ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯದ ಮನಸ್ಥಿತಿ ಬದಲಾಯಿಸಿಕೊಳ್ಳಿ: ಕೇಂದ್ರಕ್ಕೆ ‘ಸುಪ್ರೀಂ’ ಖಡಕ್‌ ಎಚ್ಚರಿಕೆ

ಸೇನಾ ಕಮಾಂಡ್‌ಗೆ ಮಹಿಳೆ
Last Updated 17 ಫೆಬ್ರುವರಿ 2020, 20:56 IST
ಅಕ್ಷರ ಗಾತ್ರ

ನವದೆಹಲಿ:ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಅವಕಾಶಗಳಿಗೆ ಇದ್ದ ಮಿತಿಯನ್ನು ತೆಗೆದುಹಾಕುವ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೀಡಿದೆ. ಕಮಾಂಡ್‌ ಹುದ್ದೆಗಳ (ನಾಯಕತ್ವದ ಸ್ಥಾನ) ನೇಮಕದಲ್ಲಿ ಮಹಿಳೆಯರಿಗೂ ಅವಕಾಶ ಇರಬೇಕು ಎಂದು ತೀರ್ಪು ನೀಡಿದೆ.

ಮಹಿಳೆಯರು ಎಂಬ ಕಾರಣಕ್ಕೆ ಸಾರಾಸಗಟಾಗಿ ಈ ಹುದ್ದೆಗಳನ್ನು ನಿರಾಕರಿಸುವುದಕ್ಕೆ ಯಾವ ಸಮರ್ಥನೆಯೂ ಇಲ್ಲ ಮತ್ತು ಇದು ಲಿಂಗ ತಾರತಮ್ಯದ ನಡೆ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿದೆ.

ಕೇಂದ್ರ ಸರ್ಕಾರದ ನಿಲುವಿನ ಬಗ್ಗೆನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಹಿಳಾ ಅಧಿಕಾರಿಗಳನ್ನು ಕಾಯಂ ಸೇವೆಗೆ ನಿಯೋಜಿಸುವ ನಿರ್ಧಾರವನ್ನು ಕೇಂದ್ರವು 2019ರಲ್ಲಿಯೇ ಕೈಗೊಂಡಿತ್ತು. ಆದರೆ, ಗರ್ಭಧಾರಣೆ, ತಾಯ್ತನ, ಕುಟುಂಬದ ಜವಾಬ್ದಾರಿಗಳು, ದೈಹಿಕ ಮಿತಿಗಳು, ವಾಸ್ತವ್ಯ ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆ ಮುಂತಾದವು ಮಹಿಳೆಯರ ಕಾಯಂ ನಿಯೋಜನೆಗೆ ಅಡ್ಡಿ ಎಂಬ ಟಿಪ್ಪಣಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಈ ವಾದವನ್ನು ನ್ಯಾಯಪೀಠವು ಒಪ್ಪಿಲ್ಲ. ‘ಸೇನೆಯಲ್ಲಿ ನಿಜವಾದ ಸಮಾನತೆ ಜಾರಿಗೆ ಬರಬೇಕಿದ್ದರೆ ಮನಸ್ಥಿತಿಯಲ್ಲಿಯೇ ಬದಲಾವಣೆ ಆಗಬೇಕಿದೆ’ ಎಂದು ಖಡಕ್ಕಾಗಿಯೇ ಹೇಳಿದೆ.

ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಹುದ್ದೆಗಳನ್ನು ನೀಡುವುದಕ್ಕೆ ಅವಕಾಶ ಕಲ್ಪಿಸುವಂತೆ ದೆಹಲಿ ಹೈಕೋರ್ಟ್‌ 2010ರ ಮಾರ್ಚ್‌ 12ರಂದು ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ. ಆದರೂ, ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದಲೂ ಅಸಡ್ಡೆ ತೋರಿದೆ. ತಡೆಯಾಜ್ಞೆಯೇ ಇಲ್ಲದಿದ್ದಾಗ ದೆಹಲಿ ಹೈಕೋರ್ಟ್‌ ನಿರ್ದೇಶನವನ್ನು ಕೇಂದ್ರ ಸರ್ಕಾರ ಪಾಲಿಸಬೇಕಾಗಿತ್ತು ಎಂದು ತಿಳಿಸಿದೆ.

ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದು 2011ರ ಸೆಪ್ಟೆಂಬರ್‌ 2ರಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. ಆದರೂ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಕಾಯಂ ಸೇವೆ ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸುವುದಕ್ಕೆ ಅವರ ಶಾರೀರಿಕ ಮಿತಿಗಳು ಅಡ್ಡಿ ಎಂಬುದು ಸಮರ್ಥನೀಯವಲ್ಲ. ಪುರುಷ ಸಹೋದ್ಯೋಗಿಗಳ ಹೆಗಲಿಗೆ ಹೆಗಲು ಕೊಟ್ಟು ದುಡಿದು, ಸೇನಾಪಡೆಯು ಹೆಮ್ಮೆಪಡುವಂತೆ ಮಹಿಳಾ ಸಿಬ್ಬಂದಿಯು ಮಾಡಿದ್ದಾರೆ. ಅದಲ್ಲದೆ, ಅವಕಾಶಗಳನ್ನು ನಿರಾಕರಿ ಸಿದರೆ ಸಂವಿಧಾನದ 14ನೇ ವಿಧಿಯು ನೀಡಿರುವ ಸಮಾನತೆಯ ಖಾತರಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಪೀಠವು ಹೇಳಿದೆ.

ನ್ಯಾಯಾಲಯ ಹೇಳಿದ್ದೇನು?
* ಮಹಿಳಾ ಅಧಿಕಾರಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಶೌರ್ಯ, ಸೇನಾ ಪದಕಗಳನ್ನು ಪಡೆದಿದ್ದಾರೆ. ಸೇನಾ ಪಡೆಗಳಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಶಾಂತಿ ಪಾಲನೆಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೀಗಾಗಿ, ಶಾರೀರಿಕ ಲಕ್ಷಣಗಳ ಅಂಶವನ್ನು ಪ್ರಸ್ತಾಪಿಸಿರುವುದು ತಪ್ಪು

* ಕಮಾಂಡ್‌ ಹುದ್ದೆಗಳನ್ನು ನೀಡಲು ನಿರ್ಬಂಧಗಳನ್ನು ವಿಧಿಸಬಾರದು

* 2010ರಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದ ಬಳಿಕವೂ ಕೇಂದ್ರ ಸರ್ಕಾರ ಉದಾಸೀನತೆ, ಅಸಡ್ಡೆ ತೋರಿರುವುದು ಸರಿ ಅಲ್ಲ.

‘ಸ್ತ್ರೀ ಸಬಲೀಕರಣಕ್ಕೆ ಮಹತ್ವದ ತೀರ್ಪು’
ಆದೇಶವನ್ನು ಸ್ವಾಗತಿಸಿರುವ ಮಹಿಳಾ ಅಧಿಕಾರಿಗಳು, ಇದು ಸೇನಾ ಪಡೆಗಳಿಗೆ ಸೀಮಿತವಲ್ಲ, ಮಹಿಳಾ ಸಬಲೀಕರಣದ ದಿಸೆಯಲ್ಲಿ ನೀಡಿದ ಮಹತ್ವದ ತೀರ್ಪು ಇದಾಗಿದೆ ಎಂದುವಿಶ್ಲೇಷಿಸಿದ್ದಾರೆ.

‘ಈ ತೀರ್ಪಿನಿಂದ ಸಮಾನ ಅವಕಾಶಗಳು ದೊರೆಯಲಿವೆ. ಸೇನಾ ಅಧಿಕಾರಿಗಳು ಕೋರ್ಟ್‌ ಅನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದನ್ನು ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಮಹಿಳಾ ಅಧಿಕಾರಿಗಳ ಪರ ವಕೀಲರಾದ ಮೀನಾಕ್ಷಿ ಲೇಖಿ ಪ್ರತಿಕ್ರಿಯಿಸಿದ್ದಾರೆ.

ಏನಿದು ಕಾಯಂ ಸೇವೆ
ಸೇನೆಯಲ್ಲಿ ನಿವೃತ್ತಿಯಾಗುವವರೆಗೂ ಸೇವೆ ಸಲ್ಲಿಸಲು ಅವಕಾಶ ದೊರೆಯಲಿದೆ. ಅಂದರೆ, ಕಾಯಂ ಸೇವೆ (ಪರ್ಮನೆಂಟ್‌ ಕಮಿಷನ್‌) ಮೂಲಕ ಆಯ್ಕೆಯಾದರೆ ಈಗ ನಿಗದಿಪಡಿಸಿರುವ ನಿವೃತ್ತಿ ವಯಸ್ಸು 60 ವರ್ಷಗಳವರೆಗೂ ಕಾರ್ಯನಿರ್ವಹಿಸುವ ಅವಕಾಶ ಲಭಿಸಲಿದೆ.

ಬಿಜೆಪಿಯಿಂದ ಮಹಿಳೆಯರಿಗೆ ಅಗೌರವ: ರಾಹುಲ್‌
ಸೇನೆಯಲ್ಲಿನ ಮಹಿಳಾ ಅಧಿಕಾರಿಗಳು ಕಮಾಂಡರ್‌ ಹುದ್ದೆಗಳಿಗೆ ಅಥವಾ ಕಾಯಂ ಸೇವೆ ಹುದ್ದೆಗಳಿಗೆ ಸೂಕ್ತವಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಮಹಿಳೆಯರಿಗೆ ಅಗೌರವ ತೋರಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

*
ಮಹಿಳೆಯರು ಕಮಾಂಡ್‌ ಹುದ್ದೆಗಳಿಗೆ ಸಮರ್ಥರಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಬಿಜೆಪಿ ಸರ್ಕಾರ ಮಹಿಳೆಯರಿಗೆ ಅಗೌರವ ತೋರಿದೆ
-ರಾಹುಲ್‌ ಗಾಂಧಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT