ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ತಡವಾಗುತ್ತಿದೆ ಏಕೆ? ಕಾಂಗ್ರೆಸ್ ಕಾರಣ ನಿಜವೇ?

ಮಂಗಳವಾರ, ಮಾರ್ಚ್ 26, 2019
22 °C

ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ತಡವಾಗುತ್ತಿದೆ ಏಕೆ? ಕಾಂಗ್ರೆಸ್ ಕಾರಣ ನಿಜವೇ?

Published:
Updated:

ನವದೆಹಲಿ: ‘ಲೋಕಸಭೆ ಚುನಾವಣೆಯ ದಿನಾಂಕ ಘೋಷಿಸಲು ಸಾಕಷ್ಟು ಸಮಯವಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿವೆ’ ಎಂದು ಚುನಾವಣಾ ಆಯೋಗದಲ್ಲಿರುವ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

‘ಇದೀಗ ನಮ್ಮ ಪ್ರಧಾನಿ ಚುರುಕಾಗಿ ದೇಶ ಸುತ್ತುತ್ತಿದ್ದಾರೆ. ಅಧಿಕಾರ ಅವಧಿಯ ಕೊನೆಯ ಕ್ಷಣದಲ್ಲಿ ಹೊಸಹೊಸ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಚುನಾವಣೆಯ ದಿನಾಂಕ ಘೋಷಿಸಲು ಆಯೋಗವು ಪ್ರಧಾನಿಯ ಅಧಿಕೃತ ಪ್ರವಾಸ ಪಟ್ಟಿಗಾಗಿ ಕಾಯುತ್ತಿದೆಯೇ’ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮಾರ್ಚ್ 4ರಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಅಹ್ಮದ್ ಪಟೇಲ್ ತಮ್ಮ ಹೇಳಿಕೆಯನ್ನು ಟ್ವೀಟ್ ಮಾಡಿದ ದಿನಾಂಕ ಮಾರ್ಚ್ 4 ಎನ್ನುವುದು ಗಮನಾರ್ಹ. ಏಕೆಂದರೆ ಐದು ವರ್ಷಗಳ ಹಿಂದೆ ಅಂದರೆ 2014ರ ಮಾರ್ಚ್ 5ರಂದು ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಘೋಷಿಸಿತ್ತು. ಈ ದಿನಾಂಕಕ್ಕೆ ಒಂದು ದಿನ ಮೊದಲು ಅಹ್ಮದ್ ಪಟೇಲ್ ಟ್ವೀಟ್ ಹೊರಬಿದ್ದಿದೆ. ಇದೇ ಕಾರಣಕ್ಕೆ ಟ್ವೀಟ್ ಮಹತ್ವ ಪಡೆದಿತ್ತು.

ಚುನಾವಣೆ ದಿನಾಂಕ ಘೋಷಣೆ ತಡವಾಗಿರುವ ಕುರಿತು ಎನ್‌ಡಿಟಿವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗದ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿ, ‘ನಾವು ಪ್ರಧಾನಿಯ ಕಾರ್ಯಚಟುವಟಿಕೆ ಮತ್ತು ಯೋಜನೆಗಳಿಗೆ ಅನುಗುಣವಾಗಿ ಕೆಲಸ ಮಾಡುವುದಿಲ್ಲ. ಈ ವಿಷಯವನ್ನು ಎಲ್ಲ ರಾಜಕೀಯ ಪಕ್ಷಗಳೂ ಅರಿತುಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.

‘2014ರ ಲೋಕಸಭೆ ಚುನಾವಣೆಗೆ ಮಾರ್ಚ್ 5ರಂದು ದಿನಾಂಕಗಳನ್ನು ಘೋಷಿಸಲಾಗಿತ್ತು. ಈ ಬಾರಿ ಚುನಾವಣೆ ಘೋಷಣೆ ತಡವಾಗುತ್ತಿರುವ ವಿಷಯ ಪ್ರಸ್ತಾಪಿಸಿರುವ ವಿರೋಧಪಕ್ಷಗಳು ‘ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿಯೇ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯನ್ನು ತಡ ಮಾಡುತ್ತಿದೆ.  ಈ ಮೂಲಕ ಹಲವು ಸಮಾಜ ಕಲ್ಯಾಣ ಯೋಜನೆಗಳು ಮತ್ತು ನೂತನ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಲು, ಘೋಷಣೆಗಳನ್ನು ಮೊಳಗಿಸಲು ಪ್ರಧಾನಿಗೆ ಅನುಕೂಲ ಮಾಡಿಕೊಡುತ್ತಿದೆ. ಒಂದು ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಆಯೋಗ ಪ್ರಧಾನಿಗೆ ಅನುಕೂಲ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದ್ದವು.

ಗುಜರಾತ್ ವಿಧಾನಸಭೆ ಚುನಾವಣೆಗೂ ಮೊದಲು ಸಹ ಆಯೋಗದ ವಿರುದ್ಧ ಇಂಥದ್ದೇ ಆರೋಪಗಳು ಕೇಳಿ ಬಂದಿತ್ತು. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಜನಸ್ನೇಹಿ ಕಾರ್ಯಕ್ರಮಗಳನ್ನು ಘೋಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ದೂರಿದ್ದವು.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಅಧಿಕಾರಿ, ‘ಈ ಬಾರಿ ಚುನಾವಣಾ ಪ್ರಕ್ರಿಯೆಗೆ ಸಾಕಷ್ಟು ಕಾಲಾವಕಾಶ ಇರುವಂತೆ ದಿನಾಂಕಗಳನ್ನು ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.

‘2014ರಲ್ಲಿ ಚುನಾವಣೆಯನ್ನು ಮಾರ್ಚ್‌ 5ರಂದು ಘೋಷಿಸಲಾಗಿತ್ತು. ಫಲಿತಾಂಶ ಘೋಷಿಸಲು ಮೇ 31 ದಿನಾಂಕವಾಗಿತ್ತು. ಈ ಬಾರಿ ಜೂನ್ 3ರಂದು ಫಲಿತಾಂಶ ಘೋಷಿಸಬೇಕು ಎಂದುಕೊಂಡಿದ್ದೇವೆ. ಹೀಗಾಗಿ ಚುನಾವಣೆ ಘೋಷಣೆಯನ್ನೂ ತುಸು ನಿಧಾನವಾಗಿ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

‘ಕಳೆದ ಕೆಲ ತಿಂಗಳುಗಳಿಂದ ಚುನಾವಣಾ ಆಯೋಗದ ಅಧಿಕಾರಿಗಳು ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದು ವಿವಿಧ ರಾಜ್ಯಗಳಲ್ಲಿ ಆಗಿರುವ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಬಾರಿ ಲೋಕಸಭೆಯ ಜೊತೆಜೊತೆಗೆ ಒಂದು ರಾಜ್ಯದ (ಆಂಧ್ರಪ್ರದೇಶ) ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇರುವುದು ಅಧಿಕಾರಿಗಳ ಕಾರ್ಯಭಾರವನ್ನು ಹೆಚ್ಚಿಸಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಬೇಟಿ ನೀಡಿ ಚುನಾವಣಾ ಸಿದ್ಧತೆ ಪರಿಶೀಲಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಬಹುತೇಕ ರಾಜಕೀಯ ಪಕ್ಷಗಳು ಲೋಕಸಭೆಯ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಆಯೋಗವು ಈ ಪ್ರಸ್ತಾವದ ಸಾಧಕ–ಬಾಧಕಗಳನ್ನು ಪರಿಶೀಲಿಸುತ್ತಿದೆ. ಒಟ್ಟೊಟ್ಟಿಗೆ ಚುನಾವಣೆ ನಡೆಯುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿ, ‘ಸೂಕ್ತ ಕಾಲದಲ್ಲಿ ನಿರ್ಧಾರ ಪ್ರಕಟಿಸಲಾಗುವುದು’ ಎಂದಷ್ಟೇ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 41

  Happy
 • 3

  Amused
 • 0

  Sad
 • 1

  Frustrated
 • 10

  Angry

Comments:

0 comments

Write the first review for this !