ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ತರಿಸಿದ ದೆಹಲಿ: ತಬ್ಲೀಗ್‌ ಕಚೇರಿಗೆ ಬೀಗ

Last Updated 31 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ದೆಹಲಿಯ ನಿಜಾಮುದ್ದೀನ್‌ ಪ್ರದೇಶ ಈಗ ಕೋವಿಡ್‌–19ರಿಂದಾಗಿ ತತ್ತರಿಸಿದೆ. ಸೋಂಕಿತರ ಸಂಖ್ಯೆ ದಿನವೂ ಹೆಚ್ಚುತ್ತಿರುವ ಕಾರಣಇಲ್ಲಿರುವ ತಬ್ಲೀಗ್‌ ಜಮಾತ್‌ನ ಕೇಂದ್ರ ಕಚೇರಿಯನ್ನು ಮಂಗಳವಾರ ಬಂದ್‌ ಮಾಡಲಾಗಿದೆ.

ಇಲ್ಲಿದ್ದ 1,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ 441 ಜನರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಇಂತಹ ಆತಂಕದ ಬೆಳವಣಿಗೆ ನಡುವೆ, ಈ ಮಸೀದಿಗೆ ಈ ತಿಂಗಳು ವಿವಿಧ ರಾಜ್ಯಗಳ ಜನರು ಭೇಟಿ ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದವರನ್ನು ಪತ್ತೆ ಹಚ್ಚುವುದೇ ಕೆಲವು ರಾಜ್ಯಗಳ ಪಾಲಿಗೆ ಸವಾಲಾಗಿದೆ.

ತಬ್ಲೀಗ್‌ ಜಮಾತ್‌ನಲ್ಲಿರುವ ಅಲಾಮಿ ಮರ್ಕಜ್‌ ಬಂಗ್ಲೇವಾಲಿ ಮಸೀದಿಯಲ್ಲಿ ಮಾರ್ಚ್‌ 13ರಿಂದ 15ರವರೆಗೆ ನಡೆದ ಕಾರ್ಯಕ್ರಮದಲ್ಲಿ ಮಲೇಷ್ಯಾ, ಇಂಡೊನೇಷ್ಯಾ, ಇಂಗ್ಲೆಂಡ್‌, ಕುವೈತ್‌, ಸೌದಿ ಅರೇಬಿಯಾ ಸೇರಿ ವಿವಿಧ ದೇಶಗಳ ಜನರು ಭಾಗವಹಿಸಿದ್ದರು. ಭಾರತದ ವಿವಿಧ ರಾಜ್ಯಗಳ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡಿದ್ದರು. ಇಲ್ಲಿಗೆ ಭೇಟಿ ನೀಡಿದ್ದ ದೆಹಲಿ ನಿವಾಸಿಗಳ ಪೈಕಿ 24 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

10 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ತೆಲಂಗಾಣದ 6, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಮೃತಪಟ್ಟಿದ್ದು, ಇವರೆಲ್ಲಾ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ತುರ್ತು ಸಭೆ: ಈ ಬೆಳವಣಿಗೆ ಬೆನ್ನಿಗೇ ಮುಖ್ಮಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಉನ್ನತ ಮಟ್ಟದ ತುರ್ತು ಸಭೆ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದರು. ಮಸೀದಿ ಹಾಗೂ ಅದರ ಬಳಿ ಇರುವ ಆರು ಅಂತಸ್ತಿನ ವಸತಿಗೃಹ ಇರುವ ಇಡೀ ಪ್ರದೇಶದಲ್ಲಿ ನಾಕಾಬಂದಿ ಹೇರಲಾಗಿದ್ದು, ಪೊಲೀಸ್‌ ಪಹರೆ ಹಾಕಲಾಗಿದೆ.

ಲಾಕ್‌ಡೌನ್‌ ಸಂಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಪ್ರಕರಣ ದಾಖಲು:ಸಾರ್ವಜನಿಕ ಸಭೆಗಳನ್ನು ನಡೆಸಬಾರದು ಮತ್ತು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ನೀಡಿದ್ದ ಆದೇಶವನ್ನು ಉಲ್ಲಂಘಿಸಿದೆ ಎಂಬ ಆರೋಪದಲ್ಲಿ ನಿಜಾಮುದ್ದೀನ್‌ನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೌಲಾನಾ ಸಾದ್‌ ಅವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದೇ 22ರಂದು ‘ಜನತಾ ಕರ್ಫ್ಯೂ’ ಘೋಷಿಸಿದ್ದರು. ಅಂದೇ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಆದರೆ, ಭಾರಿ ಸಂಖ್ಯೆಯಲ್ಲಿ ಜನರು ನಿಜಾಮುದ್ದೀನ್‌ನ ಮರ್ಕಜ್‌ನಲ್ಲಿ ಇದ್ದರು. ಸಾರಿಗೆ ಸೇವೆ ಬಂದ್‌ ಆದ ಕಾರಣಕ್ಕೆ ಅವರು ಹೊರ ಹೋಗುವುದು ಸಾಧ್ಯವಾಗಲಿಲ್ಲ ಎಂದು ಮರ್ಕಜ್‌ ನಿಜಾಮುದ್ದೀನ್‌ ಹೇಳಿದೆ.

***
* ದೇಶದಲ್ಲಿ ಔಷಧ ಕೊರತೆ ಇಲ್ಲ. ಔಷಧ ಪೂರೈಕೆಯ ಮೇಲೆ ಔಷಧ ಇಲಾಖೆಯು ನಿರಂತರ ನಿಗಾ ಇರಿಸಿದೆ. ಇತರ ಇಲಾಖೆಗಳು ಮತ್ತು ರಾಜ್ಯಗಳ ಸಹಯೋಗದಲ್ಲಿ ಔಷಧ ವಿತರಣೆ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ

* ನಗರಗಳಿಂದ ತಮ್ಮ ಊರುಗಳಿಗೆ ಹೋಗುವ ಹತ್ತು ಮಂದಿಯಲ್ಲಿ ಮೂವರಲ್ಲಿ ಸೋಂಕು ಇರುವ ಸಾಧ್ಯತೆ ಇದೆ. ಹಾಗಾಗಿ, ನಗರಗಳಿಂದ ಹಳ್ಳಿಯ ಕಡೆಗಿನ ವಲಸೆಗೆ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಕೋರಿದೆ

* ಪತ್ತನಂತಿಟ್ಟ ನಗರದ ರಣ್ಣಿ ಎಂಬಲ್ಲಿನ ಥಾಮಸ್‌ (93) ಮತ್ತು ಮರಿಯಮ್ಮ (88) ದಂಪತಿಯು ಕೋವಿಡ್‌–19 ಬಾಧೆಯಿಂದ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ ಹಿರಿಯರಿಗೆ ಅಪಾಯ ಹೆಚ್ಚು ಎಂದು ಹೇಳಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಇದೊಂದು ಆಶಾಕಿರಣವಾಗಿದೆ

* ಇಟಲಿಯಲ್ಲಿ ಸಾವಿನ ಸಂಖ್ಯೆ 12,428ಕ್ಕೆ ಏರಿಕೆಯಾಗಿದೆ. ಸ್ಪೇನ್‌ನಲ್ಲಿ 8,269 ಮಂದಿ ಸತ್ತಿದ್ದಾರೆ.

* ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ಕಾಸರಗೋಡು ಜಿಲ್ಲೆಗೆ ವಿಶೇಷ ಕ್ರಿಯಾ ಯೋಜನೆಯನ್ನು ಕೇರಳ ಸರ್ಕಾರ ರೂಪಿಸಿದೆ. ಕಾಸರಗೋಡಿನಲ್ಲಿ ಮಂಗಳವಾರ ಮತ್ತೆ ಎರಡು ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 99ಕ್ಕೆ ಏರಿದೆ

* ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವ ನೊಯ್ಡಾದಲ್ಲಿ ಸೋಂಕು ಹರಡುವಿಕೆ ತಡೆಯ ಹೊಣೆಗಾರಿಕೆಯನ್ನು ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT