2004ರ ಸುನಾಮಿ: ರಕ್ಷಿಸಿದ್ದ ಕೂಸು ‘ಮೀನು‘; ‘ಅಪ್ಪ‘ ಐಎಎಸ್‌ ಅಧಿಕಾರಿ

7

2004ರ ಸುನಾಮಿ: ರಕ್ಷಿಸಿದ್ದ ಕೂಸು ‘ಮೀನು‘; ‘ಅಪ್ಪ‘ ಐಎಎಸ್‌ ಅಧಿಕಾರಿ

Published:
Updated:

ಸಮುದ್ರದ ರುದ್ರ ನರ್ತನದಲ್ಲಿ ಎಲ್ಲರನ್ನೂ ಕಳೆದುಕೊಂಡಿದ್ದ ಪುಟಾಣಿಯನ್ನು ತನ್ನ ಕೈಗಳಿಂದ ಅಪ್ಪಿ ಆರೈಕೆ ಮಾಡಿದ್ದ ಐಎಎಸ್‌ ಅಧಿಕಾರಿ, ಆ ಹುಡುಗಿಯನ್ನು ಕಾಣದೆ ಮೂರು ವರ್ಷಗಳೇ ಕಳೆದಿತ್ತು. ಪ್ರೀತಿಯ ‘ಮೀನು‘ಗೆ ಅಚ್ಚರಿ ಕೊಡಲೆಂದೇ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಸ್ಥಾನದಲ್ಲಿರುವ ಅಧಿಕಾರಿ ಆಕೆ ಓದುತ್ತಿರುವ ಶಾಲೆಗೆ ದಿಢೀರ್‌ ಭೇಟಿ ಇಟ್ಟರು. ಅವರನ್ನು ಕಾಣುತ್ತಿದ್ದಂತೆ ಮೀನು ಮೊಗದಲ್ಲಿ ಅಚ್ಚರಿಗಿಂತಲೂ ಪ್ರೀತಿ ಉಕ್ಕಿ ಹರಿಯಿತು, ‘ಅಪ್ಪಾ‘ ಎಂದು ಮನಸಾರೆ ಕರೆದಿದ್ದೇ; ಅವರ ಕಣ್ಣಾಲಿಗಳು ಒದ್ದೆಯಾದವು, ಭಾವ ತೀವ್ರತೆಯಲ್ಲಿ ಸ್ಥಬ್ಧರಾಗಿ ಹೋದರು. 

ಹದಿನಾಲ್ಕು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಸಮುದ್ರದ ರಭಸ ನೂರಾರು ಜನರನ್ನು ಅನಾಥರನ್ನಾಗಿಸಿತು. ತಂದೆ–ತಾಯಿಯಿಂದ ಮಕ್ಕಳನ್ನು, ಮಕ್ಕಳಿಂದ ಹೆತ್ತವರನ್ನು ದೂರಕ್ಕೆಸೆದ ಸುನಾಮಿ ನೆನಪು ಇಂದಿಗೂ ಮಾಸಿಲ್ಲ. ಅದೇ ಭಯಾನಕ ಸಂದರ್ಭದಲ್ಲಿ ಸೇತುವೆ ಅಡಿಯಲ್ಲಿ ಅನಾಥೆಯಾಗಿದ್ದ 2 ವರ್ಷ ವಯಸ್ಸಿನ ಹೆಣ್ಣು ಮಗು ಮೀನಾಳನ್ನು ರಕ್ಷಿಸಿದ್ದ ಸ್ಥಳೀಯರು ಮಗುವನ್ನು ಡಾ.ಜೆ.ರಾಧಾಕೃಷ್ಣನ್‌ ದಂಪತಿ ಆಶ್ರಯಕ್ಕೆ ನೀಡಿದ್ದರು. ತಂಜವೂರ್‌ ಜಿಲ್ಲಾಧಿಕಾರಿಯಾಗಿದ್ದ ಅವರು ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಲು ನಾಗಪಟ್ಟಣಂಗೆ ಬಂದಿದ್ದರು. ಆಗಲೇ ಮೀನಾ ಅವರ ಕುಟುಂಬ ಸೇರಿದ್ದಳು. ಪತ್ನಿಗೂ ಆಕೆಯ ಮೇಲೆ ಬಲು ಪ್ರೀತಿ. 

ಪ್ರಸ್ತುತ ನಟರಾಜನ್‌ ದಮಯಂತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೀನಾಗೆ ಈಗ 16 ವರ್ಷ. ‘ಅಪ್ಪಾ..‘ ಎಂದು ಕೂಗಿ ಅದೇ ನಗು, ಮುಗ್ಧ ಮಾತು, ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರೆ ರಾಧಾಕೃಷ್ಣನ್‌ ಕೇಳುತ್ತ ತನ್ಮಯರಾದರು. ಸುನಾಮಿಯ ಪ್ರಭಾವದಲ್ಲಿ ನಾಗಪಟ್ಟಣಂವೊಂದರಲ್ಲಿಯೇ 6000ಕ್ಕೂ ಹೆಚ್ಚು ಜನರು ಮೃತ ಪಟ್ಟರು. ಕರಾವಳಿಯಲ್ಲಿ ಬದುಕು ಕಟ್ಟಿಕೊಂಡಿದ್ದ 73 ಸ್ಥಳಗಳು ಮುಳುಗಡೆಯಾದವು, ಲೆಕ್ಕವಿರದಷ್ಟು ಮನೆಗಳು ಕಾಣೆಯಾದವು, ಕನಿಷ್ಠ 2 ಲಕ್ಷ ಜನರು ಗಂಜಿ ಕೇಂದ್ರಗಳಲ್ಲಿ ರಕ್ಷಣೆ ಪಡೆದರು. ಜಿಲ್ಲೆಯಲ್ಲಿ 99 ಪುಟಾಣಿ ಮಕ್ಕಳು ತನ್ನ ಪಾಲಕರು, ಪೋಷಕರನ್ನು ಕಳೆದುಕೊಂಡು ಅನಾಥರಾದರು. ಈ ಮಕ್ಕಳ ಪೋಷಣೆಯ ಜವಾಬ್ದಾರಿ ಸರ್ಕಾರದ ಹೆಗಲಿಗಿತ್ತು, ಇಲ್ಲೇ ಮೀನಾ, ರಾಧಾಕೃಷ್ಣನ್‌ ಅವರ ಮನೆ ಸೇರಿದ್ದು. ಇಂದಿಗೂ ಮನಸ್ಸಿನಲ್ಲಿ ಉಳಿದಿರುವುದು. 

’ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾ, ಸುನಾಮಿ ಪುನರ್ವಸತಿ ಯೋಜನೆ ಅಡಿ ಶೀಘ್ರವೇ ಮಕ್ಕಳ ರಕ್ಷಣೆಗಾಗಿ ಕೇಂದ್ರ ತೆರೆಯುವಂತೆ ಸೂಚಿಸಿದರು. ಇದಕ್ಕಾಗಿಯೇ ಅಣ್ಣೈ ಸತ್ಯ ಗೃಹ ಸ್ಥಾಪನೆ ಮಾಡಲಾಯಿತು, ಮಕ್ಕಳಿಗೆ ಮನೆ ಸಿಕ್ಕಂತಾಯಿತು‘ ಎಂದು ರಾಧಾಕೃಷ್ಣನ್‌ ನೆನಪಿಸಿಕೊಳ್ಳುತ್ತಾರೆ.

ಅನಾಥರ ಕೇಂದ್ರದಲ್ಲಿದ್ದ ಮಕ್ಕಳಿಗಾಗಿ ಸಮಾಜ ಕಲ್ಯಾಣ ಅಧಿಕಾರಿ ಸೂರ್ಯಕಲಾ ಸಕಲ ವ್ಯವಸ್ಥೆ ಮಾಡಿದ್ದರು. ಅಲ್ಲಿದ್ದವರ ಪೈಕಿ ಮೀನಾ ಚಿಕ್ಕ ವಯಸ್ಸಿನವಳು, ಎಲ್ಲರಿಗೂ ಆಕೆಯನ್ನು ಕಂಡರೆ ಮುದ್ದು. ರಾಧಾಕೃಷ್ಣನ್ ಮತ್ತು ಅವರ ಪತ್ನಿ ಮೊದಲ ಒಂದು ವರ್ಷ ಪ್ರತಿ ವಾರ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ನಂತರದ ದಿನಗಳಲ್ಲಿ ಭೇಟಿ ನೀಡುವ ಸಮಯ ತಿಂಗಳು, ವರ್ಷಕ್ಕೊಮ್ಮೆ, ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಆಯಿತು. ಎಲ್ಲ ಮಕ್ಕಳೊಂದಿಗೂ ಆಡುತ್ತ, ಮಾತನಾಡುತ್ತಿರುವಾಗಲೂ ದಂಪತಿಗಳಲ್ಲಿ ಒಬ್ಬರು ಮೀನಾ ಹೊತ್ತುಕೊಂಡೆ ತಿರುಗುತ್ತಿದ್ದರು. ಈಗ ಕೇಂದ್ರದಿಂದ ಬಹುತೇಕ ಮಕ್ಕಳು ಹೊರ ಬಂದಿದ್ದಾರೆ. ಶಿಕ್ಷಣ ಪಡೆದು ಬೇರೆ ಕಡೆ ಅಥವಾ ಅವರ ಸಂಬಂಧಿಗಳ ಮನೆಗೆ ಅಥವಾ ಮದುವೆಯಾಗಿ ಹೋಗಿದ್ದಾರೆ. 

ಆ 99 ಮಕ್ಕಳ ಪೈಕಿ ಹಾಸ್ಟೆಲ್‌ನಲ್ಲಿ ಉಳಿದಿಕೊಂಡಿರುವವರು ಮೀನಾ ಮಾತ್ರ. ಸದ್ಯ 11ನೇ ತರಗತಿಯಲ್ಲಿ ಓದುತ್ತಿರುವ ಆಕೆ ಮುಂದೆ ವಾಣಿಜ್ಯ ವಿಷಯದಲ್ಲಿ ವ್ಯಾಸಂಗ ಮುಂದುವರಿಸುವ ಇಚ್ಛೆ ಹೊಂದಿದ್ದಾಳೆ. ಯಾರೊಬ್ಬರೂ ಆಕೆಯನ್ನು ಮಗಳೆಂದು, ಸಂಬಂಧಿ ಎಂದು ಕರೆದು ಬರಲಿಲ್ಲ ಎಂದು ನೈಸರ್ಗಿಕ ವಿಕೋಪ ಮತ್ತು ಅದರ ಪರಿಣಾಮಗಳನ್ನು ಕಣ್ಣೆದುರು ಕಟ್ಟಿಕೊಳ್ಳುತ್ತಾರೆ ರಾಧಾಕೃಷ್ಣನ್‌.

(ಮೂಲ ವರದಿ: ದಿ ನ್ಯೂಸ್‌ ಮಿನಿಟ್‌)

ಬರಹ ಇಷ್ಟವಾಯಿತೆ?

 • 59

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !