ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಹ್ರಾಡೂನ್: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ

Last Updated 18 ಫೆಬ್ರುವರಿ 2019, 7:27 IST
ಅಕ್ಷರ ಗಾತ್ರ

ಡೆಹ್ರಾಡೂನ್: ಪುಲ್ವಾಮ ಆತ್ಮಾಹತಿ ದಾಳಿ ನಂತರ ಡೆಹ್ರಾಡೂನ್‍ನ ಎರಡು ಶೈಕ್ಷಣಿಕ ಸಂಸ್ಥೆಗಳು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿವೆ.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಶ್ಮೀರ ಮೂಲದ ಯಾವುದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಈ ಶೈಕ್ಷಣಿಕ ಸಂಸ್ಥೆಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.

ಎಬಿವಿಪಿ, ವಿಎಚ್‍ಪಿ, ಬಜರಂಗದಳ ನೇತೃತ್ವದಲ್ಲಿಡೆಹ್ರಾಡೂನ್‍ನ ಡಿಎವಿ ಪಿಜಿ ಕಾಲೇಜಿನ ಹೊರಗೆ ಶುಕ್ರವಾರ ಪ್ರತಿಭಟನೆ ನಡೆದಿದೆ.ಅದೇ ವೇಳೆ ತಮ್ಮ ಕಾಲೇಜಿನಲ್ಲಿ ಯಾವುದೇ ಕಾಶ್ಮೀರಿ ವಿದ್ಯಾರ್ಥಿ ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವುದು ಗಮನಕ್ಕೆ ಬಂದರೆ ಅವರನ್ನು ಕಾಲೇಜಿನಿಂದ ತೆಗೆದುಹಾಕಲಾಗುವುದು ಎಂದು ಬಾಬಾ ಫರೀದ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಫ್‍ಐಟಿ) ಪ್ರಾಂಶುಪಾಲ ಡಾ.ಅಸ್ಲಾಂ ಸಿದ್ದಿಖಿ ಹೇಳಿದ್ದಾರೆ.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಸಿದ್ದಿಖಿ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು.
'ಎಬಿವಿಪಿ, ವಿಎಚ್‍ಪಿ ಮತ್ತು ಬಜರಂಗದಳದ ಸುಮಾರು 400-500 ಮಂದಿ ನಮ್ಮ ಸಂಸ್ಥೆಯ ಹೊರಗೆ ಮಧ್ಯಾಹ್ನ 1 ಗಂಟೆಯಿಂದ 5 ಗಂಟೆ ವರೆಗೆ ಪ್ರತಿಭಟನೆ ನಡೆಸಿದ್ದಾರೆ. ಬಿಎಫ್ಐಟಿಯಲ್ಲಿ ಕಲಿಯುತ್ತಿರುವ ಎಲ್ಲ ಕಾಶ್ಮೀರಿ ವಿದ್ಯಾರ್ಥಿಗಳನ್ನು ಹೊರಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ. ಶೈಕ್ಷಣಿಕವರ್ಷದ ಮಧ್ಯಾವಧಿಯಲ್ಲಿ ಅವರನ್ನು ತೆಗೆದು ಹಾಕಿದರೆ ಅವರ ವಿದ್ಯಾರ್ಥಿ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ನಾನು ಪ್ರತಿಭಟನಾಕಾರರಿಗೆ ಹೇಳಿದ್ದೆ.ಕೊನೆಗೆ ಕಾಶ್ಮೀರಿ ವಿದ್ಯಾರ್ಥಿಗಳ ಭದ್ರತೆಯನ್ನು ಪರಿಗಣಿಸಿ ಮುಂದಿನ ವರ್ಷ ಯಾವುದೇ ಕಾಶ್ಮೀರಿ ವಿದ್ಯಾರ್ಥಿಗೆ ಈ ಸಂಸ್ಥೆಯಲ್ಲಿ ಪ್ರವೇಶ ನೀಡುವುದಿಲ್ಲ ಎಂದು ನಾನು ಲಿಖಿತ ಪ್ರಕಟಣೆ ನೀಡಿದೆ'

ಬಿಎಫ್‍ಐಟಿಯಲ್ಲಿ ಸುಮಾರು 250 ಕಾಶ್ಮೀರಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಇದೇ ರೀತಿ ಡಿಎವಿ ಕಾಲೇಜಿನಲ್ಲಿಯೂ ಲಿಖಿತ ಪ್ರಕಟಣೆ ಹೊರಡಿಸಲಾಗಿದೆ.ಈ ಪ್ರಕಟಣೆ ಡಿಎವಿ ವಿದ್ಯಾರ್ಥಿ ಸಂಘಟನೆಗೆ ಬರೆದಿದ್ದು, ಇದರಲ್ಲಿಡೆಹ್ರಾಡೂನ್ ಮೂಲದ ಅಲ್ಫೈನ್ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಟೆಕ್ನಾಲಜಿ ನಿರ್ದೇಶಕಎಸ್.ಕೆ ಚೌಹಾಣ್ ಸಹಿ ಇದೆ.

ಈ ಬಗ್ಗೆ ಚೌಹಾಣ್ ಅವರಲ್ಲಿ ಕೇಳಿದಾಗ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿ ಪ್ರವೇಶ ನೀಡುವುದಿಲ್ಲ ಎಂದು ನಾನು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದೇನೆ.ನಾನು ಅದನ್ನು ಬರೆದಿಲ್ಲ ಎಂದು ಹೇಳುತ್ತಿಲ್ಲ.ಆದಾಗ್ಯೂ, ಇಲ್ಲಿವರೆಗೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಎರಡೇ ಎರಡು ಶೈಕ್ಷಣಿಕ ಸಂಸ್ಥೆಗಳು ಹೇಳಿವೆ. ಒಂದು ವೇಳೆ ಈ ರಾಜ್ಯದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದರೆ ಮಾತ್ರ ನಾವು ಅದನ್ನು ಅನುಸರಿಸುತ್ತೇವೆ.ಈ ಎಲ್ಲ ತೀರ್ಮಾನಗಳನ್ನು ಶೈಕ್ಷಣಿಕ ಸಂಸ್ಛೆಯ ಚೇರ್‌ಮೆನ್ ಅನಿಲ್ ಸೈನಿ ಸೇರಿದಂತೆ ಉನ್ನತ ಅಧಿಕಾರಿಗಳ ಸಲಹೆ ಮೇರೆಗೆ ತೆಗೆದುಕೊಳ್ಳಗಾಗಿದೆ ಎಂದಿದ್ದಾರೆ ಚೌಹಾಣ್.

ಶುಕ್ರವಾರ ಬಲಪಂಥೀಯ ಸಂಘಟನೆಗಳು ಅಲ್ಫೈನ್ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ಅಲ್ಲಿರುವ 300 ಕಾಶ್ಮೀರಿ ವಿದ್ಯಾರ್ಥಿಗಳನ್ನು ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದವು.ಈ ಒತ್ತಾಯದ ಮೇರೆಗೆ ಹೊಸ ಶೈಕ್ಷಣಿಕ ವರ್ಷದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಚೌಹಾಣ್ ಪ್ರಕಟಣೆ ಹೊರಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT