ಗುರುವಾರ , ಮಾರ್ಚ್ 4, 2021
18 °C

ಚಳಿಗಾಲದ ಅಧಿವೇಶನ: ಕೋಲಾಹಲದ ಸುಳಿವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಂಗಳವಾರ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಸುಗಮವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕೋರಿದ್ದಾರೆ. ಆದರೆ, ಅಧಿವೇಶನದಲ್ಲಿ ಭಾರಿ ಕೋಲಾಹಲ ನಡೆಯುವ ಸೂಚನೆಗಳು ಸಭೆಯಲ್ಲಿಯೇ ವ್ಯಕ್ತವಾಗಿವೆ. 

ಸಾರ್ವಜನಿಕ ಹಿತಾಸಕ್ತಿಯಿಂದ ಸಂಸತ್‌ ಅಧಿವೇಶನ ಸುಗಮವಾಗಿ ನಡೆಯಲು ಸರ್ಕಾರ ಮತ್ತು ವಿರೋಧ ಪಕ್ಷಗಳು ಪರಸ್ಪರ ಸಹಕರಿಸಬೇಕು ಎಂದು ಮೋದಿ ಹೇಳಿದ್ದಾರೆ.  

ಎಲ್ಲ ವಿಚಾರಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಮೋದಿ ಅವರು ವಿರೋಧ ಪಕ್ಷಗಳಿಗೆ ಭರವಸೆ ಕೊಟ್ಟಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ. ಪ್ರಮುಖ ಶಾಸನಗಳಿಗೆ ಅಂಗೀಕಾರ ಮತ್ತು ಮಹತ್ವದ ವಿಚಾರಗಳ ಚರ್ಚೆಗಾಗಿ ಸಂಸತ್ತಿನ ಎರಡೂ ಸದನಗಳು ರಾತ್ರಿಯವರೆಗೂ ಕೆಲಸ ಮಾಡಬೇಕಾಗಬಹುದು ಎಂಬ ಸೂಚನೆಯನ್ನು ಸರ್ಕಾರ ನೀಡಿದೆ. 

ಆದರೆ, ರಫೇಲ್‌ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಸಂಸತ್ತಿನ ಮುಂದಿಡಲಾಗುವುದು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ವಾಯತ್ತೆಯ ವಿಚಾರವನ್ನೂ ಎತ್ತಲಾಗುವುದು ಎಂದು ಅವರು ಹೇಳಿದ್ದಾರೆ. ಹಾಗಾಗಿ ಕಲಾಪ ಸುಗಮವಾಗಿ ನಡೆಯುವ ಬಗ್ಗೆ ಅನುಮಾನ ಮೂಡಿದೆ. 

‘ಮಂದಿರ: ಶಾಸನ ತರದಿದ್ದರೆ ಕಲಾಪಕ್ಕೆ ಅಡ್ಡಿ’

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮಸೂದೆ ತಾರದಿದ್ದರೆ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷ ಶಿವಸೇನಾ ಹೇಳಿದೆ. ಸರ್ವ ಪಕ್ಷ ಸಭೆಯಲ್ಲಿ ಈ ವಿಚಾರ ತಿಳಿಸಿರುವುದಾಗಿ ಸೇನಾ ಸಂಸದ ಚಂದ್ರಕಾಂತ ಖೈರೆ ಹೇಳಿದ್ದಾರೆ. 

‘ರಾಮ ಮಂದಿರ ನಿರ್ಮಾಣಕ್ಕೆ ಮಸೂದೆ ತರಬೇಕು ಎಂದು ಶಿವಸೇನಾ ಹಿಂದಿನಿಂದಲೂ ಹೇಳುತ್ತಿದೆ. ಮಸೂದೆ ತಾರದಿದ್ದರೆ ಚಳಿಗಾಲದ ಅಧಿವೇಶನ ನಡೆಯಲು ಬಿಡುವುದಿಲ್ಲ’ ಎಂದು ಖೈರೆ ತಿಳಿಸಿದ್ದಾರೆ. 

ಅಯೋಧ್ಯೆ ವಿಚಾರದಲ್ಲಿ ಮಸೂದೆ ತರುವ ಉದ್ದೇಶ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆಗೆ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೇರವಾಗಿ ಉತ್ತರಿಸಿಲ್ಲ. ಈ ವಿಚಾರ ಸರ್ವಪಕ್ಷ ಸಭೆಯ ಕಾರ್ಯಸೂಚಿಯಲ್ಲಿ ಇಲ್ಲ ಎಂದಷ್ಟೇ ಹೇಳಿದ್ದಾರೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗದೇ ಇದ್ದರೆ ಕೇಂದ್ರ ಸರ್ಕಾರ ಹೆಚ್ಚು ದಿನ ಬಾಳಿಕೆ ಬರದು ಎಂದು ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಅಯೋಧ್ಯೆಗೆ ಕಳೆದ ತಿಂಗಳು ಭೇಟಿ ನೀಡಿದ್ದ ವೇಳೆ ಹೇಳಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು