ಪೋಷಕರನ್ನು ಭೇಟಿಯಾದ ಅಭಿನಂದನ್‌; ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್‌

ಮಂಗಳವಾರ, ಮಾರ್ಚ್ 26, 2019
27 °C
ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ

ಪೋಷಕರನ್ನು ಭೇಟಿಯಾದ ಅಭಿನಂದನ್‌; ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್‌

Published:
Updated:
Prajavani

ನವದೆಹಲಿ: ಪಾಕಿಸ್ತಾನದ ವಶದಿಂದ ಮರಳಿದ ಭಾರತದ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ಶನಿವಾರ ನವದೆಹಲಿಯ ‘ವಾಯುಪಡೆ ಕೇಂದ್ರೀಯ ವೈದ್ಯಕೀಯ ಸಂಸ್ಥೆ’ಯಲ್ಲಿ (ಎಎಫ್‌ಸಿಎಂಇ) ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಅಟ್ಟಾರಿ–ವಾಘಾ ಗಡಿಯಲ್ಲಿ ಪಾಕಿಸ್ತಾನ ಹಸ್ತಾಂತರ ಮಾಡಿದ ಬಳಿಕ ಅಭಿನಂದನ್ ಅವರನ್ನು ಶುಕ್ರವಾರ ರಾತ್ರಿ 11.45ಕ್ಕೆ ದೆಹಲಿಗೆ ಕರೆತರಲಾಯಿತು. ವಾಯುಪಡೆ ಸಿಬ್ಬಂದಿಯ ವಿಶೇಷ ವೈದ್ಯಕೀಯ ಪರಿಶೀಲನೆಗೆ ಮೀಸಲಾಗಿರುವ ‘ಎಎಫ್‌ಸಿಎಂಇ’ಯಲ್ಲಿ ಅವರು ರಾತ್ರಿ ಕಳೆದರು. 

‌ಶನಿವಾರ ಬಳಿಗ್ಗೆ ಅಭಿನಂದನ್ ಅವರ ಕುಟುಂದ ಸದಸ್ಯರ ಭೇಟಿಗೆ ಅವಕಾಶ ನೀಡಲಾಗಿತ್ತು. ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳೂ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಮಾನಸಿಕ ಸ್ಥಿತಿ ಪರಿಶೀಲನೆ

ಅಭಿನಂದನ್ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪರಿಶೀಲನೆಗೋಸ್ಕರ ಅವರನ್ನು ವಾಯುಪಡೆ ಆಸ್ಪತ್ರೆಯಲ್ಲಿ ಶನಿವಾರ ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು.

ಮೂರು ದಿನ ಪಾಕಿಸ್ತಾನದ ಸೇನೆಯ ವಶದಲ್ಲಿದ್ದ ಅವರ ಮನಸ್ಥಿತಿ ಹಾಗೂ ದೇಹದ ಆರೋಗ್ಯವನ್ನು ಸಮಸ್ಥಿತಿಗೆ ತರುವ ಸಲುವಾಗಿ ಕೆಲವು ಸರಳ ವ್ಯಾಯಾಮ ಪ್ರಕ್ರಿಯೆಗಳಿಗೆ (ಕೂಲಿಂಗ್ ಡೌನ್ ಪ್ರೊಸೆಸ್) ಒಳಪಡಿಸಲಾಯಿತು. ಭಾನುವಾರದವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ. 

ಒಮ್ಮೆ ಈ ಪರೀಕ್ಷೆ ಪೂರ್ಣಗೊಂಡ ಬಳಿಕ ಅವರನ್ನು ವಿಸ್ತೃತ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತಕ್ಕೆ ಅವರು ಕಾಲಿಟ್ಟಾಗ ಅವರ ಬಲಭಾಗದ ಮೀಸೆಯಿರುವ ಜಾಗ ಕೊಂಚ ಊದಿಕೊಂಡಿತ್ತು. ಪಾಕಿಸ್ತಾನದಲ್ಲಿ ಸೆರೆಸಿಕ್ಕ ಅವರನ್ನು ಅಲ್ಲಿನ ಜನರು ಥಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದವು. 

ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್‌

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿನಂದನ್ ಅವರನ್ನು ಶನಿವಾರ ಬೆಳಗ್ಗೆ ಸೇನಾ ಆಸ್ಪತ್ರೆಯಲ್ಲಿ ಭೇಟಿಯಾದರು.

ಅಭಿನಂದನ್ ಅವರ ಆರೋಗ್ಯವನ್ನು ವಿಚಾರಿಸಿದ ಸಚಿವರು, ‘ಇಡೀ ದೇಶವೇ ನಿಮ್ಮ ಧೈರ್ಯ ಹಾಗೂ ಬದ್ಧತೆ ಬಗ್ಗೆ ಹಮ್ಮೆಪಡುತ್ತಿದೆ’ ಎಂದು ತಿಳಿಸಿದರು.

ನಿರ್ಮಲಾ ಜೊತೆ ಮಾತನಾಡುವ ವೇಳೆ ಅಭಿನಂದನ್ ಉತ್ಸುಕರಾಗಿದ್ದರು. ಪಾಕಿಸ್ತಾನದ ಸೇನೆಯ ವಶದಲ್ಲಿದ್ದಾಗ ನಡೆದ ಸಂಗತಿಗಳನ್ನು ಅವರು ಸಚಿವರಿಗೆ ವಿವರಿಸಿದರು ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !