ಸೋಮವಾರ, ಡಿಸೆಂಬರ್ 9, 2019
20 °C

ಎಐಎಡಿಎಂಕೆ ಧ್ವಜಸ್ತಂಭದಿಂದ ಪಾರಾಗಲು ಹೋದ ಯುವತಿ ಮೇಲೆ ಹರಿದ ಟ್ರಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಯಮತ್ತೂರು: ರಸ್ತೆ ಮೇಲೆ ಬಿದ್ದಿದ್ದ ಎಐಎಡಿಎಂಕೆಯ ಧ್ವಜಸ್ತಂಭವನ್ನು ತಪ್ಪಿಸಲು ಹೋದ ಯುವತಿಯೊಬ್ಬಳ ಮೇಲೆ ಟ್ರಕ್ ಹರಿದಿರುವ ಘಟನೆ ತಮಿಳುನಾಡಿನ ಗೋಲ್ಡ್‌ವಿನ್ಸ್ ಪ್ರದೇಶದ ಅವಿನಾಶಿ ರಸ್ತೆಯಲ್ಲಿ ನಡೆದಿದೆ.

30 ವರ್ಷದ ಯುವತಿಯನ್ನು ಅನುರಾಧಾ ಎಂದು ಗುರುತಿಸಲಾಗಿದ್ದು, ಟ್ರಕ್ ಎರಡು ಕಾಲಿನ ಮೇಲೆ ಹರಿದಿರುವ ಪರಿಣಾಮ ಹಲವು ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನುರಾಧಾರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಮಧ್ಯೆಯಲ್ಲಿ ಬಿದ್ದಿದ್ದ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದ ಯುವತಿಯು ರಸ್ತೆ ಮಧ್ಯೆಯಲ್ಲಿಯೇ ಬೈಕ್‌ ನಿಲ್ಲಿಸಿದ್ದಾಳೆ. ಈ ವೇಳೆ ಹಿಂದಿನಿಂದ ಬಂದ ಟ್ರಕ್ ಯುವತಿಗೆ ಡಿಕ್ಕಿ ಹೊಡೆದು ಮೇಲೆ ಹರಿದಿದೆ. ಧ್ವಜಸ್ತಂಭವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಕೊಯಮತ್ತೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ವಾಗತಕ್ಕಾಗಿ ಅಳವಡಿಸಲಾಗಿತ್ತು.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟ್ರಕ್ ಚಾಲಕ ಮುರುಘನ್ ಪರಾರಿಯಾಗಿದ್ದಾನೆ. ಅನುಮತಿ ಪಡೆಯದೆ ಧ್ವಜಸ್ತಂಭವನ್ನು ಅಳವಡಿಸಿದ್ದ ಎಐಎಡಿಎಂಕೆ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಹಿಂದೆ ಚೆನ್ನೈನ ಪಲ್ಲಿಕರಾನೈನಲ್ಲಿಯ ರಸ್ತೆಯಲ್ಲಿ ಎಐಎಡಿಎಂಕೆ ಮುಖಂಡರೊಬ್ಬರ ಮನೆಯ ಮದುವೆ ಕಾರ್ಯಕ್ರಮದ ಸಲುವಾಗಿ ಕಟ್ಟಿದ್ದ ಅಕ್ರಮ ಬ್ಯಾನರ್ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ 23 ವರ್ಷದ ಟೆಕ್ಕಿ ಶುಭಶ್ರೀ ಎಂಬಾಕೆ  ಮೃತಪಟ್ಟಿದ್ದಳು. ಅದಾದ ಬಳಿಕ ವಿವಾದ ಉಂಟಾಗಿತ್ತು. ಈ ವಿಚಾರ ಮದ್ರಾಸ್ ಹೈಕೋರ್ಟ್  ಮೆಟ್ಟಿಲೇರಿ ವಿಚಾರಣೆ ನಡೆಸಿದ ಹೈಕೋರ್ಟ್ ಅನಧಿಕೃತ ಬ್ಯಾನರ್‌ಗಳ ತೆರವಿಗೆ ಸೂಚನೆ ನೀಡಿತ್ತು.

ರಸ್ತೆಗಳಲ್ಲಿ ಬ್ಯಾನರ್ ಹಾಗೂ ಹೋರ್ಡಿಂಗ್ಸ್‌ಗಳನ್ನು ಕಟ್ಟುವ ಪ್ರವೃತ್ತಿಯನ್ನು ನಿಷೇಧಿಸಿದ್ದರೂ ಆದೇಶ ಪಾಲಿಸದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಸೆಪ್ಟೆಂಬರ್ 13 ರಂದು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಪ್ರತಿಕ್ರಿಯಿಸಿ (+)