ಬಾಗಿಲನ್ನು ಅವರು ತೆರೆಯುತ್ತಿದ್ದಾರೆ. ಈ ಕಾನೂನು ದೇಶದ ಮೂಲ ರಚನೆಗೆ ವಿರುದ್ಧವಾದುದು. ಆದ್ದರಿಂದ ಮಧ್ಯಪ್ರದೇಶದಲ್ಲಿ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಎನ್‌ಪಿಆರ್‌ ಧಿಕ್ಕರಿಸಿ’

‘ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯೇ ಎನ್‌ಆರ್‌ಸಿಗೆ ದತ್ತಾಂಶವನ್ನು ಒದಗಿ ಸಲಿದೆ. ಆದ್ದರಿಂದ ಜನರು ಎನ್‌ಪಿಆರ್‌ ಅನ್ನು ಧಿಕ್ಕರಿಸಬೇಕು’ ಎಂದು ಲೇಖಕಿ ಆರುಂಧತಿ ರಾಯ್‌ ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಎನ್‌ಆರ್‌ಸಿ ಜಾರಿ ಮಾಡಲಾಗುತ್ತಿದೆ’ ಎಂದರು.

ಅಸಮಾಧಾನ

ಸಿಸಿಎ ಮತ್ತು ಎನ್‌ಆರ್‌ಸಿ ಸಮರ್ಥಿಸಿಕೊಂಡ ಕೇರಳ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ವಿರುದ್ಧ ಸಿಪಿಎಂ ನೇತೃತ್ವದ ಕೇರಳ ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಕಾಂಗ್ರೆಸ್‌ನ ಮಾಜಿ ನಾಯಕರು ನೀಡಿದ್ದ ಭರವಸೆಯನ್ನು ಸಿಎಎ ಈಡೇರಿಸಿದೆ ಎಂದು ಖಾನ್‌ ಅವರು ಹೇಳಿಕೆ ನೀಡಿದ್ದರು. ಸಚಿವ ಎ.ಕೆ. ಬಾಲನ್ ಇದನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT