ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ದುಲ್ಲಾ, ಮುಫ್ತಿಗಳು ದೇಶ ಒಡೆಯಲು ಬಿಡೆನು: ಪ್ರಧಾನಿ ಮೋದಿ

‘ಜಮ್ಮು ಮತ್ತು ಕಾಶ್ಮೀರದ ಮೂರು ತಲೆಮಾರು ಹಾಳುಗೆಡವಿದ ಎರಡು ಮನೆತನ’
Last Updated 15 ಏಪ್ರಿಲ್ 2019, 1:39 IST
ಅಕ್ಷರ ಗಾತ್ರ

ಕಠುವಾ: ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬಗಳ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ ಮೂರು ತಲೆಮಾರುಗಳ ಜನರನ್ನು ಈ ಎರಡೂ ಮನೆತನಗಳು ಹಾಳುಗೆಡವಿವೆ ಎಂದು ದೂರಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಡಿಕೆ ಇಟ್ಟಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತವನ್ನು ಒಡೆಯಲು ಅವರಿಗೆ ಅವಕಾಶ ನೀಡುವುದಿಲ್ಲ ಎಂದುತಿರುಗೇಟು ನೀಡಿದ್ದಾರೆ.

‘ಆ ಕುಟುಂಬಗಳು ಮೂರು ತಲೆಮಾರುಗಳ ಕಾಲರಾಜ್ಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅವುಗಳನ್ನು ಸೋಲಿಸುವುದೇ ಒಳಿತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬಿಟ್ಟರೆ ತಮ್ಮ ಇಡೀ ಕುಲವನ್ನೇ ಅವರು ಕಣಕ್ಕಿಳಿಸುತ್ತಾರೆ. ಮೋದಿಯನ್ನು ಎಷ್ಟು ನಿಂದಿಸುತ್ತಾರೋ ನಿಂದಿಸಲಿ, ಚಿಂತೆಯಿಲ್ಲ. ಆದರೆ ದೇಶವನ್ನು ಎರಡಾಗಿಸಲು ಮಾತ್ರ ಅವರಿಂದಾಗದು’ ಎಂದು ಹೇಳಿದ್ದಾರೆ.

ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಪರವಾಗಿ ಉಧಂಪುರದಲ್ಲಿ ಪ್ರಚಾರ ನಡೆಸಿದರು.

‘ಜಲಿಯನ್‌ವಾಲಾಬಾಗ್ ರಾಜಕೀಯ’: ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಹಳೆಯ ಪಕ್ಷಕ್ಕೆ ಸೋಂಕು ತಗುಲಿದೆ ಎಂದು ಮೂದಲಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ರದ್ದುಪಡಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದು ಸೇನಾಪಡೆಗಳನ್ನು ಎದೆಗುಂದಿಸುವ ಯತ್ನ ಎಂದು ಪ್ರಧಾನಿ ಟೀಕಿಸಿದ್ದಾರೆ.

‘ದೇಶಭಕ್ತರು ಈ ರೀತಿ ಮಾತನಾಡುತ್ತಾರೆಯೇ? ನಮ್ಮ ಪಡೆಗಳು ನಮಗೆ ರಕ್ಷಣೆ ನೀಡುತ್ತಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿರುವ ಅವರು, ಜಲಿಯನ್‌ವಾಲಾಬಾಗ್ ಶತಮಾನದ ಕಾರ್ಯಕ್ರಮವನ್ನು ಕಾಂಗ್ರೆಸ್ ರಾಜಕೀಯಗೊಳಿಸಿದೆ ಎಂದು ದೂರಿದ್ದಾರೆ.

‘ಕಾರ್ಯಕ್ರಮದಿಂದ ದೂರವುಳಿಯುವ ಮೂಲಕಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಅಪಮಾನ ಮಾಡಿದ್ದಾರೆ.ಅಮರೀಂದರ್ ಅವರನ್ನು ನಾನು ಬಹಳ ವರ್ಷದಿಂದ ಬಲ್ಲೆ. ಅವರ ದೇಶಪ್ರೇಮದ ಬಗ್ಗೆ ಎರಡು ಮಾತಿಲ್ಲ. ಆದರೆ ‘ಪರಿವಾರ ಭಕ್ತಿ’ಯು ಅವರ ಮೇಲೆ ಎಷ್ಟು ಪ್ರಮಾಣದ ಒತ್ತಡ ಹೇರಿದೆ ಎಂದು ಊಹಿಸಬಲ್ಲೆ’ ಎಂದು ಮೋದಿ ಹೇಳಿದ್ದಾರೆ.

ಅಮರೀಂದರ್ ತಿರುಗೇಟು: ಜಲಿಯನ್‌ವಾಲಾಬಾಗ್ ಕಾರ್ಯಕ್ರಮಕ್ಕೆ ಗೈರಾಗಿದ್ದನ್ನು ಪ್ರಶ್ನಿಸಿದ ಮೋದಿ ಅವರಿಗೆ ತಿರುಗೇಟು ನೀಡಿರುವ ಅಮರೀಂದರ್ ಸಿಂಗ್, ಪ್ರಧಾನಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಬೆಂಬಲಿಸುವ ಬದಲಾಗಿ,ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಸಮಾನಾಂತರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು ಎಂದು ಅಮರೀಂದರ್ ದೂರಿದ್ದಾರೆ. ಅಮೃತಸರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಕೇಂದ್ರ ಸರ್ಕಾರ. ಭಾಗಿಯಾಗಿದ್ದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.

‘ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಪ್ರಧಾನಿ ಅವರನ್ನು ಎರಡು ವರ್ಷಗಳಿಂದ ಸಂಪರ್ಕ ಮಾಡುತ್ತಿದ್ದೇನೆ. ಆದರೆ ಸೂಕ್ತವಾಗಿ ಸ್ಪಂದಿಸುವಲ್ಲಿ ಕೇಂದ್ರ ವಿಫಲವಾಗಿದೆ.ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಿತ್ತು’ ಎಂದು ಅಮರೀಂದರ್ ಆರೋಪಿಸಿದ್ದಾರೆ.

ಮೆಹಬೂಬಾ ತರಾಟೆ

ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರನ್ನು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಚುನಾವಣೆಗೂ ಮುನ್ನ ನಮ್ಮನ್ನು ವಿರೋಧಿಸುವ ಪ್ರಧಾನಿ, ಚುನಾವಣೆ ಬಳಿಕ ಮೈತ್ರಿಗಾಗಿ ನಮ್ಮ ಮನೆಗೆ ನಿಯೋಗ ಕಳುಹಿಸುತ್ತಾರೆ. ನ್ಯಾಷನಲ್ ಕಾನ್ಫರೆನ್ಸ್ ವಿಚಾರದಲ್ಲಿ 1999ರಲ್ಲಿ, ಪಿಡಿಪಿ ವಿಚಾರದಲ್ಲಿ 2015ರಲ್ಲಿ ಇದು ನಿಜವಾಗಿದೆ. ಮುಸ್ಲಿಮರು,ದಲಿತರನ್ನು ದೇಶದಿಂದ ಹೊರಗಟ್ಟುವ ಅಜೆಂಡಾ ಹೊಂದಿರುವ ಬಿಜೆಪಿ, ದೇಶ ಒಡೆಯಲು ಯತ್ನಿಸುತ್ತಿದೆ’ ಎಂದು ಮೆಹಬೂಬಾ ಆರೋಪಿಸಿದ್ದಾರೆ.

*
ಈ ಎರಡು ಕುಟುಂಬಗಳಿಂದ ಮುಕ್ತಿ ಕೊಡಿಸುತ್ತೇನೆ ಎಂದು ಮೋದಿ 2014ರಲ್ಲಿ ಹೇಳಿದ್ದರು. ಆದರೆ ಮುಫ್ತಿ ಕುಟುಂಬದ ಒಬ್ಬರಲ್ಲ, ಇಬ್ಬರನ್ನು ಮುಖ್ಯಮಂತ್ರಿ ಮಾಡಿದರು.
- ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT