ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರಿಂದ ಗಂಡನ ಜೀವ ಉಳಿಸಲು 4 ದಿನ ಕಾಡಿನಲ್ಲಿ ನಡೆದ ಪತ್ನಿ

Last Updated 14 ಮೇ 2020, 5:05 IST
ಅಕ್ಷರ ಗಾತ್ರ

ಬಿಜಾಪುರ (ಛತ್ತೀಸಗಡ): ಮಾವೋವಾದಿಗಳ ಗುಂಪು ಅಪಹರಿಸಿದ್ದ ತನ್ನ ಪತಿಯನ್ನು ಬಿಡಿಸಿಕೊಳ್ಳಲು ಅಪಹೃತನ ಪತ್ನಿ ಕಗ್ಗಾಡಿನಲ್ಲಿ ನಾಲ್ಕ ದಿನ ಸತತ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

‘ನೀವೇಕೆ ಇಂಥ ನಿರ್ಧಾರ ತೆಗೆದುಕೊಂಡಿರಿ’ ಎಂದು ಪ್ರಶ್ನಿಸಿದಾಗ, ‘ವಿಷಾದದಿಂದ ಸುಮ್ಮನೆ ಕುಳಿತುಕೊಳ್ಳುವ ಬದಲು ಏನಾದರೂ ಮಾಡೋಣ ಎಂದುಕೊಂಡೆ. ಗಂಡನಿಗಾಗಿ ಹೆಂಡತಿಯಾದವಳು ಏನು ಬೇಕಾದರೂ ಮಾಡಬಲ್ಲಳು. ನಾನು ಮಾಡಿದ್ದು ದೊಡ್ಡದು ಎಂದು ನನಗೆ ಅನ್ನಿಸುತ್ತಿಲ್ಲ’ ಎಂದು ಆಕೆ ಪ್ರತಿಕ್ರಿಯಿಸಿದರು.

ಬಿಜಾಪುರದ ಭೂಪಾಲಪಟ್ನಂ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಸಂತೋಷ್‌ ಕಟ್ಟಮ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಿನ ಗೊರಾನಾ ಗ್ರಾಮದಿಂದ ಅವರನ್ನು ಮೇ ಮೊದಲ ವಾರದಲ್ಲಿ ಮಾವೊವಾದಿಗಳು ಅಪಹರಿಸಿದ್ದರು.

‘ಮನೆಗೆ ದಿನಸಿ ತರಲೆಂದು ಹೊರಹೋದ ಅವರು ಮತ್ತೆ ಹಿಂದಿರುಗಲಿಲ್ಲ’ ಎಂದು ಸಂತೋಷ್ ಅವರ ಪತ್ನ ಸುನಿತಾ ಪ್ರತಿಕ್ರಿಯಿಸಿದ್ದರು.

ಎರಡು ದಿನಗಳ ನಂತರ ಆಕೆಗೆ ಸಂತೋಷ್‌ನನ್ನು ಮಾವೊವಾದಿಗಳು ಅಪಹರಿಸಿರುವ ವಿಚಾರ ತಿಳಿಯಿತು. ಮೊದಲ ದಿನ ಆಕೆ ‘ಗಂಡ ಇಲ್ಲೇ ಎಲ್ಲೋ ಹೋಗಿರಬಹುದು, ಬರುತ್ತಾರೆ’ ಎಂದು ಕೊಂಡಿದ್ದರು. ಈ ಹಿಂದೆಯೂ ಸಂತೋಷ್ ಇದೇ ರೀತಿ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆಬಿಟ್ಟು ಹೋಗಿದ್ದರು. ಹೀಗಾಗಿ ಸಂತೋಷ್ ನಾಪತ್ತೆ ವಿಚಾರವು ಸುನಿತಾರಿಗೆ ಅಷ್ಟೊಂದು ಯೋಚಿಸಬೇಕಾದ ವಿಚಾರ ಅನ್ನಿಸಿರಲಿಲ್ಲ.

ಮಾವೊವಾದಿಗಳು ಸಂತೋಷ್ ಅವರನ್ನು ಅಪಹರಿಸಿದ್ದಾರೆ ಎಂಬುದು ಅರಿವಾದ ನಂತರ ಪೊಲೀಸರಿಗೆ ವಿಷಯ ತಿಳಿಸಿದರು. ತಮಗೆ ಪರಿಚಯವಿದ್ದವರನ್ನು ಸಂತೋಷ್ ಇರಬಹುದಾದ ಸ್ಥಳದ ಬಗ್ಗೆ ವಿಚಾರಿಸಲು ಆರಂಭಿಸಿದರು.

ಮಾವೊವಾದಿಗಳ ಪ್ರಭಾವವಿರುವ ಸುಕ್ಮಾ ಜಿಲ್ಲೆಗೆ ಹೊಂದಿಕೊಂಡಂಡೆಇರುವಜುನಾಗಡ ಮೂಲದ ಆಕೆಗೆ ನಕ್ಸಲ್‌ ಚಟುವಟಿಕೆಗಳು ಹೊಸದೇನಲ್ಲ.ಮೇ 6ರಂದು ತನ್ನ 14 ವರ್ಷದ ಮಗಳು, ಸ್ಥಳೀಯರ ಪತ್ರಕರ್ತರೊಬ್ಬರು ಹಾಗೂ ಕೆಲ ಹಳ್ಳಿಗರೊಂದಿಗೆ ಸುನಿತಾ ಕಾಡು ಪ್ರವೇಶಿಸಿದರು. ಉಳಿದ ಇಬ್ಬರು ಮಕ್ಕಳನ್ನು ಅಜ್ಜಿಯ ಜೊತೆಗೆ ಬಿಟ್ಟಿದ್ದರು.

ಒಂದಷ್ಟು ದೂರ ಬೈಕ್‌ಗಳಲ್ಲಿ ಸಂಚರಿಸಿದೆವು. ನಂತರ ಕಡಿದಾದ ಬೆಟ್ಟಗಳನ್ನು ಹತ್ತಿ ಇಳಿದೆವು. ನಾಲ್ಕು ದಿನಗಳ ಪ್ರಯಾಣದ ನಂತರ, ಮೇ 10ರಂದು ನನ್ನ ಗಂಡನನ್ನು ಅಪಹರಿಸಿದ್ದ ಮಾವೋವಾದಿಗಳ ಗುಂಪು ಕಾಣಿಸಿತು ಎಂದು ಸುನಿತಾ ಹೇಳುತ್ತಾರೆ.

ಮೇ 11ರಂದು ಮಾವೊವಾದಿಗಳು ಸಂತೋಷ್‌ನ ಹಣೆಬರಹ ನಿರ್ಧರಿಸಲು ‘ಜನ್ ಅದಾಲತ್’ ನಡೆಸಿದರು. ಆಗ ಸುನಿತಾಗೆ ತನ್ನ ಗಂಡನ ಮುಖ ನೋಡಲು ಅವಕಾಶ ಸಿಕ್ಕಿತು. ಗ್ರಾಮಸ್ಥರು ನನ್ನ ಪರವಾಗಿ ಮಾತನಾಡಿದರು. ಗಂಡನನ್ನು ಬಿಟ್ಟುಬಿಡುವಂತೆ ನಾನೂ ಬೇಡಿಕೊಂಡೆ ಎಂದು ಸುನಿತಾ ಪ್ರತಿಕ್ರಿಯಿಸಿದರು.

‘ಪೊಲೀಸ್‌ ಇಲಾಖೆಯಿಂದ ಹೊರಗೆ ಬರಬೇಕು’ ಎಂದು ಷರತ್ತಿನೊಂದಿಗೆ ಸಂತೋಷ್‌ನನ್ನು ಮಾವೊವಾದಿಗಳು ಬಿಡುಗಡೆ ಮಾಡಿದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ತಾರ್ ವಲಯದ ಐಜಿಪಿ ಸುಂದರ್‌ರಾಜ್ ಪಿ., ‘ಸಂತೋಷ್ ಅವರ ಅಪಹರಣದ ನಂತರ ಮಾಹಿತಿ ಕಲೆಹಾಕಲು ಪೊಲೀಸರು ಯತ್ನಿಸಿದರು. ಆದರೆ ಯಾವುದೇ ಶೋಧಕಾರ್ಯಾಚರಣೆ ಆರಂಭಿಸಲಿಲ್ಲ. ಅವರ ಕುಟುಂಬದವರೂ ಸಹ ಹುಡುಕಾಟ ನಡೆಸುತ್ತಿದ್ದರು. ಮೇ 11ರಂದು ಬಿಜಾಪುರಕ್ಕೆ ಹಿಂದಿರುಗಿದ ನಂತರ ವೈದ್ಯಕೀಯ ತಪಾಸಣೆ ನಡೆಸಿ, ಹೇಳಿಕೆ ದಾಖಲಿಸಲಾಯಿತು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT