ಸೋಮವಾರ, ಫೆಬ್ರವರಿ 24, 2020
19 °C
ಪೆಗಾಸಸ್: ರಾಜ್ಯಸಭೆಯಲ್ಲಿ ಸರ್ಕಾರದ ಉತ್ತರ

‘ಅನಧಿಕೃತ ಬೇಹುಗಾರಿಕೆ ನಡೆಸಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತದಲ್ಲಿ ವಾಟ್ಸ್‌ಆ್ಯಪ್‌ನ ಯಾವುದೇ ಬಳೆಕದಾರರ ಮೇಲೆ, ಸರ್ಕಾರದ ಯಾವ ಸಂಸ್ಥೆಗಳೂ ಅನಧಿಕೃತವಾಗಿ ಬೇಹುಗಾರಿಕೆ ನಡೆಸಿಲ್ಲ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ, ‘ಭಾರತ ಸರ್ಕಾರದ ಯಾವುದಾದರೂ ಸಂಸ್ಥೆ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಖರೀದಿಸಿದೆಯೇ’ ಎಂದು ಕಾಂಗ್ರೆಸ್‌ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ.

ಪೆಗಾಸಸ್ ಬಳಸಿಕೊಂಡು ನಡೆಸಲಾಗಿರುವ ಬೇಹುಗಾರಿಕೆಗೆ ತುತ್ತಾಗಿರುವವರ ಬಗ್ಗೆ ದಿಗ್ವಿಜಯ್‌ ಸಿಂಗ್ ಅವರು ಮಾಹಿತಿ ಕೇಳಿದರು.

‘ತಮ್ಮ ಮೇಲೆ ಬೇಹುಗಾರಿಕೆ ನಡೆದಿದೆ ಎಂದು ಯಾರೂ ದೂರು ನೀಡಿಲ್ಲ. ದೂರು ನೀಡಿದರೆ, ನಮ್ಮ ಸರ್ಕಾರ ತನಿಖೆ ನಡೆಸುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಸಚಿವರು ಉತ್ತರಿಸಿದ್ದಾರೆ.

‘ಭಾರತ ಸರ್ಕಾರ ನೀಡಿದ್ದ ನೋಟಿಸ್‌ಗೆ ವಾಟ್ಸ್ಆ್ಯಪ್‌ ಉತ್ತರ ನೀಡಿತ್ತು. ಆದರೆ, ಯಾರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವರ ಅದರಲ್ಲಿ ಇರಲಿಲ್ಲ. ಬೇಹುಗಾರಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಮತ್ತೆ ನೋಟಿಸ್ ನೀಡಲಾಗಿದೆ’ ಎಂದು ರವಿಶಂಕರ್ ಪ್ರಸಾದ್ ಉತ್ತರಿಸಿದ್ದಾರೆ.

ಪೆಗಾಸಸ್‌ ಬಳಸಿಕೊಂಡು ಭಾರತದ 120 ಜನರು ಸೇರಿ ಜಗತ್ತಿನಾದ್ಯಂತ 1,400 ಜನರ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತು.

ಬೇಹುಗಾರಿಕೆ ನಡೆಸಲು ಭಾರತ ಸರ್ಕಾರದ ಸಂಸ್ಥೆಗಳು ಪೆಗಾಸಸ್ ಖರೀದಿಸಿದ್ದವೇ ಎಂಬ ಪ್ರಶ್ನೆಗೆ, ‘ಹೌದು’ ಅಥವಾ ‘ಇಲ್ಲ’ ಎಂದು ಉತ್ತರಿಸಿ
- ದಿಗ್ವಿಜಯ್‌ ಸಿಂಗ್, ರಾಜ್ಯಸಭಾ ಸದಸ್ಯ

ಸರ್ಕಾರದ ಸಂಸ್ಥೆಗಳಿಗೆ ಮಾಹಿತಿ ಬೇಕಿದ್ದರೆ, ಅದನ್ನು ಅಧಿಕೃತವಾಗಿಯೇ ಪಡೆಯುತ್ತವೆ. ಬೇಹುಗಾರಿಕೆಯ ಅವಶ್ಯಕತೆ ಇಲ್ಲ
-ರವಿಶಂಕರ್ ಪ್ರಸಾದ್, ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು