ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ‘ಸಿಂಹಾಸನ’ಕ್ಕೆ ತಲೆ ಬಾಗುವುದಿಲ್ಲ: ಪವಾರ್

ಚುನಾವಣೆ ಹೊಸ್ತಿಲಲ್ಲಿ ಇ.ಡಿ. ಪ್ರಕರಣ; ಸ್ವಯಂಪ್ರೇರಿತರಾಗಿ ವಿಚಾರಣೆಗೆ ಹಾಜರಾಗಲು ಪವಾರ್ ನಿರ್ಧಾರ
Last Updated 25 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಭ್ರಷ್ಟಾಚಾರ ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಗೆ (ಇ.ಡಿ) ಶುಕ್ರವಾರ ಸ್ವಯಂಪ್ರೇರಣೆಯಿಂದ ಹಾಜರಾಗುತ್ತೇನೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. ‘ಛತ್ರಪತಿ ಶಿವಾಜಿ ಅವರ ಸಿದ್ಧಾಂತಗಳನ್ನು ಪಾಲಿಸುವ ಮಹಾರಾಷ್ಟ್ರವು ದೆಹಲಿಯ ಸಿಂಹಾಸನದ ಮುಂದೆ ಎಂದಿಗೂ ತಲೆಬಾಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

‘ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನನಗೆ ನಂಬಿಕೆಯಿದ್ದು, ಜಾರಿ ನಿರ್ದೇಶನಾಲಯದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ತನಿಖಾ ಸಂಸ್ಥೆ ನೀಡುವ ಆತಿಥ್ಯ ಸ್ವೀಕರಿಸುತ್ತೇನೆ’ ಎಂದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಸಮಯದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿರುವುದನ್ನು ಪವಾರ್ ಪ್ರಶ್ನಿಸಿದ್ದಾರೆ. ಪವಾರ್ ಅವರು ಮಹಾರಾಷ್ಟ್ರದಲ್ಲಿ ಇ.ಡಿ ವಿಚಾರಣೆ ಎದುರಿಸುತ್ತಿರುವ ಎರಡನೇ ಪ್ರಮುಖ ರಾಜಕಾರಣಿಯಾಗಿದ್ದಾರೆ. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಇ.ಡಿಆಗಸ್ಟ್ 22ರಂದು ವಿಚಾರಣೆಗೆ ಒಳಪಡಿಸಿತ್ತು.

‘ಚುನಾವಣೆ ಪ್ರಚಾರದ ನಿಮಿತ್ತ ನಾನು ಕೆಲವು ದಿನ ಮುಂಬೈನಲ್ಲಿ ಇರುವುದಿಲ್ಲ. ನಾನು ಲಭ್ಯವಿಲ್ಲ ಎಂದು ಇ.ಡಿ ಅಧಿಕಾರಿಗಳು ತಪ್ಪು ತಿಳಿದುಕೊಳ್ಳಬಾರದು. ನಾನೇ ಖುದ್ದಾಗಿ ಮುಂಬೈನ ತನಿಖಾ ಸಂಸ್ಥೆ ಕಚೇರಿಗೆ ಹೋಗಿ ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುತ್ತೇನೆ’ ಎಂದು ಪವಾರ್ ಹೇಳಿದ್ದಾರೆ.

ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಶರದ್ ಪವಾರ್, ಅವರ ಸಂಬಂಧಿ ಅಜಿತ್ ಪವಾರ್ ಸೇರಿದಂತೆ 70 ಮಂದಿ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ. ಪವಾರ್‌ಗೆ ಈವರೆಗೆ ಇ.ಡಿ ನೋಟಿಸ್ ಬಂದಿಲ್ಲ.

ಇ.ಡಿ ಕ್ರಮದಲ್ಲಿ ರಾಜಕೀಯ ದುರುದ್ದೇಶ ಇದೆಯೇ ಎಂಬ ಪ್ರಶ್ನೆಗೆ, ‘ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗುವ ಹೊತ್ತಿನಲ್ಲಿ ಇ.ಡಿ ಈ ಕ್ರಮಕ್ಕೆ ಮುಂದಾಗಿದೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು. ಬ್ಯಾಂಕ್ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ. ತಾವು ಬ್ಯಾಂಕ್ ಸದಸ್ಯ ಅಥವಾ ನಿರ್ದೇಶಕನೂ ಅಲ್ಲ ಎಂದು ಪವಾರ್ ಸ್ಪಷ್ಟಪಡಿಸಿದ್ದಾರೆ. 1980ರಲ್ಲಿ ಕೃಷಿ ಸಮಸ್ಯೆ ಇಟ್ಟುಕೊಂಡು ವಿದರ್ಭದಲ್ಲಿ ರ‍್ಯಾಲಿ ನಡೆಸಿದ್ದಾಗ ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದೆ ಎಂದಿದ್ದಾರೆ.

ಯಾವುದೇ ಹಗರಣ ನಡೆದಿಲ್ಲ. ಶರದ್ ಪವಾರ್‌ಗೂ ಹಗರಣಕ್ಕೂ ಸಂಬಂಧವಿಲ್ಲ ಎಂದು ಪವಾರ್ ಸಂಬಂಧಿ ಹಾಗೂ ಮಹಾರಾಷ್ಟ್ರದ ಮಾಜಿಉಪ ಮುಖ್ಯಮಂತ್ರಿಅಜಿತ್ ಪವಾರ್ ಹೇಳಿದ್ದಾರೆ.

ಪವಾರ್ ಹೆಸರಿಲ್ಲ ಎಂದ ಬಿಜೆಪಿ ಮುಖಂಡ

ಹಗರಣದಲ್ಲಿ ಎಲ್ಲಿಯೂ ಶರದ್ ಪವಾರ್ ಅವರ ಹೆಸರಿಲ್ಲ ಎಂಬುದಾಗಿ ಬಿಜೆಪಿ ಮುಖಂಡ ಏಕನಾಥ ಖಾಡ್ಸೆ ನೀಡಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿದೆ. ಇ.ಡಿ ಪ್ರಕರಣ ರಾಜಕೀಯ ಪ್ರೇರಿತ ಎಂದು ಎನ್‌ಸಿಪಿ ಆರೋಪಿಸುತ್ತಿರುವ ಹೊತ್ತಿನಲ್ಲೇ ಖಾಡ್ಸೆ ಹೇಳಿಕೆ ಅಚ್ಚರಿ ಮೂಡಿಸಿದೆ.

‘ಬ್ಯಾಂಕ್‌ನ ಭ್ರಷ್ಟಾಚಾರ ಪ್ರಕರಣವನ್ನು ಗಮನಿಸುತ್ತಿದ್ದೇನೆ. ಇದರಲ್ಲಿ ಪವಾರ್ ಹೆಸರು ಸೇರಿದ್ದು ಹೇಗೆ ಎಂಬುದು ನನ್ನಲ್ಲಿ ಅಚ್ಚರಿ ಮೂಡಿಸಿದೆ’ ಎಂದು ಖಾಡ್ಸೆ ಹೇಳಿಕೆ ನೀಡಿದ್ದಾರೆ.

ಬೆಂಬಲಿಗರ ಪ್ರತಿಭಟನೆ

ಪವಾರ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿದ್ದಕ್ಕೆ ಎನ್‌ಸಿಪಿ ಕಾರ್ಯಕರ್ತರು ಮಹಾರಾಷ್ಟ್ರದ ಹಲವು ಕಡೆ ಬುಧವಾರ ಪ್ರತಿಭಟನೆ ನಡೆಸಿದರು. ತವರು ಜಿಲ್ಲೆ ಬಾರಾಮತಿ ಸೇರಿ ಔರಾಂಗಾಬಾದ್, ಸೊಲ್ಲಾಪುರ, ಬೀಡ್, ಠಾಣೆ, ನಾಸಿಕ್‌ನಲ್ಲಿ ಧರಣಿ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT