ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾ ತನಕ ಮೋದಿ ನಿದ್ರಿಸಲು ಬಿಡಲ್ಲ: ರಾಹುಲ್‌ ಎಚ್ಚರಿಕೆ

Last Updated 18 ಡಿಸೆಂಬರ್ 2018, 12:33 IST
ಅಕ್ಷರ ಗಾತ್ರ

ನವದೆಹಲಿ: ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

ಸಂಸತ್‌ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಕೇವಲ ಆರು ತಾಸಿನ ಒಳಗಾಗಿ ಕೃಷಿ ಸಾಲ ಮನ್ನಾ ಮಾಡಲಾಗಿದೆ. ರಾಜಸ್ಥಾನ ಕೂಡ ಶೀಘ್ರ ಘೋಷಣೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹತ್ತು ದಿನಗಳ ಒಳಗಾಗಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಲಾಗಿತ್ತು. ಅದರಂತೆ ಮಾತನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ ಎಂದು ರಾಹುಲ್ ಹೇಳಿದರು.

ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರಿಗೆ ರೈತರ ಒಂದೇ ಒಂದು ರೂಪಾಯಿ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗಿಲ್ಲ. ಹೋಗಲಿ, ಈ ದಿಸೆಯಲ್ಲಿ ಅವರು ಕಿಂಚಿತ್ತೂ ಪ್ರಯತ್ನವನ್ನೂ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೇವಲ ತಮ್ಮ ಉದ್ಯಮಿ ಮಿತ್ರ ಸಾಲವನ್ನು ಮನ್ನಾ ಮಾಡಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಅನಿಲ್‌ ಅಂಬಾನಿ ಸೇರಿದಂತೆ ದೇಶದ 15 ಶ್ರೀಮಂತ ಉದ್ಯಮಿ ಮಿತ್ರರ ₹3.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದೊಂದೇ ಅವರ ಮಹತ್ವದ ಸಾಧನೆ ಎಂದು ರಾಹುಲ್‌ ಲೇವಡಿ ಮಾಡಿದರು.

ಒಂದು ವೇಳೆ ಮೋದಿ ಸರ್ಕಾರ ಸಾಲ ಮನ್ನಾ ಮಾಡದಿದ್ದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆ ಕೆಲಸ ಮಾಡಲಿದೆ. ರೈತರ ಸಾಲ ಮನ್ನಾ ಅಗುವವರೆಗೂ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ವಿರಮಿಸುವುದಿಲ್ಲ ಎಂದು ರಾಹುಲ್ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT