ಸೋಮವಾರ, ಆಗಸ್ಟ್ 26, 2019
20 °C

ವಿಮಾನ ಕಳಿಸುತ್ತೇನೆ ಕಾಶ್ಮೀರಕ್ಕೆ ಬನ್ನಿ;ವಿಮಾನ ಬೇಡ ಸ್ವಾತಂತ್ರ್ಯದ ಖಾತ್ರಿ ನೀಡಿ

Published:
Updated:

ನವದೆಹಲಿ: ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲ್ಲೀಕ್‌ ಅವರ ನಡುವೆ ವಾಗ್ವಾದ ನಡೆಯುತ್ತಿದೆ. 

ವಿಮಾನ ಕಳುಹಿಸುತ್ತೇನೆ... ಕಾಶ್ಮೀರಕ್ಕೆ ಬಂದು ನೋಡಿ ಆಮೇಲೆ ಮಾತನಾಡಿ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲ್ಲೀಕ್‌ ಹೇಳಿದರೆ, ಅತ್ತ ರಾಹುಲ್‌ ಗಾಂಧಿ, ‘ವಿಮಾನವೇನೂ ಬೇಡ... ಕಾಶ್ಮೀರದಲ್ಲಿ ಮುಕ್ತ ವಾತಾವರಣವಿದೆ,’ ಎಂಬುದನ್ನು ಖಾತ್ರಿ ಮಾಡಿ ಎಂದು ಟ್ವೀಟ್‌ ಮಾಡಿದ್ದಾರೆ.  

‘ಸಂವಿಧಾನದ ವಿಧಿ 370ರ ಅಡಿಯಲ್ಲಿ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಅಲ್ಲಿ ಹಿಂಸಾಚಾರಗಳು ಸಂಭವಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ,’ ಎಂದು ರಾಹುಲ್‌ ಗಾಂಧಿ ಅವರು ಕಳೆದ ಶನಿವಾರ ಹೇಳಿಕೆ ನೀಡಿದ್ದರು. ಇದೇ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲ್ಲೀಕ್‌, ‘ಜಮ್ಮು ಕಾಶ್ಮೀರಕ್ಕೆ ಬರಲು ರಾಹುಲ್‌ ಗಾಂಧಿ ಅವರಿಗೆ ನಾನು ಆಹ್ವಾನ ನೀಡುತ್ತೇನೆ. ಇಲ್ಲಿಗೆ ಬಂದು ಪರಿಸ್ಥಿತಿಯನ್ನು ಅವಲೋಕಿಸಲಿ ಅವರಿಗೆ ವಿಮಾನ ಕಳುಹಿಸಿಕೊಡುತ್ತೇನೆ. ನಂತರ ಅವರು ಮಾತನಾಡಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿ ಮಾತನಾಡಬಾರದು.’ ಎಂದು ಹೇಳಿದ್ದರು. 

ಸತ್ಯಪಾಲ್‌ ಮಲ್ಲೀಕ್‌ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್‌ ಗಾಂಧಿ, ‘ರಾಜ್ಯಪಾಲರೇ, ಜಮ್ಮು ಕಾಶ್ಮೀರ ಮತ್ತು ಲಡಾಕ್‌ಗೆ ಬರುವಂತೆ ನೀಡಿದ ಆಹ್ವಾನವನ್ನು ವಿರೋಧ ಪಕ್ಷಗಳ ನಿಯೋಗ ಮತ್ತು ನಾನು ಸ್ವೀಕರಿಸಿದ್ದೇವೆ. ಆದರೆ, ನಮಗೆ ವಿಮಾನ ಬೇಡ. ಅಲ್ಲಿ ಮುಕ್ತವಾಗಿ ಓಡಾಡುವ, ಜನರು, ನಾಯಕರು, ಸೈನಿಕರನ್ನು ಭೇಟಿಯಾಗಲು ಸ್ವಾತಂತ್ರ್ಯವಿದೆ ಎಂಬುದನ್ನು ಖಾತ್ರಿಪಡಿಸಿ,’ ಎಂದು ಟ್ವೀಟ್‌ ಮಾಡಿದ್ದಾರೆ. 

Post Comments (+)