ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಒಟ್ಟು 25 ನಾಮಪತ್ರ ಸಲ್ಲಿಕೆ

ಮಡಿಕೇರಿ ಕ್ಷೇತ್ರ: ಕಾಂಗ್ರೆಸ್‌ನಿಂದ ಕೆ.ಪಿ. ಚಂದ್ರಕಲಾ ಸ್ಪರ್ಧೆ, ಕೊನೆಯ ದಿನ ಪಕ್ಷೇತರ ಅಭ್ಯರ್ಥಿಗಳ ಉತ್ಸಾಹ
Last Updated 25 ಏಪ್ರಿಲ್ 2018, 9:49 IST
ಅಕ್ಷರ ಗಾತ್ರ

ಮಡಿಕೇರಿ: ವಿಧಾನಸಭೆ ಚುನಾವಣೆಗೆ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಂದ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕೊನೆಯ ದಿನವಾದ ಮಂಗಳವಾರವೇ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾದವು. ಕೊನೆಯಲ್ಲಿ ಪಕ್ಷೇತರರು ಉತ್ಸಾಹದಿಂದ ಬಂದು ನಾಮಪತ್ರ ಸಲ್ಲಿಸಿದರು. ಆದಿವಾಸಿಗಳ ಪರ ಹೋರಾಟ ನಡೆಸಿದ್ದ ಜಿ.ಕೆ.ಮುತ್ತಮ್ಮ ಅವರಿಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗದೇ ನಿರಾಸೆಗೊಂಡರು. ಮೂರು ಗಂಟೆಯ ತನಕ ಸಮಯವಿತ್ತು. ನಿಗದಿತ ಸಮಯದಲ್ಲಿ ಬಾರದೇ ವಾಪಸ್‌ ತೆರಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ದಿಂದ ಕೆ.ಪಿ.ಚಂದ್ರಕಲಾ (ಕಾಂಗ್ರೆಸ್), ಭಾರ್ಗವ (ಹಿಂದೂ ಮಹಾಸಭಾ), ರಶೀದಾ ಬೇಗಂ (ಎಂಇಪಿ), ಎಂ. ಕಲೀಲ್, ಪಿ.ಯು. ಕಿಶನ್, ವೆಂಕಟೇಶ್, ಹೇಮಂತ್ ಕುಮಾರ್, ನಾಪಂಡ ಮುತ್ತಪ್ಪ, ಕೆ.ಬಿ. ರಾಜು, ಎಂ. ಮಹಮದ್ ಹನೀಫ್ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ (ಬಿಜೆಪಿ), ಪದ್ಮಿನಿ ಪೊನ್ನಪ್ಪ, ಹರೀಶ್ ಬೋಪಣ್ಣ, ಅಚ್ಚಪಂಡ ಗಿರಿ ಉತ್ತಪ್ಪ, ಫೈಜಲ್ ಎಂ.ಕೆ., ಪಿ.ಎಸ್‌. ಮುತ್ತ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಮಡಿಕೇರಿ ಕ್ಷೇತ್ರಕ್ಕೆ 14, ವಿರಾಜಪೇಟೆ ಕ್ಷೇತ್ರಕ್ಕೆ 11 ನಾಮಪತ್ರ ಸಲ್ಲಿಕೆಯಾಗಿವೆ.

ಏ. 25ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏ. 27ರಂದು ಕಡೆಯ ದಿನ. ಈ ಬಾರಿ ಕಾಂಗ್ರೆಸ್‌ನಿಂದ ಮೂವರು ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಪದ್ಮಿನಿ ಪೊನ್ನಪ್ಪ, ಹರೀಶ್‌ ಬೋಪಣ್ಣ, ನಾಪಂಡ ಮುತ್ತಪ್ಪ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಅವರನ್ನು ಕಾಂಗ್ರೆಸ್‌ ಮುಖಂಡರು ಹೇಗೆ ಮನವೊಲಿಸುತ್ತಾರೆ ಎಂಬುದೇ ಈಗ ಎಲ್ಲೆಡೆ ಚರ್ಚೆಯ ವಿಷಯ.

ಕಾಂಗ್ರೆಸ್‌ ಮೆರವಣಿಗೆ: ಕಡೆಯ ಗಳಿಗೆಯಲ್ಲಿ ಕಾಂಗ್ರೆಸ್‌ ಬಿ– ಫಾರಂ ಪಡೆದ ಚಂದ್ರಕಲಾ ಅಪಾರ ಬೆಂಬಲಿಗರ ಜತೆಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಸಹೋದರ, ಚಲನಚಿತ್ರ ನಟ ಜೈಜಗದೀಶ್‌
ಹಾಗೂ ಕುಟುಂಬಸ್ಥರು ಸಾಥ್‌ ನೀಡಿದರು.

ಅಲ್ಲದೇ ಕಾಂಗ್ರೆಸ್‌ ಮುಖಂಡರಾದ ಎಚ್.ಎಸ್‌.ಚಂದ್ರಮೌಳಿ, ಟಿ.ಪಿ.ರಮೇಶ್‌, ವಿಧಾನ ಪರಿಷತ್ ಸದಸ್ಯೆ ವೀಣಾ ಅಚಯ್ಯ, ವಿ.ಪಿ.ಶಶಿಧರ್, ವಿರೂಪಾಕ್ಷಯ್ಯ, ತನ್ನೀರಾ ಮೈನಾ, ಅಪ್ರು ರವೀಂದ್ರ, ವಕ್ತಾರ ಪಪ್ಪು ತಿಮ್ಮಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಜರಿದ್ದರು.

ಚಂದ್ರಕಲಾ ಮಾತನಾಡಿ, ‘ನಾಪಂಡ ಮುತ್ತಪ್ಪ ಯುವಕರು. ಭವಿಷ್ಯದಲ್ಲಿ ಅವಕಾಶವಿದೆ. ನಮ್ಮೊಂದಿಗೆ ಇರಲಿದ್ದಾರೆ ಎನ್ನುವ ಭರವಸೆಯಿದೆ. ನಾನು ದುರ್ಬಲ ಅಭ್ಯರ್ಥಿ ಅಲ್ಲ. ಹಾಗೆಂದು ಆಪಾದನೆ ಮಾಡುವವರು ತಮ್ಮ ಮಾತನ್ನು ವಾಪಸ್‌ ತೆಗೆದುಕೊಳ್ಳಲಿ. ಒಳಚರಂಡಿ ಮಂಡಳಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅವಧಿಯಲ್ಲಿ ಮಾಡಿದ ಕೆಲಸಗಳು ಈ ಚುನಾವಣೆಯಲ್ಲಿ ಕೈಹಿಡಿಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಂದ್ರಕಲಾ ₹ 2.87 ಕೋಟಿ ಒಡತಿ

ಕಾಂಗ್ರೆಸ್‌ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರು ₹ 2.87 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ.

ತಮ್ಮ ಬಳಿ ₹ 83.50 ಲಕ್ಷ ಚರಾಸ್ತಿ ಇದ್ದರೆ, ಪತಿಯ ಬಳಿ ₹ 5.59 ಲಕ್ಷ ಚರಾಸ್ತಿಯಿದೆ. ಚಂದ್ರಕಲಾ ಅವರ ಬಳಿ ₹ 99 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ. ಪತಿ ಕೆ.ಎಂ. ಪ್ರಸನ್ನಕುಮಾರ ಅವರ ಬಳಿಯೂ ₹ 99 ಲಕ್ಷದ ಸ್ಥಿರಾಸ್ತಿಯಿದೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ.

ಬಿಎ ಪದವೀಧರೆ (ಕಲಾ ವಿಭಾಗ) ಆಗಿರುವ ಚಂದ್ರಕಲಾ ಅವರ ವಾರ್ಷಿಕ ಆದಾಯವು ₹ 6,70,500. ಕುಶಾಲನಗರದ ವಿಜಯ ಬ್ಯಾಂಕ್‌ನಲ್ಲಿ ವ್ಯವಸಾಯ ಸಾಲ ₹ 2 ಲಕ್ಷವಿದೆ. ತಮ್ಮ ಬಳಿ ₹ 14 ಲಕ್ಷ ಮೌಲ್ಯದ ಮಾರುತಿ ಬ್ರೀಜಾ ಕಾರು, ಪತಿ ಬಳಿ ₹ 2.40 ಲಕ್ಷ ಮೌಲ್ಯದ ಮಾರುತಿ 800 ಕಾರಿದೆ.

ಚಂದ್ರಕಲಾ ಅವರ ಬಳಿ ₹ 21 ಲಕ್ಷ ಮೌಲ್ಯದ 700 ಗ್ರಾಂ ಚಿನ್ನಾಭರಣವಿದ್ದರೆ, ₹ 3 ಲಕ್ಷ ಮೌಲ್ಯದ 5 ಕೆ.ಜಿ ಬೆಳ್ಳಿಯಿದೆ. ಪತಿಯ ಬಳಿ ₹ 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವಿದೆ. ಇಬ್ಬರ ಕೈಯಲ್ಲೂ ತಲಾ ₹ 50 ಸಾವಿರ ನಗದು ಇದೆ. ಚಂದ್ರಕಲಾ ಹಾಗೂ ಪ್ರಸನ್ನಕುಮಾರ್ ಅವರ ಹೆಸರಿನಲ್ಲಿ 4.95 ಎಕರೆ ಕೃಷಿ ಜಮೀನಿದೆ. ಜತೆಗೆ, ₹ 12 ಲಕ್ಷ ಮೌಲ್ಯದ ತೋಟದ ಮನೆಯಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ಸಹೋದರಿ ಪರ ಪ್ರಚಾರ: ಜೈಜಗದೀಶ್‌

ಮಡಿಕೇರಿ: ‘ಚಂದ್ರಕಲಾ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ’ ಎಂದು ಅವರ ಸಹೋದರ, ಚಲನಚಿತ್ರ ನಟ ಜೈಜಗದೀಶ್‌ ಹೇಳಿದರು.

ನಾಮಪತ್ರ ಸಲ್ಲಿಸಲು ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘30 ವರ್ಷಗಳು ಸಂಘಟನೆ ಮಾಡಿದ್ದಕ್ಕೆ ಅವರನ್ನು ಗುರುತಿಸಿ ಪಕ್ಷ ಟಿಕೆಟ್‌ ನೀಡಿದೆ. ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯ ರಂಜನ್‌ ಗೆದ್ದಿದ್ದಾರೆ. ಈಗ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ನಿಶ್ಚಿತ. ಈ ಹಿಂದೆ ರಂಜನ್‌ ಪರವಾಗಿ ಚುನಾವಣೆ ಪ್ರಚಾರ ನಡೆಸಿದ್ದೆ. ಆದರೆ, ಯಾವ ಪಕ್ಷಕ್ಕೂ ಸೇರ್ಪಡೆ ಆಗಿರಲಿಲ್ಲ. ಈಗಲೂ ಯಾವ ಪಕ್ಷಕ್ಕೆ ಸೇರಿಲ್ಲ. ನಟರಿಗೆ ಪಕ್ಷದ ಲೇಬಲ್‌ ಇರಬಾರದು. ಸಹೋದರಿಗೆ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದರು.

ಚಂದ್ರಕಲಾ ಕುಟುಂಬಸ್ಥರಾದ ವಿಜಯಲಕ್ಷ್ಮಿ ಸಿಂಗ್‌, ಮನೋಹರಿ, ಭಾನುಮತಿ, ರತ್ನಾ ಹಾಜರಿದ್ದರು. ಕೊನೆಯ ಕ್ಷಣದಲ್ಲಿ ಚಂದ್ರಕಲಾ ಹೆಸರು ಘೋಷಣೆ ಮಾಡಿದ ಕಾರಣ ಜೈಜಗದೀಶ್‌ ಅವರು ಬಿ–ಫಾರಂ ತಂದು, ಜಿಲ್ಲಾಡಳಿತ ಭವನದ ಬಳಿ ಹಸ್ತಾಂತರ ಮಾಡಿ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT