ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ಪ್ರಣೀತ್‌, ಸಮೀರ್‌

ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಆಟಗಾರರ ಗೆಲುವಿನ ಓಟ
Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಸಿಡ್ನಿ: ಭಾರತದ ಬಿ.ಸಾಯಿಪ್ರಣೀತ್ ಮತ್ತು ಸಮೀರ್‌ ವರ್ಮಾ ಅವರು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಪ್ರಣೀತ್‌ 21–12, 21–14ರಲ್ಲಿ ಇಂಡೊನೇಷ್ಯಾದ ಪಾಂಜಿ ಅಹಮದ್‌ ಮೌಲಾನ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಪ್ರಣೀತ್‌, ಆರಂಭಿಕ ಗೇಮ್‌ನಲ್ಲಿ ಮಿಂಚಿದರು. ಆಕರ್ಷಕ ಸರ್ವ್‌ ಮತ್ತು ಕ್ರಾಸ್‌ ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುನ್ನಡೆ ಗಳಿಸಿದರು. ನಂತರ ದೀರ್ಘ ರ‍್ಯಾಲಿಗಳನ್ನು ಆಡಿದ ಭಾರತದ ಆಟಗಾರ ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ತಂತ್ರ ಅನುಸರಿಸಿದರು.

ಎರಡನೇ ಗೇಮ್‌ನಲ್ಲೂ ಪ್ರಣೀತ್‌ ಮೋಡಿ ಮಾಡಿದರು. ಆರಂಭದಿಂದಲೇ ಚುರುಕಿನ ಆಟವಾಡಿದ ಅವರು ಬ್ಯಾಕ್‌ ಹ್ಯಾಂಡ್‌ ಮತ್ತು  ಫೋರ್‌ ಹ್ಯಾಂಡ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದರು. ಇದರಿಂದ ವಿಚಲಿತರಾದಂತೆ ಕಂಡ ಪಾಂಜಿ ಹಲವು ತಪ್ಪುಗಳನ್ನು ಮಾಡಿದರು. ಮೊದಲಾರ್ಧದಲ್ಲಿ ಭಾರತದ ಆಟಗಾರನಿಗೆ ಅಲ್ಪ ‍ಪ್ರತಿರೋಧ ಒಡ್ಡಿದ ಅವರು ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಮಂಕಾದರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಪ್ರಣೀತ್‌, ಇಂಡೊನೇಷ್ಯಾದ ಲೀ ಚೆವುಕ್‌ ಯಿವು ವಿರುದ್ಧ ಆಡಲಿದ್ದಾರೆ. ಲೀ ಅವರು ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದಾರೆ.

ಎರಡನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಸಮೀರ್‌ ವರ್ಮಾ 21–16, 21–12ರಲ್ಲಿ ಜಪಾನ್‌ನ ಟಕುಮಾ ಉಯೆದಾ ಅವರನ್ನು ಮಣಿಸಿದರು.

ನಾಲ್ಕನೇ ಶ್ರೇಯಾಂಕದ ಆಟಗಾರ ಸಮೀರ್‌, ಮೊದಲ ಗೇಮ್‌ನಲ್ಲಿ ಎದುರಾಳಿಯಿಂದ ಕಠಿಣ ಸ್ಪರ್ಧೆ ಎದುರಿಸಿದರು. ಎರಡನೇ ಗೇಮ್‌ನಲ್ಲಿ ಸುಲಭವಾಗಿ ಗೆದ್ದರು. ಮುಂದಿನ ಸುತ್ತಿನಲ್ಲಿ ಸಮೀರ್‌, ಚೀನಾದ ಲು ಗುವಾಂಗ್‌ಜು ಸವಾಲು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಅವರು ಎಂಟರ ಘಟ್ಟ ಪ್ರವೇಶಿಸಿದರು.

ಎರಡನೇ ಸುತ್ತಿನ ಹೋರಾಟದಲ್ಲಿ ಮನು ಮತ್ತು ಸುಮೀತ್‌ 21–17, 21–17ರಲ್ಲಿ ಕೊರಿಯಾದ ಹ್ಯೂಕ್‌ ಗ್ಯೂನ್‌ ಚೊಯಿ ಮತ್ತು ಕಿಯಂಗ್ ಹೂನ್‌ ಪಾರ್ಕ್‌ ಅವರನ್ನು ಸೋಲಿಸಿದರು.

ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಶ್ಲೋಕ್‌ ಅವರು ಎರಡನೇ ಸುತ್ತಿನ ಹೋರಾಟದಲ್ಲಿ 21–15, 25–23ರಲ್ಲಿ ಜಪಾನಿನ ಹಿರೋಕಿ ಒಕಮುರಾ ಮತ್ತು ಮಸಾಯುಕಿ ಒನೊಡೆರಾ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ತಲುಪಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯ ಆಟಗಾರ್ತಿ ವೈಷ್ಣವಿ ರೆಡ್ಡಿ ಜಕ್ಕಾ 5–21, 5–21ರಲ್ಲಿ ಚೀನಾದ ಹಾನ್‌ ಯುಯಿ ವಿರುದ್ಧ ಪರಾಭವಗೊಂಡರು.

ಮಹಿಳೆಯರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್‌.ರಾಮ್ ಎರಡನೇ ಸುತ್ತಿನಲ್ಲಿ 11–21, 13–21ರಲ್ಲಿ ಜಪಾನ್‌ನ ಮಿಕಿ ಕಶಿಹರಾ ಮತ್ತು ಮಿಯುಕಿ ಕೆಟೊ ಎದುರು ಮಣಿದರು.

ಮಿಶ್ರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಪೂರ್ವಿಶಾ ಎಸ್‌.ರಾಮ್‌ ಮತ್ತು ಶಿವಂ ಶರ್ಮಾ 6–21, 13–21ರಲ್ಲಿ ಕೊರಿಯಾದ ಸೆವುಂಗ್‌ ಜೆ ಸಿಯೊ ಮತ್ತು ಚೇ ಯುಜುಂಗ್‌ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT