ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಕರ್ನಾಟಕದ ಅಧಿಕಾರಿ ಕಾರ್ಯವೈಖರಿಗೆ ಜನರ ಮೆಚ್ಚುಗೆ

ಜನರ ನೋವಿಗೆ ಸ್ಪಂದಿಸಿದ ದುಮ್ಕಾದ ಜಿಲ್ಲಾಧಿಕಾರಿ ರಾಜೇಶ್ವರಿ
Last Updated 21 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಪಟ್ನಾ: ಜಾರ್ಖಂಡ್‌ನ ಎರಡನೇ ರಾಜಧಾನಿ ಧುಮ್ಕಾದಲ್ಲಿ ನೆಲೆಸಿರುವ ಮಕ್ಕಳಿಲ್ಲದ 80 ವರ್ಷದ ವಿಧವೆ ಲಕ್ಷ್ಮೀದೇವಿಗೆ ಗಾಲಿಕುರ್ಚಿಯೇ ಆಸರೆ. ಸಂಧಿವಾತದಿಂದಾಗಿ ನಡೆಯಲೂ ಆಗದ ಅವರ ಕೆಲಸಗಳೆಲ್ಲಾ ನಡೆಯುವುದು ಈ ಕುರ್ಚಿಯ ಮೂಲಕವೇ. ಆದರೆ, ಲಾಕ್‌ಡೌನ್‌ ವಿಸ್ತರಣೆ ಮತ್ತು ಹಣದ ಕೊರತೆಯಿಂದಾಗಿಲಕ್ಷ್ಮೀ ಅವರಿಗೆ ನಿತ್ಯದ ಆಹಾರ ಸಾಮಗ್ರಿ ತರುವುದು ದುಸ್ತರವಾಗಿತ್ತು.

ತಮ್ಮ ಈ ಸಮಸ್ಯೆಯನ್ನು ಸಂಬಂಧಿಕರೊಬ್ಬರ ಬಳಿ ಲಕ್ಷ್ಮಿ ಹೇಳಿಕೊಂಡಾಗ ಆ ಸಂಬಂಧಿಕರು ಮೊರೆ ಹೊಕ್ಕಿದ್ದು ದುಮ್ಕಾದ ಜಿಲ್ಲಾಡಳಿತಕ್ಕೆ. ಕರೆ ಮಾಡಿದ ಒಂದು ಗಂಟೆಯಲ್ಲೇ ಲಕ್ಷ್ಮೀದೇವಿಗೆ ಅವರ ಮನೆ ಬಾಗಿಲಿಗೆ ಅಕ್ಕಿ, ಬೇಳೆ, ಕಾಳುಗಳು, ಕಿತ್ತಳೆ, ಸೇಬು, ದ್ರಾಕ್ಷಿ, ಹಾರ್ಲಿಕ್ಸ್ ಮತ್ತು ಬಿಸ್ಕೆಟ್‌ಗಳನ್ನು ಜಿಲ್ಲಾಡಳಿತ ತಲುಪಿಸಿತ್ತು!

ದುಮ್ಕಾದ ಜಿಲ್ಲಾಧಿಕಾರಿ ರಾಜೇಶ್ವರಿ ಬಿ. ಅವರ ತ್ವರಿತ ಸ್ಪಂದನೆಗೆ ಲಕ್ಷ್ಮೀದೇವಿ ಅವರ ಬಳಿ ಮಾತುಗಳಿರಲಿಲ್ಲ ಬದಲಿಗೆ ಜಿಲ್ಲಾಧಿಕಾರಿಗೆ ಮನದುಂಬಿ ಆಶೀರ್ವದಿಸಿದರು.

ಲಾಕ್‌ಡೌನ್‌ ಮಧ್ಯೆಯೂ ಜನರ ನೋವಿಗೆ ಸ್ಪಂದಿಸುತ್ತಿರುವ2011ರ ಬ್ಯಾಚಿನ ಜಾರ್ಖಂಡ್‌ ಕೇಡರ್‌ನ ಐಎಎಸ್‌ ಅಧಿಕಾರಿ ರಾಜೇಶ್ವರಿ ಬಿ. ಅಪ್ಪಟ ಕನ್ನಡತಿ. ಕರ್ನಾಟಕದ ಮೈಸೂರಿನವರಾದ ರಾಜೇಶ್ವರಿ ಬುಡಕಟ್ಟು ಜನರೇ ಹೆಚ್ಚಿರುವ ಜಾರ್ಖಂಡ್‌ನಲ್ಲಿ ದಣಿವರಿಯದೇ ಸೇವೆ ಸಲ್ಲಿಸುತ್ತಿದ್ದಾರೆ.

‘ಅಗತ್ಯವಿರುವವರಿಗೆ ನಾವು ಕನಿಷ್ಠ ಮಾಡಬಹುದಾದ ಕೆಲಸವಿದು’ ಎಂದು ನಮ್ರವಾಗಿಯೇ ದೂರವಾಣಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು ರಾಜೇಶ್ವರಿ.

ಲಕ್ಷ್ಮೀದೇವಿ ಅವರ ಸಮಸ್ಯೆ ಪರಿಹರಿಸಿದ ನಂತರ ದುಮ್ಕಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯತ್ತ ಚಿತ್ತ ಹರಿಸಿದರು ಅವರು. ‘ಇನ್ನೂ ಪೂರ್ಣವಾಗದ ವೈರಾಣು ಪ್ರಯೋಗಾಲಯದಲ್ಲಿಯೇ ರಾಜ್ಯ ಸರ್ಕಾರ ಕೋವಿಡ್‌–19 ಪರೀಕ್ಷಾ ಪ್ರಯೋಗಾಲಯ ಆರಂಭಿಸಲು ಚಿಂತನೆ ನಡೆಸಿದೆ’ ಎಂದರು.

ದೈಹಿಕವಾಗಿ ಅಂತರ ಕಾಯ್ದುಕೊಳ್ಳುವುದೇ ಕೋವಿಡ್‌–19 ವಿರುದ್ಧ ಹೋರಾಡಲು ಇರುವ ಏಕೈಕ ರಾಮಬಾಣ. ಅದನ್ನು ಎಲ್ಲರೂ ಕಾಪಾಡಿಕೊಳ್ಳಬೇಕೆಂದು ಹೇಳಿದ ಅವರು, ಗಾಂಧಿ ಮೈದಾನದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ನಡೆಯುವ ಸಂತೆಯಲ್ಲಿ ದೈಹಿಕ ಅಂತರ ಕಾಯ್ದುಕೊಂಡಿರುವ ಬಗ್ಗೆ ಪರಿಶೀಲಿಸಿದರು.

ಉಡುಪಿ ಮತ್ತು ಕೊಡಗಿನಲ್ಲಿ ವಿದ್ಯಾಭ್ಯಾಸ ಮಾಡಿರುವ ರಾಜೇಶ್ವರಿ ಕೆಲಸದ ನಡುವೆ ತಮ್ಮ ಕುಟುಂಬಕ್ಕೂ ಅಲ್ಪ ಸಮಯವನ್ನು ಮೀಸಲಿಟ್ಟಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ ತಮ್ಮ ಪತಿ ಮತ್ತು ಮಕ್ಕಳ ತಲೆಗೂದಲು ಕತ್ತರಿಸುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆ ಚಿತ್ರಕ್ಕೆ 1,600 ಲೈಕ್‌ಗಳು ಬಂದಿದ್ದವು.

ಈ ಹಿಂದೆ ಜಾರ್ಖಂಡ್‌ನ ರಾಮಘರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಆ ಜಿಲ್ಲೆಯನ್ನು ಬಯಲುಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರದ ಪ್ರಶಂಸೆಗೂ ರಾಜೇಶ್ವರಿ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT