ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವೈದ್ಯರಿಗೆ ‘ಜೀವ’ಸಂಕಟ!

ಮೂರು ವರ್ಷದಲ್ಲಿ 127 ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ
Last Updated 18 ಮೇ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಮೂರು ವರ್ಷದಲ್ಲಿ127 ವೈದ್ಯರು ರೋಗಿಯ ಕುಟುಂಬದ ಸದಸ್ಯರಿಂದ ಪೆಟ್ಟು ತಿಂದಿದ್ದಾರೆ.

ವೈದ್ಯರು ನಿರ್ಭೀತಿಯಿಂದ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ 2009ರಲ್ಲಿ ವೈದ್ಯರ ರಕ್ಷಣೆಗೆ ರಾಜ್ಯದಲ್ಲಿಪ್ರತ್ಯೇಕ ಕಾನೂನನ್ನು ರೂಪಿಸಲಾಯಿತು. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಜಾರಿ ಮಾಡುಲು ಪೊಲೀಸರಿಗೆ ಅವಕಾಶ ನೀಡಲಾಗಿತ್ತು. ಆದರೆ, ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿರುವುದು ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ತೊಡಕಾಗಿದೆ ಎಂದು ವೈದ್ಯರು ಪ್ರತಿಪಾದಿಸುತ್ತಿದ್ದಾರೆ.

ಇದರ ಪರಿಣಾಮ 2010ರಿಂದ 2019ರ(ಜನವರಿ ಅಂತ್ಯಕ್ಕೆ) ಅವಧಿಯಲ್ಲಿ263 ವೈದ್ಯರು ಹಲ್ಲೆಗೆ ಒಳಗಾಗಿದ್ದಾರೆ.

2016ರ ಬಳಿಕ ಮೂರು ವರ್ಷದಲ್ಲಿ127 ಹಲ್ಲೆ ಪ್ರಕರಣ ನಡೆದಿದೆ.ಶೇ 50ರಷ್ಟು ವೈದ್ಯರ ಮೇಲಿನ ಹಲ್ಲೆ ಪ್ರಕರಣ ತೀವ್ರ ನಿಗಾ ಘಟಕದಲ್ಲಿಯೇ (ಐಸಿಯು) ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

‘ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರೂ ರೋಗಿ ಬದುಕುಳಿಯುವ ಬಗ್ಗೆ ವೈದ್ಯರು ಯಾವುದೇ ರೀತಿಯ ಖಚಿತತೆಯನ್ನು ನೀಡಲು ಸಾಧ್ಯವಿಲ್ಲ. ಇದು ವೈದ್ಯರಿಗೆ ನುಂಗಲಾರದ ತುತ್ತಾಗಿದ್ದು, ಪದೇ ಪದೇ ರಾಜ್ಯದ ಹಲವೆಡೆ ಹಲ್ಲೆ ಪ್ರಕರಣ ನಡೆಯಲು ಪ್ರಮುಖ ಕಾರಣವಾಗಿದೆ. ಅದೇ ರೀತಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಾಗ ಆತನ ಸ್ಥಿತಿಯನ್ನು ವೈದ್ಯರಾದವರು ಸ್ಪಷ್ಟವಾಗಿ ಕುಟುಂಬದ ಸದಸ್ಯರಿಗೆ ತಿಳಿಸಬೇಕು.ಒಂದು ವೇಳೆ ರೋಗಿ ಬದುಕುಳಿಯುವ ಸಾಧ್ಯತೆ ಕಡಿಮೆಯಿದ್ದಲ್ಲಿ ಅದನ್ನುನೇರವಾಗಿ ಹೇಳಿದಲ್ಲಿ ಮುಂದಾಗುವ ಅನಾಹುತವನ್ನು ತಡೆಯಲು ಸಾಧ್ಯ’ ಎಂದುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ದೇಶಪೂರ್ವಕ ಹಲ್ಲೆ: ‘ರೋಗಿಯನ್ನು ಉಳಿಸಲು ವೈದ್ಯರು ಸರ್ವಪ್ರಯತ್ನ ಮಾಡುತ್ತಾರೆ. ಆದರೆ, ವೈದ್ಯರು ಕೂಡ ಸಾಮಾನ್ಯ ಮನುಷ್ಯರೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ರೋಗಿ ಮೃತಪಟ್ಟ ಸಂದರ್ಭದಲ್ಲಿ ಆತನ ಕುಟುಂಬದ ಸದಸ್ಯರುಭಾವನಾತ್ಮಕವಾದರೂ ವೈದ್ಯರ ಮೇಲೆ ಹಲ್ಲೆಗೆ ಮುಂದಾಗುವುದಿಲ್ಲ. ಕೆಲವು ದುಷ್ಕರ್ಮಿಗಳು ಇಂತಹ ಸನ್ನಿವೇಶಕ್ಕಾಗಿಯೇ ಕಾಯುತ್ತಿರುತ್ತಾರೆ. ಉದ್ದೇಶಪೂರ್ವಕವಾಗಿ ಆಸ್ಪತ್ರೆಗೆ ಕಲ್ಲನ್ನು ಎಸೆಯುತ್ತಾರೆ’ ಎಂದುಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟದ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ಹೇಳಿದರು.

‘ಹಲ್ಲೆ ನಡೆಸಿದವರಿಗೆ ಕಾನೂನಿನ ಅಡಿಯಲ್ಲಿ ಏನೆಲ್ಲ ಶಿಕ್ಷೆಯಿದೆ ಎನ್ನುವ ಬಗ್ಗೆ ಆಸ್ಪತ್ರೆಗಳಲ್ಲಿ ಭಿತ್ತಿಪತ್ರ ಹಾಕಿ, ಅರಿವು ಮೂಡಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಹಲ್ಲೆ ನಡೆಸಿದರೆ ಜೈಲು ಶಿಕ್ಷೆ

2009ರ ವೈದ್ಯರ ರಕ್ಷಣೆ ಕಾನೂನಿನ ಅಡಿಯಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಆಸ್ಪತ್ರೆಯ ವಸ್ತುಗಳನ್ನು ನಾಶ ಮಾಡಿದಲ್ಲಿ ಮೂಲ ದರದ ಮೂರು ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ.

ರಾಜಧಾನಿಯಲ್ಲೇ ಅಧಿಕ ಪ್ರಕರಣ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆದಿವೆ. ಇದರಲ್ಲಿ ರಾಜಧಾನಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಮೂರು ವರ್ಷದಲ್ಲಿ 23 ವೈದ್ಯರ ಮೇಲೆ ಹಲ್ಲೆಯಾಗಿದೆ. ಅದೇ ರೀತಿ, ಮಂಗಳೂರು (12), ಶಿವಮೊಗ್ಗ (10), ದಾವಣಗೆರೆ (7), ಹಾಸನ (6), ಚಿಕ್ಕಮಗಳೂರು (5) ಜಿಲ್ಲೆಯಲ್ಲಿ ಅಧಿಕ ಪ್ರಕರಣ ವರದಿಯಾಗಿದೆ. ‌

ಹಲ್ಲೆಗೆ ಕಾರಣ ಏನು?

*ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯದಿರುವುದು‌

*ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಡುವುದು

*ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವುದು

*ಲಕ್ಷಾಂತರ ರೂಪಾಯಿ ವೆಚ್ಚ ಪಾವತಿಸಿದರೂ ರೋಗಿ ಗುಣಮುಖನಾಗದಿರುವುದು

**

ಹಲ್ಲೆ ಮಾಡಿದವರನ್ನು ಬಂಧಿಸಿ ಮೂರು ವರ್ಷ ಜೈಲಿಗೆ ಕಳುಹಿಸಬಹುದು. ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಪೊಲೀಸ್ ಠಾಣೆಯಲ್ಲಿ ವೈದ್ಯರು ದೂರು ನೀಡಬೇಕು

– ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ, ಆರೋಗ್ಯ– ಕುಟುಂಬ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT