ಸಂಸದರ ಅಮಾನತು ಸಂಖ್ಯೆ 45ಕ್ಕೆ ಏರಿಕೆ

7

ಸಂಸದರ ಅಮಾನತು ಸಂಖ್ಯೆ 45ಕ್ಕೆ ಏರಿಕೆ

Published:
Updated:

ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಎಐಎಡಿಎಂಕೆ, ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ನ ಒಟ್ಟು 21 ಸದಸ್ಯರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಗುರುವಾರ ಅಮಾನತು ಮಾಡಿದ್ದಾರೆ. ಎಐಎಡಿಎಂಕೆಯ ಐವರು ಸದಸ್ಯರನ್ನು ಬುಧವಾರವೇ ಅಮಾನತು ಮಾಡಿದ್ದರು. ಇದರೊಂದಿಗೆ ಅಮಾನತಾದ ಸದಸ್ಯರ ಸಂಖ್ಯೆ 45ಕ್ಕೆ ಏರಿದೆ. 

ಈ ಅಧಿವೇಶನ ಕೊನೆಗೊಳ್ಳುವವರೆಗೆ ಈ ಸದಸ್ಯರು ಕಲಾಪದಲ್ಲಿ ಭಾಗವಹಿಸುವಂತಿಲ್ಲ. ಎಐಎಡಿಎಂಕೆ 37 ಮತ್ತು ಟಿಡಿಪಿ 15 ಸದಸ್ಯರನ್ನು ಲೋಕಸಭೆಯಲ್ಲಿ ಹೊಂದಿವೆ. 

ಇಷ್ಟು ಹೆಚ್ಚು ಸಂಖ್ಯೆಯಲ್ಲಿ ಲೋಕಸಭೆ ಸದಸ್ಯರ ವಿರುದ್ಧ ಕ್ರಮ ಕೈಗೊಂಡಿದ್ದು ಬಹಳ ವಿರಳ. 2014ರ ಫೆಬ್ರುವರಿಯಲ್ಲಿ ಆಗಿನ ಸ್ಪೀಕರ್‌ ಮೀರಾ ಕುಮಾರ್‌ ಅವರು ಆಂಧ್ರ ಪ್ರದೇಶದಿಂದ ಆಯ್ಕೆಯಾದ 18 ಲೋಕಸಬಾ ಸದಸ್ಯರನ್ನು ಅಮಾನತು ಮಾಡಿದ್ದರು. ಇವರೆಲ್ಲರೂ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ವಿರೋಧಿಸಿ ಅಥವಾ ಬೆಂಬಲಿಸಿ ಗದ್ದಲ ಎಬ್ಬಿಸಿದ್ದರು. 

ಡಿಸೆಂಬರ್‌ 11ರಂದು ಚಳಿಗಾಲದ ಅಧಿವೇಶನ ಆರಂಭವಾಗಿತ್ತು. ಆದರೆ, ಕಾವೇರಿ ವಿಚಾರದಲ್ಲಿ ಎಐಎಡಿಎಂಕೆ ಮತ್ತು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಕ್ಕೆ ಆಗ್ರಹಿಸಿ ಟಿಡಿಪಿ ಸದಸ್ಯರು ಮೊದಲ ದಿನದಿಂದಲೂ ಕಲಾಪಕ್ಕೆ ಅಡ್ಡಿ ಮಾಡುತ್ತಲೇ ಬಂದಿದ್ದರು. 

ಆಯೋಗ ಬಯಸಿದರೆ ಕಾಶ್ಮೀರ ಚುನಾವಣೆ: ಕೇಂದ್ರ

ಈ ವರ್ಷ ಲೋಕಸಭೆಗೆ ನಡೆಯಲಿರುವ ಚುನಾವಣೆ ಜತೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಮೇಲೆ ಕಳೆದ ತಿಂಗಳು ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಅದಕ್ಕೂ ಮೊದಲಿನ ಆರು ತಿಂಗಳು ಅಲ್ಲಿ ರಾಜ್ಯಪಾಲರ ಆಡಳಿತ ಇತ್ತು. ಮೆಹಬೂಬಾ ಮುಫ್ತಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಿಜೆಪಿ ಬೆಂಬಲ ವಾಪಸ್‌ ಪಡೆದ ಬಳಿಕ ಅಲ್ಲಿನ ಸರ್ಕಾರ ಪತನವಾಗಿತ್ತು. 

‘ಚುನಾವಣಾ ಆಯೋಗವು ಅಲ್ಲಿ ಚುನಾವಣೆ ನಡೆಸಲು ಬಯಸಿದರೆ ಅದಕ್ಕೆ ನಮ್ಮ ಸರ್ಕಾರದಿಂದ ಯಾವುದೇ ಅಭ್ಯಂತರ ಇಲ್ಲ’  ಎಂದು ರಾಜನಾಥ್‌ ರಾಜ್ಯಸಭೆಯಲ್ಲಿ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !