ಮಂಗಳವಾರ, ಜನವರಿ 28, 2020
29 °C

ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಎಲ್ಲಿ ಓಡಿ ಹೋದರು: ಮೀನಾಕ್ಷಿ ಲೇಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಪಾಕಿಸ್ತಾನದ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ಶುಕ್ರವಾರ ನಡೆದ ದಾಳಿಯನ್ನು ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಖಂಡಿಸಿದ್ದು, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಎಲ್ಲಿ ಓಡಿ ಹೋದರು ತಿಳಿಯುತ್ತಿಲ್ಲ ಎಂದಿದ್ದಾರೆ. ಅಲ್ಲದೆ ಗುರುದ್ವಾರದ ಮೇಲಿನ ದಾಳಿಯ ಬಳಿಕವು ಸಿಧು ಐಎಸ್‌ಐ ಮುಖ್ಯಸ್ಥನನ್ನು ಅಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. 

ಶನಿವಾರ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಅವರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಧಾರ್ಮಿಕ ಸ್ಥಳಗಳಲ್ಲಿ ನಿರಂತರವಾಗಿ ಹಿಂಸಾಚಾರಗಳು ನಡೆದಿವೆ ಮತ್ತು ದಶಕಗಳಿಂದಲೂ ಅಲ್ಪಸಂಖ್ಯಾತರು ಮತಾಂತರ ಮತ್ತು ಅತ್ಯಾಚಾರದ ಬೆದರಿಕೆಗಳಿಗೆ ಒಳಗಾಗಿದ್ದಾರೆ ಎಂದು ದೂರಿದರು.

ಯುವತಿಯರನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದು ಮತ್ತು ಮುಸ್ಲಿಂ ಯುವಕನೊಂದಿಗೆ ವಿವಾಹ ಮಾಡುವ ಸಾವಿರಾರು ಘಟನೆಗಳು ನಡೆದಿವೆ. ಪೊಲೀಸರು, ಸರ್ಕಾರ ಮತ್ತು ಇತರ ಏಜೆನ್ಸಿಗಳು ಈ ಪ್ರಕ್ರಿಯೆಯ ಭಾಗವಾಗಿವೆ. ಗುರುದ್ವಾರದ ಮೇಲಿನ ದಾಳಿಯು ಅಲ್ಪಸಂಖ್ಯಾತರು ಹೇಗೆ ಕಿರುಕುಳಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು. 

ಪಾಕಿಸ್ತಾನವು ರಚನೆಯಾದಾಗಿನಿಂದಲೂ ಕಿರುಕುಳವು ನಿರಂತರವಾಗಿ ಮುಂದುವರಿದಿದ್ದರ ಫಲವಾಗಿಯೇ ಅಲ್ಪಸಂಖ್ಯಾತರನ್ನು ಭಾರತಕ್ಕೆ ಬಲವಂತವಾಗಿ ವಲಸೆ ಹೋಗಲು ಒತ್ತಾಯಿಸಲಾಗುತ್ತಿದೆ. ಇದು ಸಿಎಎಯಂತಹ ಕಾಯ್ದೆಯ ಅಗತ್ಯತೆಯನ್ನು ಸಮರ್ಥಿಸುತ್ತದೆ ಮಾತ್ರವಲ್ಲದೆ ಅದನ್ನು ತಕ್ಷಣ ಅನುಷ್ಠಾನ ಮಾಡಬೇಕೆಂಬುದನ್ನು ಸ್ಪಷ್ಟಪಡಿಸುತ್ತದೆ. ಪಾಕಿಸ್ತಾನ ಈಗ ಸಿಎಎ ಸರಿಯಾಗಿದೆ ಮತ್ತು ಸಮಯೋಚಿತವಾಗಿದೆ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು. 

ಈ ಘಟನೆಯು ಕಾಬಾ ಅಥವಾ ಜೆರುಸಲೆಮ್ ಮೇಲಿನ ದಾಳಿಗೆ ಸಮವಾಗಿದೆ. ಸಿಧು ಪಾಜಿ ಅವರು ಎಲ್ಲಿ ಓಡಿ ಹೋದರು ಎಂದು ನನಗೆ ತಿಳಿಯುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ಯಾರಾದರೂ ಹುಡುಕಿಕೊಡಿ. ಇದಾದ ಬಳಿಕವು ಸಿಧು ಐಎಸ್‌ಐ ಮುಖ್ಯಸ್ಥರನ್ನು ಅಪ್ಪಿಕೊಳ್ಳಲು ಬಯಸಿದರೆ ಕಾಂಗ್ರೆಸ್ ಇತ್ತ ಗಮನಹರಿಸಲಿ. ಸಿಖ್ಖರು ಆ ಮಣ್ಣಿನ ಸಂತತಿ ಎಂದು ಪಾಕಿಸ್ತಾನ ತಿಳಿದಿರಬೇಕು ಮತ್ತು ಆ ಮಣ್ಣಿನ ಬಗ್ಗೆ ನಂಬಿಕೆ ಮತ್ತು ಕರ್ತವ್ಯವನ್ನು ಮುಂದುವರಿಸಬೇಕು. ಸಿಖ್ಖರು ವಲಸೆ ಹೋಗಲಿಲ್ಲ ಮತ್ತು ಪಾಕ್‌ನಲ್ಲಿಯೇ ಇರಲು ನಿರ್ಧರಿಸಿದರು ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು