ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ನೆಟ್ ನಿರ್ಬಂಧಕ್ಕೆ ಮಿತಿ ಇರಲಿ: ಸುಪ್ರೀಂಕೋರ್ಟ್‌ ತೀರ್ಪಿನ 10 ಮುಖ್ಯಾಂಶಗಳು

Explainer | ಹಕ್ಕು ಭದ್ರತೆ ಸಮತೋಲನ ಹೇಗೆ?
Last Updated 11 ಜನವರಿ 2020, 3:12 IST
ಅಕ್ಷರ ಗಾತ್ರ

ನವದೆಹಲಿ: ‘ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮೇಲೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಒಂದು ವಾರದ ಒಳಗೆ ಮರುಪರಿಶೀಲಿಸಬೇಕು’ ಎಂದುಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ, ಆರ್‌.ಸುಭಾಷ್ ರೆಡ್ಡಿ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು,‘ಸಂವಿಧಾನದ 19ನೇ ಪರಿಚ್ಛೇದದ ಅನ್ವಯ ಭಾರತದ ಪ್ರಜೆಗಳಿಗೆ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಇಂಟರ್ನೆಟ್ ಬಳಕೆಯ ಸ್ವಾತಂತ್ರ್ಯವೂ ಸೇರುತ್ತದೆ’ ಎಂದು ಹೇಳಿತು. ನ್ಯಾಯಮೂರ್ತಿ ರಮಣ ತೀರ್ಪು ಓದಿದರು.

ತೀರ್ಪುನಲ್ಲಿ ಚಾರ್ಲ್ಸ್‌ ಡಿಕೆನ್ಸ್‌ ಬರೆದಿರುವ ‘ಟೇಲ್ ಆಫ್ ಟೂ ಸಿಟಿಸ್’ ಕಾದಂಬರಿಯಲ್ಲಿ ಬರುವ ‘ಅದು ಅತ್ಯುತ್ತಮ ಕಾಲವಾಗಿತ್ತು, ಅದು ಅತ್ಯಂತ ಕೆಟ್ಟ ಕಾಲವಾಗಿತ್ತು...ಅದು ಹೆಚ್ಚುಕಡಿಮೆ ಇಂದಿನಂತೆಯೇ ಇತ್ತು’ (It was the best of times, it was the worst of times) ಎನ್ನುವಸಾಲುಗಳನ್ನು ನ್ಯಾಯಮೂರ್ತಿ ರಮಣ ಉಲ್ಲೇಖಿಸಿದರು.

ಸುಪ್ರೀಂ ಕೋರ್ಟ್‌ ನೀಡಿದ ಮಹತ್ವದ ತೀರ್ಪಿನಮುಖ್ಯಾಂಶಗಳು ಇವು...

1) ಇಂಟರ್ನೆಟ್ ಬಳಕೆಗೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಮರುಪರಿಶೀಲಿಸಬೇಕು. ಅಂಥ ನಿರ್ಬಂಧಗಳು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಾಗಿರಬೇಕು ಮತ್ತು ನ್ಯಾಯಾಂಗದ ಪರಿಶೀಲನೆಗೆ ಒಳಪಡಬೇಕು.

2) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಸಂವಿಧಾನದ 19ನೇ ಪರಿಚ್ಛೇದವು, ಇಂಟರ್ನೆಟ್ ಬಳಸಿ ವ್ಯಾಪಾರ ಮತ್ತು ವೃತ್ತಿ ನಿರ್ವಹಿಸುವ ವಿಚಾರಕ್ಕೂ ಅನ್ವಯಯವಾಗುತ್ತದೆ. ಸಂವಿಧಾನದ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಮೊದಲು ಸರ್ಕಾರ ಸಾಕಷ್ಟು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

3) ಶೀಘ್ರ ಇಂಟರ್ನೆಟ್‌ ಸೇವೆ ಮರುಸ್ಥಾಪನೆ ಸಾಧ್ಯವಾದ ಪ್ರದೇಶಗಳಲ್ಲಿ ಸರ್ಕಾರಿ ವೆಬ್‌ಸೈಟ್‌ಗಳು, ಇ–ಬ್ಯಾಂಕಿಂಗ್ ಸವಲತ್ತು, ಆಸ್ಪತ್ರೆ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಪೂರೈಸಲು ಸರ್ಕಾರ ಶೀಘ್ರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

4) ಭಾರತೀಯ ಅಪರಾಧ ಸಂಹಿತೆಯ (ಸಿಆರ್‌ಪಿಸಿ) 144ನೇ ವಿಧಿಯ ಅನ್ವಯ ಪದೇಪದೆ ನಿಷೇಧಾಜ್ಞೆ ವಿಧಿಸುವುದು ಸಹ ಅಧಿಕಾರ ದುರುಪಯೋಗ ಎನಿಸಿಕೊಳ್ಳುತ್ತದೆ. 144ನೇ ವಿಧಿ ಹೇರಲು ಇರುವ ಕಾರಣಗಳನ್ನುತಿಳಿಸಬೇಕು. ದಂಡಾಧಿಕಾರಿಯು ಜನರ ಸ್ವಾತಂತ್ರ್ಯ ಮತ್ತು ಸರ್ಕಾರದ ಹಿತಾಸಕ್ತಿಯ ನಡುವೆ ಸಮತೋಲನ ಕಾಪಾಡಬೇಕು.

5) 144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಹೇರಿದಾಗ ಎಲ್ಲ ನಿರ್ಬಂಧಗಳು ಮತ್ತು ಆದೇಶಗಳನ್ನು ಪ್ರಕಟಿಸಬೇಕು. ಕಾಲಮಿತಿಯಿಲ್ಲದೆ ಇಂಟರ್ನೆಟ್‌ ಸಂಪರ್ಕ ಕಡಿತಗೊಳಿಸುವುದು ಟೆಲಿಕಾಂ ನಿಯಮಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ.

6) ಅಲ್ಲಿ (ಕಾಶ್ಮೀರ) ನಿಷೇಧಾಜ್ಞೆಯನ್ನು ತಕ್ಷಣ ತೆರವುಗೊಳಿಸಬೇಕಾದ ಅಗತ್ಯವಿದೆ. (ಯಾರಿಗಾದರೂ ಅಥವಾ ಜನರಿಗೆ ಸರ್ಕಾರದೊಂದಿಗೆ)ಭಿನ್ನಮತ ಇದೆ ಎನ್ನುವುದು ನಿಷೇಧಾಜ್ಞೆ ವಿಧಿಸಲು ಪ್ರಬಲ ಕಾರಣವಾಗಲಾರದು.

7) ಬೇರೆ ಯಾವುದೇ ಮಾರ್ಗ ಇಲ್ಲ ಎಂದು ಮನವರಿಕೆಯಾದಾಗ ಮತ್ತು ಸಾಕಷ್ಟು ತೃಪ್ತಿಕರ ಕಾರಣಗಳಿವೆ ಎನಿಸಿದಾಗ ಮಾತ್ರ ನಿಷೇಧಾಜ್ಞೆ ವಿಧಿಸಬಹುದು. ಆದರೆ ಜನರ ಸ್ವಾತಂತ್ರ್ಯ ಮತ್ತು ಅದನ್ನು ನಿರ್ಬಂಧಿಸುವುದರಿಂದ ಸರ್ಕಾರ ಏನು ಸಾಧಿಸಲು ಹೊರಟಿದೆ ಎನ್ನುವುದರ ನಡುವೆ ಸಮತೋಲನ ಇರಬೇಕು.

8) ದೇಶದ ಎಲ್ಲ ಪ್ರಜೆಗಳಿಗೂ ಹಕ್ಕುಗಳು ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ನ್ಯಾಯಾಲಯಗಳ ಕರ್ತವ್ಯ. (ಆದರೆ) ಸ್ವಾತಂತ್ರ್ಯ ಮತ್ತು ಭದ್ರತೆಯ ವಿಚಾರದಲ್ಲಿ (ಪರಸ್ಪರ)ಘರ್ಷಣೆ ಇದ್ದಂತೆ ಕಾಣಿಸುತ್ತಿದೆ.

9) ಕಾಶ್ಮೀರ ಸಾಕಷ್ಟು ಹಿಂಸಾಚಾರ ಕಂಡಿದೆ. ಅದು ಹಲವು ವಿಪರ್ಯಾಸಗಳ ಮಾತೃಭೂಮಿಯೂ ಆಗಿದೆ. ‘ಭೂಮಿಯ ಮೇಲಿನ ಸ್ವರ್ಗದಲ್ಲಿ ಪ್ರತಿದಿನ ರಕ್ತದೋಕುಳಿ’ (ಇದು ಟೇಲ್ ಆಫ್ ಟೂ ಸಿಟೀಸ್ ಕಾದಂಬರಿಯ ಸಾಲು). ಭದ್ರತೆ ಮತ್ತು ಮಾನವ ಹಕ್ಕುಗಳ ನಡುವೆ ಸಮತೋಲನ ಸಾಧಿಸಲು ನಾವು (ನ್ಯಾಯಾಲಯಗಳು)ನಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ.

10) ಜನರ ಹಕ್ಕುಗಳನ್ನು ಖಾತ್ರಿಪಡಿಸಲೆಂದು (ನ್ಯಾಯಾಧೀಶರು)ನಾವು (ನ್ಯಾಯಾಲಯಗಳಲ್ಲಿ) ಇದ್ದೇವೆ. ಭದ್ರತೆ ಮತ್ತು ಜನರ ಸ್ವಾತಂತ್ರ್ಯದ ನಡುವೆ ಸಮತೋಲನ ಕಾಪಾಡಲು ಏನು ಮಾಡಬೇಕು ಎಂಬುದನ್ನು ಲಕ್ಷ್ಯದಲ್ಲಿರಿಸಿಕೊಂಡು ಕೆಲಸ ಮಾಡುತ್ತೇವೆ. (ಸರ್ಕಾರ ಹೊರಡಿಸಿದ) ಯಾವುದೇ ಆದೇಶದ ಹಿಂದೆ ಇರಬಹುದಾದ ರಾಜಕೀಯ ಉದ್ದೇಶಗಳು ನಮಗೆ ಬೇಕಿಲ್ಲ(ಜನರ ಹಕ್ಕು ಮತ್ತು ದೇಶದ ಭದ್ರತೆ ನಮಗೆ ಮುಖ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT